Connect with us

Latest

ಏಪ್ರಿಲ್ 1 ರಿಂದ ಭಾರತದಲ್ಲಿ ಸಿಗಲಿದೆ ಶುದ್ಧ ಪೆಟ್ರೋಲ್ – ಏನಿದು ಬಿಎಸ್6? ಬೆಲೆ ಎಷ್ಟು ಇರಲಿದೆ? ಈಗಲೇ ಜಾರಿ ಯಾಕೆ?

Published

on

ಪ್ರಿಲ್ 1 ರಿಂದ ಭಾರತದಲ್ಲಿ ಶುದ್ಧ ಪೆಟ್ರೋಲ್ ಮತ್ತು ಡೀಸೆಲ್ ಎಲ್ಲ ಬಂಕ್‍ಗಳಲ್ಲಿ ಲಭ್ಯವಾಗಲಿದೆ. ತೈಲ ಕಂಪನಿಗಳು ಬಿಎಸ್6 ದರ್ಜೆಯ ಪೆಟ್ರೋಲ್ ಮತ್ತು ಡೀಸೆಲನ್ನು ಪೂರೈಸಲಿವೆ. ಹೀಗಾಗಿ ಏನಿದು ಬಿಎಸ್6 ಇಂಧನ ? ಬಿಎಸ್5 ಅನುಷ್ಠಾನಕ್ಕೆ ತರದೇ ಬಿಎಸ್6 ಜಾರಿಗೆ ತಂದಿದ್ದು ಯಾಕೆ? ಇಂಧನದ ಬೆಲೆ ಎಷ್ಟು ಹೆಚ್ಚಾಗಲಿದೆ ಈ ಎಲ್ಲ ಮಾಹಿತಿಗಳನ್ನು ಇಲ್ಲಿ ನೀಡಲಾಗುತ್ತದೆ?

ಏನಿದು ಬಿಎಸ್?
ಭಾರತ್ ಸ್ಟೇಜ್ (ಬಿಎಸ್) ಅಂದ್ರೆ ವಾಹನಗಳ ಅನಿಲ ಹೊರಸೂಸುವಿಕೆ/ ಮಾಲಿನ್ಯ ಪ್ರಮಾಣದ ನಿಯಂತ್ರಣಾ ಮಾನದಂಡ. ಪೆಟ್ರೋಲ್ ಮತ್ತು ಡೀಸೆಲ್‍ಗಳಲ್ಲಿ ಇರುವ ಗಂಧಕ(ಸಲ್ಫರ್) ಪ್ರಮಾಣವನ್ನು ಆಧರಿಸಿ ಅವುಗಳ `ಬಿಎಸ್’ ವರ್ಗೀಕರಣ ಮಾಡಲಾಗುತ್ತದೆ. ಇಂಧನವೊಂದರ 10 ಲಕ್ಷ ಕಣಗಳಲ್ಲಿ, ಗಂಧಕದ ಕಣಗಳು (ಪಾರ್ಟ್ಸ್ ಪರ್ ಮಿಲಿಯನ್ ಅಥವಾ ಪಿಪಿಎಂ) ಎಷ್ಟಿವೆ ಎಂಬುದರ ಆಧಾರದ ಮೇಲೆ ಇದನ್ನು ವರ್ಗೀಕರಿಸಲಾಗುತ್ತದೆ. ಕೇಂದ್ರ ಮಾಲಿನ್ಯ ನಿಯಂತ್ರಣಾ ಮಂಡಳಿ ಪರಿಸರ ಇಲಾಖೆ, ಅರಣ್ಯ ಹಾಗೂ ಹವಾಮಾನ ಇಲಾಖೆಯ ಅಡಿಯಲ್ಲಿ ಬಿಎಸ್ ಮಾನದಂಡವನ್ನ ನಿಗದಿಪಡಿಸಲಾಗುತ್ತದೆ. ಕಾಲಕಾಲಕ್ಕೆ ಇದನ್ನು ಮಾರ್ಪಾಡು ಮಾಡಲಾಗುತ್ತದೆ. ಯುರೋಪಿಯನ್ ಒಕ್ಕೂಟಗಳ ದೇಶಗಳು ಈ ಮಾನದಂಡಕ್ಕೆ ‘ಯುರೋ’ ಎಂದು ಹೆಸರನ್ನಿಟ್ಟಿದ್ದಾರೆ.

