– ಡಿಜಿಟಲ್ ಭಾರತ್ ನಿಧಿಯಾಗಿ ಯುಎಸ್‌ಒಎಫ್ ಪರಿವರ್ತನೆ
– ಹೊಸ ಯೋಜನೆಯಿಂದ ಯಾರಿಗೆ ಪ್ರಯೋಜನ?
ಇದು ಡಿಜಿಟಲ್ ಯುಗ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗುತ್ತಿರುವ ಕಾಲದಲ್ಲಿ ನಾವಿದ್ದೇವೆ. ಡಿಜಿಟಲ್ ತಂತ್ರಜ್ಞಾನವಿಲ್ಲದೇ ಈ ಜಗತ್ತನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಪರಸ್ಪರ ಸಂಪರ್ಕ, ವಾಣಿಜ್ಯ, ವಿಜ್ಞಾನ-ತಂತ್ರಜ್ಞಾನ, ವೈದ್ಯಕೀಯ ಎಲ್ಲಾ ರಂಗವೂ ಈಗ ಡಿಜಿಟಲೀಕರಣ ಆಗಿದೆ. ಸುಧಾರಿತ ಕೃತಕ ಬುದ್ದಿಮತ್ತೆಯಿಂದ ಈ ಕ್ಷೇತ್ರ ಸಾಕಷ್ಟು ಬೆಳವಣಿಗೆ ಕಂಡಿದೆ.
Advertisement
ಡಿಜಿಟಲ್ ವ್ಯವಸ್ಥೆಯನ್ನೇ ಕೇಂದ್ರವಾಗಿಟ್ಟುಕೊಂಡು ಸಮಾಜದಲ್ಲಿ ಸಾಕಷ್ಟು ಬದಲಾವಣೆಗಳಾಗಿರುವುದನ್ನು ನಾವು ಗಮನಿಸಬಹುದು. ಈ ವ್ಯವಸ್ಥೆಯಿಂದಾಗಿ ನಗರ ಪ್ರದೇಶಗಳಲ್ಲಿ ಕ್ರಾಂತಿಕಾರಿ ಬೆಳವಣೆಗೆಗಳಾಗಿವೆ. ಆದರೆ ಗ್ರಾಮೀಣ ಭಾಗದಲ್ಲಿ ಕುಂಠಿತಗತಿಯಲ್ಲಿ ಸಾಗುತ್ತಿದೆ. ಗ್ರಾಮೀಣ ಭಾಗದ ಜನರು ಸಹ ಡಿಜಿಟಲ್ ವ್ಯವಸ್ಥೆಯಲ್ಲಿನ ಅಭಿವೃದ್ಧಿಯ ಫಲಾನುಭವಿಗಳಾಗಬೇಕು ಎಂದು ಸರ್ಕಾರಗಳು ಹಲವಾರು ಕ್ರಮಗಳನ್ನು ಕೈಗೊಂಡಿವೆ. ಆದರೆ ಅಷ್ಟಾಗಿ ಯಶಕಂಡಂತೆ ತೋರುತ್ತಿಲ್ಲ. ಈ ಸೋಲಿಗೆ ಹಲವಾರು ಕಾರಣಗಳಿವೆ. ಗ್ರಾಮೀಣ ಭಾಗಗಳಲ್ಲಿ ಡಿಜಿಟಲ್ ತಂತ್ರಜ್ಞಾನ ಕ್ಷೇತ್ರವನ್ನು ಮತ್ತಷ್ಟು ಸುಧಾರಿಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಅದೇನು ಅಂತೀರ? ಬನ್ನಿ ತಿಳಿಯೋಣ… ಇದನ್ನೂ ಓದಿ: ಹಿಮಾಚಲದಲ್ಲಿ ಆರ್ಥಿಕ ಸಂಕಷ್ಟ – ತೆರಿಗೆ ಪಾವತಿಸೋ ಮಂದಿಗೆ ಉಚಿತ ವಿದ್ಯುತ್ ಕಟ್
Advertisement
Advertisement
