ಬಾಗಲಕೋಟೆ: ಕಳ್ಳರು ಅಂದ್ರೆ ದುಡ್ಡು, ಚಿನ್ನಾಭರಣ, ಹಣ ಕದಿಯುತ್ತಾರೆಂಬುದು ಎಲ್ಲರಿಗೂ ಗೊತ್ತಿರೋ ವಿಚಾರ. ಆದರೆ ಬಾಗಲಕೋಟೆ ಜಿಲ್ಲೆಯಲ್ಲೊಬ್ಬ ಆಸಾಮಿಗೆ ತಿಂಡಿ, ತಿನಿಸು ಹಾಗೂ ಬಟ್ಟೆ, ಬರೆಗಳೇ ಟಾರ್ಗೆಟ್. ಈ ವಿಚಿತ್ರ ಕಳ್ಳ ಕಳೆದೊಂದು ತಿಂಗಳಿನಿಂದ ಅಡುಗೆ ಮನೆಗೆ ನುಗ್ಗಿ ತಿಂಡಿ ತಿನಿಸು, ಮನೆಯ ಹೊರಗಡೆಯ ಬಟ್ಟೆ ಉಡುಪುಗಳನ್ನ ಕದಿಯುತ್ತಿದ್ದಾನೆ. ಈ ವಿಚಿತ್ರ ಪ್ರಕರಣ ಪೊಲೀಸರಿಗೂ ಸಹ ತಲೆನೋವಾಗಿ ಪರಿಣಮಿಸಿದೆ.
ಹೌದು. ಬಾಗಲಕೋಟೆ ಜಿಲ್ಲೆಯ ರಬಕವಿ- ಬನಹಟ್ಟಿ ತಾಲೂಕಿನ ಜಗದಾಳ ಗ್ರಾಮದ ಬೀರಪ್ಪ(22) ಎಂಬಾರ ಕಳೆದ ಸುಮಾರು 15 ದಿನಗಳಿಂದ ಬನಹಟ್ಟಿ ಪಟ್ಟಣದ ಲಕ್ಷ್ಮೀ ನಗರ, ಸಾಯಿ ಹಾಗೂ ಕಾಡಸಿದ್ಧೇಶ್ವರ ನಗರದಲ್ಲಿ ಈ ವಿಚಿತ್ರವಾಗಿ ಅಲೆದಾಟ ನಡೆಸ್ತಿದ್ದಾನೆ. ರಾತ್ರಿ ವೇಳೆಯೇ ಈತ ಹೊರಬರೋದು. ಈ ವಿಚಿತ್ರ ಕಳ್ಳನ ಕಾರ್ಯಕ್ಕೆ ಪಟ್ಟಣದ ಜನತೆ ಬೆಚ್ಚಿ ಬಿದ್ದಿದ್ದಾರೆ.
Advertisement
Advertisement
ಆರೋಪಿ ಬೀರಪ್ಪ ಜಗದಾಳ ಗ್ರಾಮದ ಮಾನಸಿಕ ಅಸ್ವಸ್ಥ, ಈತನಿಂದಲೇ ಈ ಕೃತ್ಯ ನಡೆಯುತ್ತಿದೆ ಎಂಬುದು ಪ್ರತ್ಯಕ್ಷದರ್ಶಿಗಳಿಂದ ತಿಳಿದು ಬಂದಿದೆ. ರಾತ್ರಿಯಾಗುತ್ತಿದ್ದಂತೆ, ಮನೆಯ ಮುಂಭಾಗದಲ್ಲಿ ಬಟ್ಟೆಯನ್ನು ತೊಳೆದು ಒಣಗಿಸುವುದೆಲ್ಲವೂ ಕಾಣೆಯಾಗುತ್ತಿದ್ದವು. ಕೆಲ ಮನೆಗಳಲ್ಲಿ ಯಾರೂ ಇಲ್ಲದನ್ನು ಗಮನಿಸಿ ಮನೆಯೊಳಗೆ ಹೋಗಿ ಅಡುಗೆ ಮನೆಯಲ್ಲಿದ್ದ ಆಹಾರ, ತಿಂಡಿ, ಊಟವೆನ್ನೆಲ್ಲ ಕದಿಯುತ್ತಿದ್ದ. ಅಲ್ಲದೇ ಅಸ್ವಸ್ಥ ಬೀರಪ್ಪಗೆ ಚಿನ್ನ ದುಡ್ಡು ಯಾವುದೂ ಬೇಕಿಲ್ಲ, ಕೇವಲ ತಿಂಡಿ, ತಿನಿಸು ಹಾಗೂ ಬಟ್ಟೆ, ಬರೆಗಳು ಮಾತ್ರ ಈತನ ಟಾರ್ಗೆಟ್. ಆರೋಪಿ ಬೀರಪ್ಪನ ಈ ವಿಚಿತ್ರ ಮನಸ್ಥಿತಿಗೆ ಪಟ್ಟಣದ ಜನರು ಬೆಚ್ಚಿ ಬಿದ್ದಿದ್ದಾರೆ.