ಯಾವಾಗ ಜಾರಿಗೊಳಿಸಲಾಯ್ತು?
ಯುರೋಪಿಯನ್ ಮಾನದಂಡಗಳಿಗೆ ಅನುಗುಣವಾಗಿ ಭಾರತದಲ್ಲಿ ಮೊದಲ ಬಾರಿಗೆ 2000 ಇಸವಿಯಲ್ಲಿ ಬಿಎಸ್ ಮಾನದಂಡ ಜಾರಿಗೊಳಿಸಲಾಯ್ತು. 2005ರಲ್ಲಿ ಬಿಎಸ್2 ಮಾನದಂಡ ಜಾರಿಗೆ ಬಂತು. 2010ರಲ್ಲಿ ಬಿಎಸ್3 ಮಾನದಂಡವನ್ನು ಜಾರಿಗೊಳಿಸಲಾಯ್ತು. 2016ರ ಏಪ್ರಿಲ್‍ನಲ್ಲಿ ಬಿಎಸ್4 ಮಾನದಂಡವನ್ನ ಬೆಂಗಳೂರು ಸೇರಿದಂತೆ 13 ಪ್ರಮುಖ ನಗರಗಳಲ್ಲಿ ಅಸ್ತಿತ್ವಕ್ಕೆ ತರಲಾಯ್ತು. 2017ರ ಏಪ್ರಿಲ್ 1 ರಿಂದ ದೇಶದಲ್ಲಿ ಎಲ್ಲಾ ವಾಹನಗಳು ಬಿಎಸ್4 ಮಾನದಂಡ ಹೊಂದಿರುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ಆದೇಶಿಸಿತ್ತು.

ಬಿಎಸ್5 ಜಾರಿಗೆ ತರದೇ ಬಿಎಸ್6 ಯಾಕೆ?
ಯಾವಾಗಲೂ ಹಂತ ಹಂತವಾಗಿ ಬದಲಾವಣೆ ಆಗುತ್ತಿರುತ್ತದೆ. ಆದರೆ ಭಾರತ ಬಿಎಸ್ ಮಾನದಂಡ ಅಳವಡಿಸುವುದರಲ್ಲಿ ಹಿಂದಿತ್ತು. ಯುರೋಪಿಯನ್ ದೇಶಗಳು 2006ರಲ್ಲಿ ಯುರೋ4 (ಬಿಎಸ್4) ಜಾರಿಗೆ ತಂದಿದ್ದರೆ ಯುರೋ 5ಎ ಮಾನದಂಡವನ್ನು 2011ರಲ್ಲಿ ಜಾರಿಗೆ ತಂದಿತ್ತು. ಆದರೆ ಭಾರತದಲ್ಲಿ ರಾಷ್ಟ್ರವ್ಯಾಪಿ ಬಿಎಸ್4 ಜಾರಿಗೆ ಬಂದಿದ್ದು 2017ರಲ್ಲಿ. ಆದರೆ ಈಗ ಕೇವಲ 3 ವರ್ಷದಲ್ಲಿ ಭಾರತ ಬಿಎಸ್5 ಅಳವಡಿಸಿಕೊಳ್ಳದೇ ಬಿಎಸ್6 ಅಳವಡಿಸಲು ಮುಂದಾಗುತ್ತಿದೆ.