ದೂರದ ಊರಿನಲ್ಲಿರುವ ಸಂಬಂಧಿಕರನ್ನು ಸಂಪರ್ಕಿಸಲು ಮತ್ತು ಜಗತ್ತಿನ ಮೂಲೆ ಮೂಲೆಯಲ್ಲಿ ಏನೇನಾಗುತ್ತಿದೆ ಎಂಬುದನ್ನು ತಿಳಿಯಲು ದೂರ ಸಂಪರ್ಕ ವ್ಯವಸ್ಥೆ ಮತ್ತು ತಂತ್ರಜ್ಞಾನ ಅತ್ಯವಶ್ಯಕ. ಈ ವ್ಯವಸ್ಥೆ ಗ್ರಾಮೀಣ ಭಾಗಕ್ಕೆ ಮರೀಚಿಕೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಟೆಲಿಕಾಂ ಸಂಪರ್ಕವನ್ನು ಸುಧಾರಿಸುವ ಪ್ರಯತ್ನದ ಭಾಗವಾಗಿ ಕೇಂದ್ರ ಸರ್ಕಾರವು ಡಿಜಿಟಲ್ ಭಾರತ್ ನಿಧಿ ಎಂಬ ಹೊಸ ಯೋಜನೆಯನ್ನು ಕೈಗೊಂಡಿದೆ. ಭಾರತದ ದೂರಸಂಪರ್ಕ ಇಲಾಖೆ (DoT) ಜುಲೈ 4 ರಂದು ಡಿಜಿಟಲ್ ಭಾರತ್ ನಿಧಿ (Digital Bharat Nidhi) ಗಾಗಿ ಕರಡು ನಿಯಮಗಳನ್ನು ಬಿಡುಗಡೆ ಮಾಡಿದೆ. ವಿಶೇಷವಾಗಿ ಗ್ರಾಮೀಣ, ದೂರಸ್ಥ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ಇಂಟರ್ನೆಟ್ ವ್ಯವಸ್ಥೆ ಸುಧಾರಿಸುವ ಮತ್ತು ವಿಸ್ತರಿಸುವ ಗುರಿ ಹೊಂದಲಾಗಿದೆ. ಈ ಯೋಜನೆಯು ಪ್ರಸ್ತುತ ಚಾಲ್ತಿಯಲ್ಲಿರುವ ಯುನಿವರ್ಸಲ್ ಸರ್ವಿಸ್ ಆಬ್ಲಿಗೇಶನ್ ಫಂಡ್ (USOF) ಅನ್ನು ಬದಲಾಯಿಸುತ್ತದೆ. ಫೋನ್ ಸೇವೆಗಳನ್ನು ಹೆಚ್ಚು ಸುಲಭವಾಗಿ ಮತ್ತು ವಿಶಾಲವಾಗಿಸಲು ಸಹಾಯ ಮಾಡುತ್ತದೆ.
Advertisement
ಯುಎಸ್‌ಒಎಫ್ ಎಂದರೇನು?
ದೇಶದ ಹೆಚ್ಚು ಆದಾಯವಿಲ್ಲದ ಭಾಗಗಳಲ್ಲಿ ಟೆಲಿಕಾಂ ಸೇವೆಗಳನ್ನು ಸುಧಾರಿಸಲು USOF ಅನ್ನು 2003 ರಲ್ಲಿ ರಚಿಸಲಾಗಿದೆ. ಇದು ಟೆಲಿಕಾಂ ಆಪರೇಟರ್‌ಗಳ ಹೊಂದಾಣಿಕೆಯ ಒಟ್ಟು ಆದಾಯದ (AGR) ಮೇಲೆ 5% ತೆರಿಗೆಯಿಂದ ಹಣವನ್ನು ಪಡೆಯುತ್ತದೆ. ಇದು ಹೆಚ್ಚಿನ ಹಣವನ್ನು ತಂದರೂ, ನಿಧಿಯು ಸಾಕಷ್ಟು ಬಳಕೆಯಾಗಿಲ್ಲ ಎಂಬ ಟೀಕೆಗಳು ಆಗಾಗ್ಗೆ ಕೇಳಿಬರುತ್ತಿತ್ತು. 2017 ಮತ್ತು 2022 ರ ನಡುವೆ ಪಡೆದ 41,740 ಕೋಟಿ ರೂ.ಗಳಲ್ಲಿ ಸುಮಾರು 72% ಮಾತ್ರ ಬಳಸಿದ್ದು, ಟೀಕೆಗಳಿಗೆ ತಾಜಾ ಉದಾಹರಣೆಯಾಗಿದೆ. ಇದನ್ನೂ ಓದಿ: ಬಿಜೆಪಿಗೆ ನಿತಿನ್ ಗಡ್ಕರಿ ಎಚ್ಚರಿಕೆ
ಡಿಜಿಟಲ್ ಭಾರತ್ ನಿಧಿಗೆ ಪರಿವರ್ತನೆ!
