ಮಡಿಕೇರಿ: ಋತುಚಕ್ರಗಳ ಕಾಲ ಘಟ್ಟಕ್ಕೆ ಪ್ರಕೃತಿಯಲ್ಲಿ ವಿಭಿನ್ನವಾದ ಚಿತ್ತಾರಗಳನ್ನು ಕಾಣಬಹುದು. ಇದೀಗಾ ಜಿಲ್ಲೆಯಲ್ಲಿ ಮಳೆಯಾಗಿರುವುದರಿಂದ ಕಾಡಿನಲ್ಲಿ ಅಣಬೆಗಳ ಚಿತ್ತಾರ ಮೂಡುತ್ತಿದೆ.
ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಮುಂಗಾರು ಮಳೆಯಿಂದ ಹದವಾದ ಮರಗಳಲ್ಲಿ ಮರ ಅಣಬೆಗಳು ರಂಗು ಬೀರುತ್ತಿವೆ. ಮಳೆಗಾಲದಲ್ಲಿ ಅರಳುವ ಹಲವು ವಿಧದ ಅಣಬೆಗಳು ಮೂಡುತ್ತವೆ. ಮಳೆಗಾಲ ಪ್ರಾರಂಭಕ್ಕೂ ಮೊದಲು ತೇವದ ನೆಲದಿಂದ ಅಪರೂಪದ ಅಣಬೆಗಳು ಮೂಡಿದರೆ, ಮಳೆಗಾಲದಲ್ಲಿ ಕಾಡುಗಳಲ್ಲಿ ಓಡಾಡಿದವರಿಗೆಲ್ಲ ಮತ್ತಷ್ಟು ಅಣಬೆಗಳು ಕಾಣಸಿಗುತ್ತವೆ.
ದಟ್ಟ ಹಸಿರಿನ ಗಿಡಮರಗಳ ನಡುವೆ, ಒಣಗಿದ ಮರಗಳ ಕಾಂಡಗಳ ಮೇಲೆ ಬಿಳಿ, ಹಳದಿ, ಕಂದು ಬಣ್ಣದ ಅಣಬೆಗಳು ಅರಳಿವೆ. ಕಾಫಿಯ ತೋಟಗಳಲ್ಲಿ ಕಾಣಸಿಗುವ ಅಣಬೆಗಳ ಚಿತ್ತಾರ ಲೋಕ ಕಣ್ಮನ ಸೆಳೆಯುತ್ತವೆ. ಮಳೆಗಾಲದ ಅಣಬೆಗಳಿಗೆ ಹಲವು ಬಣ್ಣ ಆಕಾರ ಹಾಗೂ ರೂಪಗಳಿವೆ. ತೇವದ ಮಣ್ಣಿನಲ್ಲಿ ಅಲ್ಲಲ್ಲಿ ಅಪರೂಪದ ಅಣಬೆಗಳು ಕಾಣ ಸಿಗುತ್ತವೆ. ಕೆಲವು ತರಕಾರಿಯಾಗಿ ಬಳಕೆಯಾದರೆ ಮತ್ತೆ ಕೆಲವು ಆಕರ್ಷಣೆಯಿಂದ ಕೂಡಿರುತ್ತವೆ.
ನೆಲದ ಮೇಲಿನ ಅಣಬೆಗಳಿಗಿಂತ ಹೆಚ್ಚು ಆಕರ್ಷಕವಾಗಿರುವುದು ಮರ ಅಣಬೆಗಳು. ಮುರಿದು ಬಿದ್ದ ಮರ, ನೆನೆದ ಕಟ್ಟಿಗೆ ತುಂಡಿನ ಮೇಲೆ ಈ ಮರ ಅಣಬೆಗಳು ಕಾಣಸಿಗುತ್ತವೆ. ಮಡಿಕೇರಿ ತಾಲೂಕಿನ ನಾಪೋಕ್ಲು ವ್ಯಾಪ್ತಿಯಲ್ಲಿ ಮಳೆ ಸುರಿದ ಸಂದರ್ಭದಲ್ಲಿ ಜೀವಕಳೆ ತರುವ ಹಲವು ಅಣಬೆಗಳು ಮನಸೂರೆಗೊಂಡವು.
ಮಳೆಗಾಲದ ಅಣಬೆಗಳು ಕೊಳೆತು ನಾರುವ ವಸ್ತುಗಳ ಮೇಲೆ, ಮರಗಳ ಕಾಂಡಗಳ ಮೇಲೆ, ಸೆಗಣಿಯ ಮೇಲೆ, ಕೊಳೆತ ಎಲೆಗಳ ಮೇಲೆ ಹೀಗೆ ಹತ್ತು ಹಲವು ಸ್ಥಳಗಳಲ್ಲಿ ದಿಢೀರನೇ ಪ್ರತ್ಯಕ್ಷವಾಗುತ್ತವೆ.