ಬಿಎಸ್5  ಜಾರಿಗೆ ತಂದರೆ ತೈಲ ಕಂಪನಿಗಳು ಮತ್ತು ವಾಹನ ಉತ್ಪಾದನಾ ಕಂಪನಿಗಳು ಬಿಎಸ್5 ಮಾನದಂಡಕ್ಕೆ ಅನುಗುಣವಾಗಿ ತೈಲ ಮತ್ತು ಎಂಜಿನ್ ಉತ್ಪಾದನೆ ಮಾಡಬೇಕಿತ್ತು. ಇದಕ್ಕೆ ಭಾರೀ ಹೂಡಿಕೆ ಬೇಕಿತ್ತು. ಹೂಡಿಕೆ ಮಾಡಿದ ನಂತರ ಮಾನದಂಡವನ್ನು ಬದಲಾಯಿಸಿದರೆ ಕಂಪನಿಗಳು ಭಾರೀ ನಷ್ಟಕ್ಕೆ ತುತ್ತಾಗುವ ಸಾಧ್ಯತೆಯಿತ್ತು. ಒಂದು ಮಾನದಂಡದಿಂದ ಇನ್ನೊಂದು ಮಾನದಂಡಕ್ಕೆ ಬದಲಾಗಲು ಕನಿಷ್ಠ 4, 5 ವರ್ಷ ತೆಗೆದುಕೊಳ್ಳುವ ಸಾಧ್ಯತೆಯಿತ್ತು. ಆದರೆ ಬಿಎಸ್5 ಬಂದ ನಂತರ ಬಿಎಸ್6 ಬರಲೇಬೇಕಿತ್ತು. ಹೀಗಾಗಿ ಭಾರತ ನೇರವಾಗಿ ಬಿಎಸ್6 ಮಾನದಂಡವನ್ನು ಜಾರಿಗೆ ತರಲು ಮುಂದಾಗುತ್ತಿದೆ. ವಿಶ್ವದ ಅತಿ ದೊಡ್ಡ ಆರ್ಥಿಕತೆ ಹೊಂದಿರುವ ದೇಶಗಳು ಸಹ ಇಷ್ಟು ವೇಗದಲ್ಲಿ ಬದಲಾವಣೆ ಮಾಡಿಲ್ಲ. ಈ ಕಾರಣದ ಜೊತೆಗೆ 2017ರ ಪ್ಯಾರಿಸ್ ಶೃಂಗಸಭೆಯಲ್ಲಿ ಜಾಗತಿಕ ತಾಪಮಾನ ನಿಯಂತ್ರಣ ಸಂಬಂಧದ ಘೋಷಣೆಗೆ ಭಾರತವು ಸಹಿ ಹಾಕಿದೆ. ಹೀಗಾಗಿ ವೇಗವಾಗಿ ಬಿಎಸ್6 ಅಳವಡಿಸಿಕೊಳ್ಳಲು ಸರ್ಕಾರವು ಆದೇಶ ಪ್ರಕಟಿಸಿತ್ತು.

ಬಿಎಸ್6 ಇಂಧನದಿಂದ ಮಾಲಿನ್ಯ ಎಷ್ಟು ಕಡಿಮೆ ಆಗುತ್ತದೆ?
ಬಿಎಸ್4 ಪೆಟ್ರೋಲ್ ಡೀಸೆಲ್ ನಲ್ಲಿ 50 ಪಿಎಪಿಎಂ(ಪಾರ್ಟ್ಸ್ ಪರ್ ಮಿಲಿಯನ್) ಸಲ್ಫರ್ ಇದ್ದರೆ ಬಿಎಸ್6 ನಲ್ಲಿ 10 ಪಿಪಿಎಂ ಗಂಧಕ ಇರಲಿದೆ. ಬಿಎಸ್4 ಪೆಟ್ರೋಲ್ ವಾಹನಕ್ಕೆ ಬಿಎಸ್6 ಪೆಟ್ರೋಲ್ ಹಾಕಿದ್ರೆ ನೈಟ್ರೋಜನ್ ಆಕ್ಸೈಡ್ ಉಗುಳುವಿಕೆಯ ಪ್ರಮಾಣ ಶೇ.25 ರಷ್ಟು ಕಡಿಮೆಯಾದರೆ ಬಿಎಸ್4 ಡೀಸೆಲ್ ವಾಹನಕ್ಕೆ ಬಿಎಸ್6 ಡೀಸೆಲ್ ಹಾಕಿದರೆ ನೈಟ್ರೋಜನ್ ಆಕ್ಸೈಡ್ ಉಗುಳುವಿಕೆಯ ಪ್ರಮಾಣ ಶೇ.70ರಷ್ಟು ಕಡಿಮೆಯಾಗಲಿದೆ.