ದೂರ ಸಂಪರ್ಕ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಕೇಂದ್ರ ಸರ್ಕಾರ ಯೋಜಿಸಿದೆ. ಹೀಗಾಗಿ ಯುಎಸ್‌ಒಎಫ್ ನಿಂದ ಡಿಜಿಟಲ್ ಭಾರತ್ ನಿಧಿಗೆ ಬದಲಾಯಿಸುತ್ತಿದೆ. ಆ ಮೂಲಕ ಹಿಂದಿನ ಸಮಸ್ಯೆಗಳನ್ನು ಸರಿಪಡಿಸಲು ಮತ್ತು ಸ್ವತ್ತುಗಳನ್ನು ಮತ್ತಷ್ಟು ವಿಸ್ತರಿಸಲು ಸರ್ಕಾರ ಆಶಿಸಿದೆ. ಇದರ ಜೊತೆಗೆ ಗ್ರಾಮೀಣ ಟೆಲಿಕಾಂ ಸೇವೆಗಳನ್ನು ಸುಧಾರಿಸಲು ಒತ್ತು ನೀಡಿದೆ. ದೂರಸಂಪರ್ಕ ತಂತ್ರಜ್ಞಾನಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ, ಮಹಿಳೆಯರು ಮತ್ತು ವಿಕಲಚೇತನರಂತಹ ಹಿಂದುಳಿದ ವರ್ಗಗಳಿಗೆ ಸಹಾಯ ಮಾಡುವ ದೂರಸಂಪರ್ಕ ಸೇವೆಗಳಿಗೆ ಹಣಕಾಸು ಒದಗಿಸುವುದು, ಟೆಲಿಕಾಂ ಕ್ಷೇತ್ರವನ್ನು ದೇಶದ ನೂತನ ತಂತ್ರಜ್ಞಾನಗಳಿಗೆ ಮುಕ್ತಗೊಳಿಸುವುದು ಸೇರಿದಂತೆ ಹಲವು ಕ್ರಮಗಳಿಗೆ ಸರ್ಕಾರ ಮುಂದಾಗಿದೆ.
ಇದು ಏಕೆ ಬೇಕು?
ದೂರದ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಟೆಲಿಕಾಂ ನೆಟ್‌ವರ್ಕ್‌ಗಳನ್ನು ವಿಸ್ತರಿಸಲು ಹಣವನ್ನು ಬಳಸುವುದು ಯೋಜನೆ ಪ್ರಮುಖ ಉದ್ದೇಶವಾಗಿದೆ. ಈ ಪ್ರದೇಶಗಳು ಹೆಚ್ಚಿನ ಆದಾಯವನ್ನು ಗಳಿಸದ ಕಾರಣ ಖಾಸಗಿ ಕಂಪನಿಗಳು ಸೇವೆಗಳನ್ನು ನೀಡಲು ಹಿಂದೇಟು ಹಾಕುತ್ತಿವೆ. ಹೀಗಾಗಿ ಹೊಸ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ಡಿಜಿಟಲ್ ಭಾರತ್ ನಿಧಿಯು ಯುಎಸ್‌ಒಎಫ್‌ಗಿಂತ ವಿಶಾಲ ವ್ಯಾಪ್ತಿಯನ್ನು ಹೊಂದಿದೆ.
ಡಿಜಿಟಲ್ ಭಾರತ್ ನಿಧಿ ಎಂದರೇನು?
ಗ್ರಾಮೀಣ ಪ್ರದೇಶಗಳಲ್ಲಿ ಟೆಲಿಕಾಂ ಸೇವೆ ಒದಗಿಸುವ ಗುರಿಯನ್ನು ಡಿಜಿಟಲ್ ಭಾರತ್ ನಿಧಿ ಹೊಂದಿದೆ. ಇದು ಟೆಲಿಕಾಂ ತಂತ್ರಜ್ಞಾನಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಹಣವನ್ನು ನೀಡುತ್ತದೆ. ಪೈಲಟ್ ಯೋಜನೆಗಳನ್ನು ಬೆಂಬಲಿಸುತ್ತದೆ. ನವೀನ ಟೆಲಿಕಾಂ ಸೇವೆಗಳನ್ನು ಪರಿಚಯಿಸುವ ಕೆಲಸ ಮಾಡುತ್ತದೆ. ಇದನ್ನೂ ಓದಿ: ಯಾತ್ರಾರ್ಥಿಗಳಿದ್ದ ಬಸ್ ಹಿಂದಿನಿಂದ ಟ್ರಕ್‌ಗೆ ಡಿಕ್ಕಿ – ಮೂವರು ಸಾವು, 14 ಮಂದಿ ಗಂಭೀರ
ಯೋಜನೆ ಏನು?