Advertisement
ಈ ವಿಷಯವನ್ನ ಸ್ಥಳೀಯ ಜನ ಪೊಲೀಸರಿಗೆ ಮುಟ್ಟಿಸಿದ್ದಾರೆ. ಸದ್ಯ ಪೊಲೀಸರು ಈ ವಿಚಿತ್ರ ವ್ಯಕ್ತಿಯ ರಹಸ್ಯ ಬೇಧಿಸಲು ಕಾರ್ಯಪ್ರವೃತ್ತರಾಗಿದ್ದಾರೆ. ಅಲ್ಲಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ, ಆರೋಪಿ ಸೆರೆಗೆ ಬಲೆ ಬೀಸಿದ್ದಾರೆ. ಅಲ್ಲದೇ ಈ ವ್ಯಕ್ತಿ ಕಳೆದ ಸೋಮವಾರ ರಾತ್ರಿ ವೇಳೆ ಸುಮಾರಿಗೆ ಸಾಯಿ ನಗರದಲ್ಲಿನ ಓರ್ವರ ಮನೆಗೆ, ಹಿಂದಿನ ಬಾಗಿಲಿನಿಂದ ನುಗ್ಗುವ ಪ್ರಯತ್ನ ಮಾಡುವಾಗ, ಕಿಟಕಿಯಲ್ಲಿ ಮನೆಯವರು ಗಮನಿಸಿ ಗಾಬರಿಯಿಂದ ಚೀರಿದ್ದಾರೆ. ನೆರೆಹೊರೆಯವರು ಆತನನ್ನು ಹಿಡಿಯುವಷ್ಟರಲ್ಲಿ ಆರೋಪಿ ಬೀರಪ್ಪ ಅಲ್ಲಿಂದ ಪರಾರಿಯಾಗಿದ್ದಾನೆ. ಪೊಲೀಸ್ ಇಲಾಖೆಯವರಿಗೂ ಈ ವಿಚಿತ್ರ ವ್ಯಕ್ತಿ ಸವಾಲಾಗಿದ್ದಾನೆ. ಇದನ್ನೂ ಓದಿ: ಕನ್ಹಯ್ಯಲಾಲ್ ಹತ್ಯೆ ಖಂಡಸಿ ಪ್ರತಿಭಟನೆ – ಮೂವರು ಕಾರ್ಯಕರ್ತರ ಪ್ಯಾಂಟ್‍ಗೆ ತಗುಲಿದ ಬೆಂಕಿ
Advertisement
ಈಗಾಗಲೇ ಆರೋಪಿ ಬೀರಪ್ಪನ ಮನೆಯವರನ್ನು ತಂದು ಬನಹಟ್ಟಿ ಪೊಲೀಸರು ವಿಚಾರಿಸಿದ್ದಾರೆ. ಬೀರಪ್ಪ ಓರ್ವ ಮಾನಸಿಕ ಅಸ್ವಸ್ಥ ಎಂದು ತಿಳಿದುಬಂದಿದೆ. ಹೀಗಾಗಿ ಆ ವ್ಯಕ್ತಿ ಯಾವಾಗ, ಎಲ್ಲಿರ್ತಾನೆ, ಯಾವಾಗ ಹೊರಬರ್ತಾನೆ ಎಂಬುದನ್ನ ತಿಳಿಯುವುದೇ ಪೊಲೀಸರಿಗೆ ತಲೆ ನೋವಾಗಿದೆ. ಹೀಗಾಗಿ ಪೊಲೀಸರು ಆತನ ಚಲನವಲನ ಕಂಡುಹಿಡಿಯಲು ಅಲ್ಲಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ಆರೋಪಿಯನ್ನ ಪತ್ತೆಹಚ್ಚಿ, ಅವನು ಮಾನಸಿಕ ಅಸ್ವಸ್ಥನಾಗಿದ್ರೆ ಅತನಿಗೆ ಚಿಕಿತ್ಸೆಗೊಳಪಡಿಸಲು ಆರೋಗ್ಯ ಇಲಾಖೆಯವ್ರ ಸಾಹಾಯ ಪಡೆದು ಮುಂದಿನ ಕ್ರಮ ಜರುಗಿಸುತ್ತೇವೆ. ಜನರನ್ನು ಭಯದಿಂದ ಮುಕ್ತಗೊಳಿಸುತ್ತೇವೆಂದು ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಜಯಪ್ರಕಾಶ್ ಹೇಳಿದ್ದಾರೆ.
ಒಟ್ಟಿನಲ್ಲಿ ವಿಚಿತ್ರ ಕಳ್ಳನ ಮನಸ್ಥಿತಿಗೆ ರಬಕವಿ ಬನಹಟ್ಟಿ ಜನರು ಕಂಗಾಲಾಗಿದ್ದಾರೆ. ಇತ್ತ ಪೊಲೀಸ್ ಇಲಾಖೆ ಪಟ್ಟಣದಲ್ಲಿ ರಾತ್ರಿ ವೇಳೆ ತೀವ್ರ ಕಟ್ಟೆಚ್ಚರ ವಹಿಸಿದ್ದು, ಸೈಕೋ ಆರೋಪಿಯನ್ನು ಬಂಧಿಸಲು ಪಡೆಯನ್ನು ರಚಿಸಿದ್ದಾರೆ.