ಬೆಲೆ ಎಷ್ಟು ಏರಿಕೆ ಆಗಲಿದೆ?
ಬಿಎಸ್ ಮಾನದಂಡ ಆರಂಭಗೊಂಡು ಬಿಎಸ್ 4 ವರೆಗೆ ತೈಲ ಸಂಸ್ಕರಣ ಘಟಕಗಳನ್ನು ಮೇಲ್ದರ್ಜೆಗೆ ಏರಿಸಲು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಸುಮಾರು 60 ಸಾವಿರ ಕೋಟಿ ರೂ. ಹಣವನ್ನು ಖರ್ಚು ಮಾಡಿದೆ. ಈ ಸಂಸ್ಕರಣ ಘಟಕಗಳನ್ನು ಬಿಎಸ್4 ನಿಂದ ಬಿಎಸ್6 ಮೇಲ್ದರ್ಜೆಗೆ ಏರಿಸಲು ತೈಲ ಕಂಪನಿಗಳು ಅಂದಾಜು 35 ಸಾವಿರ ಕೋಟಿ ರೂ. ಖರ್ಚು ಮಾಡಿದೆ. ಈ ವೆಚ್ಚವನ್ನು ಸರಿದೂಗಿಸಲು ತೈಲ ಕಂಪನಿಗಳು ಬೆಲೆ ಏರಿಸಲಿವೆ. ಆದರೆ ಎಷ್ಟು ಏರಿಕೆ ಆಗಲಿದೆ ಎನ್ನುವುದು ತಿಳಿದು ಬಂದಿಲ್ಲ.

ದೆಹಲಿಯಲ್ಲಿ ಬಿಎಸ್6 ಇಂಧನ ಲಭ್ಯವಿದೆ:
ವಿಪರೀತ ವಾಯು ಮಾಲಿನ್ಯದಿಂದ ಸುದ್ದಿಯಾಗುತ್ತಿರುವ ದೆಹಲಿಯಲ್ಲಿ ಈಗಾಗಲೇ ಬಿಎಸ್6 ಮಾನಂದಂಡದ ಪೆಟ್ರೋಲ್, ಡೀಸೆಲ್ ಲಭ್ಯವಿದೆ. 2019ರ ಅಕ್ಟೋಬರ್ 1 ರಿಂದ ದೆಹಲಿಯ ಎಲ್ಲ ಜಿಲ್ಲೆಯಲ್ಲಿ ಬಿಎಸ್6 ಮಾನದಂಡದ ಪೆಟ್ರೋಲ್ ಮಾರಾಟ ಮಾಡಲಾಗುತ್ತಿದೆ.

ಬಿಎಸ್4 ವಾಹನಗಳಿಗೆ ಬಿಎಸ್6 ಇಂಧನ ಹಾಕಿದ್ರೆ ಏನಾಗುತ್ತೆ?
ಬಿಎಸ್4 ನಿಂದ ಬಿಎಸ್6ಗೆ ಏರುವ ಪೆಟ್ರೋಲ್‍ನ ರಾಸಾಯನಿಕ ಅಂಶಗಳಲ್ಲಿ ಅಷ್ಟೇನೂ ವ್ಯತ್ಯಾಸವಿರುವುದಿಲ್ಲ. ಆದ್ರೆ ಡೀಸೆಲ್‍ನಲ್ಲಿ ನಿಜವಾದ ವ್ಯತ್ಯಾಸವಿರುತ್ತದೆ. ಈಗಿರುವ ಡೀಸೆಲ್‍ಗೆ ಹೋಲಿಸಿದ್ರೆ ಹೊಸ ಡೀಸೆಲ್‍ನಲ್ಲಿ ಸಲ್ಫರ್ ಪ್ರಮಾಣ ಕಡಿಮೆ ಇರುತ್ತದೆ. ಈ ಹಿಂದೆ ಲಭ್ಯವಿದ್ದ ಡೀಸೆಲ್‍ನಲ್ಲಿ 500 ಪಿಪಿಎಂ(ಪಾರ್ಟ್ಸ್ ಪರ್ ಮಿಲಿಯನ್) ಸಲ್ಫರ್ ಇರುತ್ತಿತ್ತು. ಆದ್ರೆ ಈಗಿರುವ ಬಿಎಸ್ 4 ಡೀಸೆಲ್‍ನಲ್ಲಿ 50 ಪಿಪಿಎಂ ಸಲ್ಫರ್ ಇದ್ದು ಲೋ ಸಲ್ಫರ್ ಡೀಸೆಲ್ ಎಂದೇ ಕರೆಯಲಾಗುತ್ತದೆ. ಇನ್ನು ಬಿಎಸ್6 ಇಂಧನದಲ್ಲಿ ಕೇವಲ 10 ಪಿಪಿಎಂ ಸಲ್ಫರ್ ಮಾತ್ರ ಇರುತ್ತದೆ. ಇದು ಪರಿಸರಕ್ಕಾಗಿ ಮತ್ತಷ್ಟು ಸ್ವಚ್ಛ ಹಾಗೂ ಉತ್ತಮವಾಗಿರುತ್ತದೆ. ಎಂಜಿನ್ ಕೂಡ ಸ್ವಚ್ಛವಾಗಿ ಕಾರ್ಯ ನಿರ್ವಹಿಸುತ್ತದೆ.