ಟೆಲಿಕಾಂ ಕಂಪನಿಗಳು ಡಿಜಿಟಲ್ ಭಾರತ್ ನಿಧಿಗೆ ನೀಡುವ ಕೊಡುಗೆಗಳನ್ನು ಮೊದಲು ಕನ್ಸಾಲಿಡೇಟೆಡ್ ಫಂಡ್ ಆಫ್ ಇಂಡಿಯಾ (ಸಿಎಫ್‌ಐ)ದಲ್ಲಿ ಸಂಗ್ರಹಿಸಲಾಗುತ್ತದೆ. ಸಾಲಗಳು ಮತ್ತು ಮರುಪಾವತಿಯಿಂದ ಬಂದ ಹಣವನ್ನೂ ಒಳಗೊಂಡಂತೆ ಎಲ್ಲಾ ಸರ್ಕಾರಿ ಆದಾಯವನ್ನು ಸಿಎಫ್‌ಐ ಒಳಗೊಂಡಿದೆ. ಈ ಹಣವನ್ನು ಸರ್ಕಾರ ತನ್ನ ಖರ್ಚಿಗೆ ಬಳಸಿಕೊಳ್ಳುತ್ತದೆ. ಸಂಗ್ರಹವಾದ ಹಣವನ್ನು ಸರ್ಕಾರವು ಕಾಲಕಾಲಕ್ಕೆ ಡಿಜಿಟಲ್ ಭಾರತ್ ನಿಧಿಗೆ ವರ್ಗಾಯಿಸುತ್ತದೆ. ಈ ಹಣವನ್ನು ವಿವಿಧ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.
* ಹೊಸ ಟೆಲಿಕಾಂ ಸೇವೆಗಳು, ತಂತ್ರಜ್ಞಾನಗಳು ಮತ್ತು ಸರಕುಗಳ ಸಂಗ್ರಹಕ್ಕೆ ವಿನಿಯೋಗ.
* ಪೈಲಟ್ ಯೋಜನೆಗಳಿಗೆ ಬೆಂಬಲ.
* ಸಂಪರ್ಕವನ್ನು ಸುಧಾರಿಸಲು ಸಲಹಾ ಸೇವೆಗಳನ್ನು ಒದಗಿಸುವುದು.
* ಹೊಸ ದೂರಸಂಪರ್ಕ ಸೇವೆಗಳು, ತಂತ್ರಜ್ಞಾನಗಳು ಮತ್ತು ಪ್ರಾಡಕ್ಟ್ಸ್‌ಗಳನ್ನು ಪರಿಚಯಿಸುವುದು.
* ನಿರ್ಲಕ್ಷಿತ ನಗರ, ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ದೂರಸಂಪರ್ಕ ಸೇವೆಗಳ ಲಭ್ಯತೆ ಸುಧಾರಿಸುವುದು.
ಹೊಸ ಯೋಜನೆಯಿಂದ ಯಾರಿಗೆ ಪ್ರಯೋಜನ?
ಮುಂದಿನ ಪೀಳಿಗೆಗೆ ಸುಧಾರಿತ ದೂರಸಂಪರ್ಕ ತಂತ್ರಜ್ಞಾನಗಳನ್ನು ಪರಿಚಯಿಸುವುದು ಯೋಜನೆಯ ಮುಖ್ಯ ಉದ್ದೇಶ. ದೂರ ಸಂಪರ್ಕ ವ್ಯವಸ್ಥೆಯಿಂದ ಗ್ರಾಮೀಣ ಪ್ರದೇಶಗಳಿಗೆ ಪ್ರಯೋಜನವಾಗುವಂತಹ ಯೋಜನೆಗಳನ್ನು ರೂಪಿಸಲಾಗುವುದು. ನಿಯಂತ್ರಕ ಸ್ಯಾಂಡ್‌ಬಾಕ್ಸ್‌ಗಳನ್ನು ರಚಿಸುವುದು ಸೇರಿದಂತೆ ನಾವೀನ್ಯತೆ, ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಸ್ಥಳೀಯ ತಂತ್ರಜ್ಞಾನಗಳ ವಾಣಿಜ್ಯೀಕರಣವನ್ನು ಉತ್ತೇಜಿಸುವ ಗುರಿಯನ್ನು ಡಿಜಿಟಲ್ ಭಾರತ್ ನಿಧಿ ಯೋಜನೆ ಹೊಂದಿದೆ. ದೂರಸಂಪರ್ಕ ವಲಯದಲ್ಲಿ ಟೆಲಿಕಾಂ ಉಪಕರಣಗಳ ತಯಾರಿಕೆ ಸೇರಿದಂತೆ ಸ್ಟಾರ್ಟ್-ಅಪ್‌ಗಳನ್ನು ಉತ್ತೇಜಿಸುವತ್ತ ಗಮನಹರಿಸುತ್ತದೆ. ಸುಧಾರಿತ ದೂರಸಂಪರ್ಕ ಮೂಲಸೌಕರ್ಯ ಮತ್ತು ಸೇವೆಗಳ ಪ್ರಯೋಜನಗಳು ಮಹಿಳೆಯರು, ವಿಕಲಚೇತನರು, ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ಗುಂಪುಗಳಿಗೆ ತಲುಪುವುದನ್ನು ಇದು ಖಚಿತಪಡಿಸುತ್ತದೆ.