– ಎಫ್‌ಐಆರ್ ವಿವರ ನೀಡಲು ಎಲ್ಲಾ ರಾಜ್ಯಗಳಿಗೆ ನಿರ್ದೇಶನ
ನವದೆಹಲಿ: ದೇಶಾದ್ಯಂತ ಹೆಚ್ಚುತ್ತಿರುವ ʻಡಿಜಿಟಲ್ ಅರೆಸ್ಟ್ʼ (Digital Arrest) ವಂಚನೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ (Supreme Court), ಈ ಪ್ರಕರಣಗಳ ತನಿಖೆಯನ್ನ ಕೇಂದ್ರೀಯ ತನಿಖಾ ದಳಕ್ಕೆ (CBI) ವಹಿಸುವ ಕುರಿತು ಚಿಂತನೆ ನಡೆಸಿದೆ.
ನ್ಯಾಯಾಧೀಶರು ಮತ್ತು ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ನಕಲಿ ದಾಖಲೆಗಳನ್ನ ಬಳಸಿ ವಂಚಕರು ನಡೆಸುತ್ತಿರುವ ಈ ಕೃತ್ಯಗಳ ಬಗ್ಗೆ ಸಮಗ್ರ ತನಿಖೆಯ ಅಗತ್ಯವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಇದರೊಂದಿಗೆ ಡಿಜಿಟಲ್ ಅರೆಸ್ಟ್ ಪ್ರಕರಣಗಳಿಗೆ ಸಂಬಂಧ ದಾಖಲಾಗಿರುವ ಎಫ್‌ಐಆರ್‌ಗಳ ವಿವರ ನೀಡುವಂತೆ ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡಿದೆ.
ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾ. ಸೂರ್ಯ ಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠವು ತನಿಖೆಯನ್ನ ಕೇಂದ್ರ ತನಿಖಾ ದಳಕ್ಕೆ (CBI) ಹಸ್ತಾಂತರಿಸುವ ಬಗ್ಗೆಯೂ ಚಿಂತನೆ ನಡೆಸಿದೆ. ಈ ಬಗ್ಗೆ ದೇಶಾದ್ಯಂತದ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನ ನಿರ್ವಹಿಸಲು ಸಿಬಿಐಗೆ ಸಂಪನ್ಮೂಲಗಳಿವೆಯೇ ಎಂದು ಪ್ರಶ್ನಿಸಿತು. ಆಗ ಸಿಬಿಐ ಈಗಾಗಲೇ ಕೆಲವು ಪ್ರಕರಣಗಳನ್ನು ನಿಭಾಯಿಸುತ್ತಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಮೂರ್ತಿ ಬಾಗ್ಚಿ, ಎಲ್ಲಾ ಪ್ರಕರಣಗಳನ್ನ ನಿರ್ವಹಿಸಲು ಸಿಬಿಐ ಬಳಿ ಅಗತ್ಯ ಸಂಪನ್ಮೂಲಗಳಿವೆಯೇ ಪರಿಶೀಲಿಸುವಂತೆ ಸೂಚಿಸಿದರು.
ಸೈಬರ್ ಅಪರಾಧದಲ್ಲಿ (Cyber Crime) ಅವರಿಗೆ ತಜ್ಞರು ಬೇಕಾದರೆ ನಮಗೆ ಹೇಳಬಹುದು ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದರು. ಇದಕ್ಕೆ ಉತ್ತರಿಸಿದ ತುಷಾರ್ ಮೆಹ್ತಾ, ಸಿಬಿಐ ಗೃಹ ಸಚಿವಾಲಯದ ಸೈಬರ್ ಅಪರಾಧ ವಿಭಾಗದ ಸಹಾಯ ಪಡೆಯುತ್ತಿದೆ ಎಂದು ವಿವರಿಸಿದರು.
ಅಂತಿಮವಾಗಿ ಏಕರೂಪದ ತನಿಖೆ ನಡೆಯುವಂತೆ ನೋಡಿಕೊಳ್ಳಲು ನಾವು ಇಂದು ನಿರ್ದೇಶನಗಳನ್ನು ನೀಡುತ್ತಿಲ್ಲ. ನಾವು ಎಲ್ಲ ರಾಜ್ಯಗಳಿಗೆ ನೋಟಿಸ್ ನೀಡುತ್ತಿದ್ದೇವೆ ಎಂದು ನ್ಯಾಯಮೂರ್ತಿ ಕಾಂತ್ ಹೇಳಿದರು. ದೇಶಾದ್ಯಂತ ಹೆಚ್ಚುತ್ತಿರುವ ಡಿಜಿಟಲ್ ಅರೆಸ್ಟ್ ಹಗರಣಗಳ ಬೆದರಿಕೆಯನ್ನ ಪರಿಹರಿಸಲು ಅಕ್ಟೋಬರ್ 17 ರಂದು ನ್ಯಾಯಾಲಯವು ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡಿದೆ.
ಡಿಜಿಟಲ್ ಅರೆಸ್ಟ್ ಎಂದರೇನು?
ಡಿಜಿಟಲ್ ಅರೆಸ್ಟ್ ಸೈಬರ್ ವಂಚನೆಯ ಒಂದು ವಿಧಾನ. ಇದರಲ್ಲಿ ವಂಚಕರು ಕಾನೂನು ಅಧಿಕಾರಿಗಳಂತೆ ಪೋಸ್ ನೀಡುತ್ತಾರೆ. ಆಡಿಯೊ ಅಥವಾ ವೀಡಿಯೊ ಕರೆಗಳಲ್ಲಿ ಜನರನ್ನು ಬೆದರಿಸುತ್ತಾರೆ. ಬಂಧನದ ಸುಳ್ಳು ನೆಪದಲ್ಲಿ ಡಿಜಿಟಲ್ ಒತ್ತೆಯಾಳುಗಳನ್ನಾಗಿ ಮಾಡಿ ಹಣ ಪೀಕುತ್ತಾರೆ.