ಇಂಧನದಲ್ಲಿನ ಸಲ್ಫರ್ ಡೀಸೆಲ್ ಎಂಜಿನ್‍ಗಳಲ್ಲಿನ ಇಂಜೆಕ್ಟರ್ ಗಳ  ರಾಸಾಯನಿಕ ತೈಲಲೇಪನಕ್ಕೆ ಸಹಾಯ ಮಾಡುತ್ತದೆ. ಡೀಸೆಲ್ ಎಂಜಿನ್‍ಗಳು ದ್ರವವನ್ನು ತುಂತುರು ಹನಿಗಳಾಗಿ ಪರಿವರ್ತಿಸಲು ಇಂಜೆಕ್ಟರ್ ಗಳನ್ನು ಅವಲಂಬಿಸುತ್ತವೆ. ಒಂದು ವೇಳೆ ಡೀಸೆಲ್‍ನಲ್ಲಿ ಸಲ್ಫರ್ ಪ್ರಮಾಣ ಕಡಿಮೆಯಿದ್ದರೆ ಇಂಜೆಕ್ಟರ್ ನಲ್ಲಿ ತೊಂದರೆ ಕಾಣಿಸಿಕೊಳ್ಳುತ್ತದೆ. ಅಲ್ಲದೆ ಹೊಗೆ ಹೊರಸೂಸುವಿಕೆಯೂ ಹೆಚ್ಚಾಗುತ್ತದೆ.

ಬಿಎಸ್4 ಇಂಧನವನ್ನ ಬಿಎಸ್6 ವಾಹನಗಳಿಗೆ ಹಾಕಿದ್ರೆ ಏನಾಗುತ್ತದೆ?
ಬಿಎಸ್6 ಕಾರುಗಳಲ್ಲಿ ಬಿಎಸ್6 ಇಂಧನದಿಂದ ಕಾರ್ಯನಿರ್ವಹಿಸಬಲ್ಲ ಅಪ್‍ಡೇಟೆಡ್ ಹಾರ್ಡ್‍ವೇರ್(ಇಂಜೆಕ್ಟರ್) ಹಾಗೂ ಎಕ್ಸ್ಹಾಸ್ಟ್ ಸ್ಟ್ರೀಮ್‍ನಲ್ಲಿ ಹೆಚ್ಚುವರಿ ಘಟಕಗಳು ಇರುತ್ತವೆ. ಉದಾಹರಣೆಗೆ ಎಕ್ಸಾಸ್ಟ್ ಸಿಸ್ಟಂ ನಲ್ಲಿ ಡೀಸಲ್ ಪಾರ್ಟಿಕುಲೇಟ್ ಫಿಲ್ಟರ್ ಹಾಗೂ ಕೆಲವದರಲ್ಲಿ ಯೂರಿಯಾ ಇಂಜೆಕ್ಷನ್ ಕೂಡ ಇರುತ್ತದೆ. ಹೆಚ್ಚಿನ ಪ್ರಮಾಣದ ಸಲ್ಫರ್ಯುಕ್ತ ಹಳೆಯ ಇಂಧನವನ್ನ ಹೊಸ ಎಂಜಿನ್‍ನಲ್ಲಿ ಬಳಸಿದ್ರೆ ಡೀಸೆಲ್ ಪಾರ್ಟಿಕುಲೇಟ್ ಫಿಲ್ಟರ್ಗಳು ಬ್ಲಾಕ್ ಆಗಿ ಬೇಗನೆ ಬದಲಾವಣೆ ಮಾಡಬೇಕಾಗುತ್ತದೆ. ಜೊತೆಗೆ ಎಂಜಿನ್ ತನ್ನ ಸಾಮರ್ಥ್ಯಕ್ಕಿಂತ  ಕಡಿಮೆ ಕಾರ್ಯ ನಿರ್ವಹಣೆ ಮಾಡುತ್ತದೆ. ವಾಹನದ ಮೈಲೇಜ್ ಮತ್ತು ಒಟ್ಟಾರೆ ಹೊಗೆ ಹೊರಸೂಸುವಿಕೆಯ ಮೇಲೂ ಪರಿಣಾಮ ಬೀರುತ್ತದೆ. ಬಿಎಸ್6 ಕಾರಿನಲ್ಲಿ ಬಿಎಸ್4 ಇಂಧನ ಬಳಸಿದಾಗ ಆಗುವ ತೊಂದರೆ ಬೇಗನೆ ಗೊತ್ತಾಗುತ್ತದೆ.

