ಬಳ್ಳಾರಿ: ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ತಮ್ಮ ಮದುವೆಯ ವೆಡ್ಡಿಂಗ್ ಕಾರ್ಡ್ ನಲ್ಲಿ ತಮ್ಮದೇ ಆದ ವಿಶೇಷ ಕಲ್ಪನೆ ಇರುತ್ತದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ವೆಡ್ಡಿಂಗ್ ಕಾರ್ಡ್ ಮಾಡೋ ಬದಲು ಕಾರ್ಡಿ ಗೊಂದು ಅರ್ಥವಿರಬೇಕೆಂದು ಬಳ್ಳಾರಿಯಲ್ಲಿ ಪ್ರಾಧ್ಯಾಪಕ ತಮ್ಮ ಮದುವೆ ಕಾರ್ಡ್ ನ್ನು ಚಿಕ್ಕದಾಗಿ ಮಾಡಿದ್ದಾರೆ. ಬಳಿಕ ಅದನ್ನು ಕಲ್ಲಂಗಡಿ ಹಣ್ಣಿಗೆ ಅಂಟಿಸಿ ನೀಡುವ ಮೂಲಕ ಬಳ್ಳಾರಿ ಬಿಸಿಲಿಗೆ ಬಳಲಿದ ಜನರನ್ನು ಕೂಲ್ ಕೂಲ್ ಮಾಡಿದ್ದಾರೆ.
ಖಾಸಗಿ ಕಾಲೇಜಿನ ಪ್ರಾಧ್ಯಾಪಕರಾಗಿರುವ ಸಾಯಿ ಸಂದೀಪ್ ಅವರು ಮದುವೆ ಕಾರ್ಡ್ ಅನ್ನು ಕಲ್ಲಂಗಡಿಯ ಮೇಲೆ ಅಂಟಿಸಿದ್ದಾರೆ. ಇವರ ಮದುವೆ ಮೇ 9ರಂದು ಬಳ್ಳಾರಿಯ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.
ನನ್ನ ಮದುವೆ ಕಾರ್ಡ್ ನ್ನು ಡಿಫರೆಂಟಾಗಿ ಮಾಡಬೇಕೆನ್ನುವ ಯೋಚನೆ ಬಂದಾಗ ಈ ಹಣ್ಣಿನ ಐಡಿಯಾ ಬಂತು. ಸಾವಿರಾರು ರೂಪಾಯಿ ಕೊಟ್ಟು ಮದುವೆ ಕಾರ್ಡ್ ಮಾಡಿಸಿದರೂ ಕೊನೆಗೆ ಅದು ಡಸ್ಟ್ ಬಿನ್‍ಗೆ ಸೇರುತ್ತದೆ. ಹೀಗಾಗಿ ನಾನು ನಮ್ಮ ಮದುವೆ ಕಾರ್ಡ್ ನ್ನು ಸಣ್ಣ ಸ್ಟಿಕ್ಕರ್ ಮಾದರಿ ಮಾಡಿಸಿ ಅದನ್ನು ಕಲ್ಲಂಗಡಿ ಹಣ್ಣಿಗೆ ಅಂಟಿಸಿ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ. ಸ್ಟಿಕ್ಕರ್ ತೆಗೆದು ಕ್ಯಾಲೆಂಡರ್‌ಗೆ ಅಂಟಿಸಿ ಹಣ್ಣು ತಿಂದು ಹೊಟ್ಟೆ ತಂಪು ಮಾಡಿಕೊಂಡು ಮದುವೆ ಬನ್ನಿ ಎನ್ನುವುದು ಸಾಯಿ ಸಂದೀಪ್ ಉದ್ದೇಶವಾಗಿದೆ.
ಸಾಯಿ ಸಂದೀಪ್ ಮೇ. 9ರಂದು ಬಳ್ಳಾರಿಯ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ವಧು ತೇಜಸ್ವಿನಿ ಅವರ ಕೈಹಿಡಿಯಲಿದ್ದಾರೆ. ಈಗಾಗಲೇ 600 ಹಣ್ಣುಗಳನ್ನು ಹಂಚಿದ್ದು, ಇನ್ನೂ 200 ಹಣ್ಣು ಹಂಚೋದು ಬಾಕಿ ಇದೆ. ಕಾರ್ಡ್ ಆದರೆ ಸಲೀಸಾಗಿ ತೆಗೆದುಕೊಂಡು ಹೋಗಬಹುದು ಹಣ್ಣನ್ನು ತೆಗೆದು ಕೊಂಡು ಹೋಗುವುದು ಒಂದಷ್ಟು ತೊಂದರೆಯಾಗುತ್ತದೆ ಎಂದು ಸಾಯಿ ಸಂದೀಪ್ ಮನೆಯವರು ಬೇಡವೆಂದಿದ್ದರು. ಆದರೆ ಸ್ನೇಹಿತರು ಸಪೋರ್ಟ್ ಮಾಡಿದ ಹಿನ್ನೆಲೆಯಲ್ಲಿ ತೊಂದರೆಯಾದರೂ ಸರಿ ಇದರಲ್ಲಿ ತೃಪ್ತಿ ಇದೆ ಎಂದು ಕಾರ್ಡ್ ಗಳನ್ನು ಹಂಚುತ್ತಿದ್ದಾರೆ ಎಂದು ವರನ ಸ್ನೇಹಿತ ಪವನ್ ತಿಳಿಸಿದ್ದಾರೆ.