ಬಿಎಸ್-2 ಗಿಂತಲೂ ಮೊದಲು ಯಾವ ನಿಯಮ ಇತ್ತು?
ಭಾರತದಲ್ಲಿ ಮೊದಲ ಬಾರಿಗೆ 1991ರಲ್ಲಿ ಪೆಟ್ರೋಲ್ ವಾಹನಗಳಿಗೆ ಮಾಲಿನ್ಯ ನಿಯಂತ್ರಣ ಮಾನದಂಡವನ್ನು ಜಾರಿಗೊಳಿಸಲಾಯ್ತು. ನಂತರ 1992ರಲ್ಲಿ ಡೀಸೆಲ್ ವಾಹನಗಳಗೆ ಮಾನದಂಡ ಜಾರಿಗೆ ಬಂತು. ಇದರ ಬೆನ್ನಲ್ಲೇ ಪೆಟ್ರೋಲ್ ವಾಹನಗಳಲ್ಲಿ ಕ್ಯಾಟಲಿಸ್ಟಿಕ್ ಕನ್ವರ್ಟರ್ ಕಡ್ಡಾಯಗೊಳಿಲಾಯ್ತು ಹಾಗೂ ಲೆಡ್ ರಹಿತ ಪೆಟ್ರೋಲ್ ಮಾರುಕಟ್ಟೆಗೆ ಪರಿಚಯಿಸಲಾಯ್ತು. 1999ರ ಏಪ್ರಿಲ್‍ನಲ್ಲಿ ಭಾರತದಲ್ಲಿ ಎಲ್ಲಾ ವಾಹನಗಳು ಯುರೋ 1 ಅಥವಾ ಭಾರತ 2000 ಮಾನದಂಡವನ್ನು ಹೊಂದಿರಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿತು. ಆದ್ರೆ ಈ ಬದಲಾವಣೆ ಮಾಡಿಕೊಳ್ಳಲು ಕಾರು ತಯಾರಕರು ಸಿದ್ಧರಿರಲಿಲ್ಲ. ಹೀಗಾಗಿ ಮುಂದಿನ ತೀರ್ಪಿನಲ್ಲಿ ಯೂರೋ 2 ಅನುಷ್ಠಾನ ದಿನಾಂಕ ಜಾರಿಯಾಗಲಿಲ್ಲ.

2002ರಲ್ಲಿ ಭಾರತ ಸರ್ಕಾರ ಮಾಶೆಲ್ಕರ್ ಸಮಿತಿಯ ವರದಿಯನ್ನು ಸ್ವೀಕರಿಸಿತು. ಈ ವರದಿಯಲ್ಲಿ ಯುರೋ ಆಧರಿತ ಮಾಲಿನ್ಯ ನಿಯಂತ್ರಣ ಮಾನದಂಡವನ್ನು ಭಾರತದಲ್ಲೂ ಜಾರಿಗೊಳಿಸುವಂತೆ ಶಿಫಾರಸು ಮಾಡಿತ್ತು. ಈ ಮಾನದಂಡವನ್ನು ಮೊದಲಿಗೆ ಪ್ರಮುಖ ನಗರಗಳಲ್ಲಿ ಜಾರಿಗೆ ತಂದು ನಂತರ ಕೆಲವು ವರ್ಷಗಳ ಬಳಿಕ ದೇಶದ ಇತರೆ ಭಾಗಗಳಿಗೆ ವಿಸ್ತರಿಸುವ ಮೂಲಕ ಹಂತಹಂತವಾಗಿ ಜಾರಿಗೊಳಿಸಬೇಕೆಂದು ವರದಿಯಲ್ಲಿ ಹೇಳಲಾಗಿತ್ತು. ಈ ವರದಿಯ ಆಧಾರದ ಮೇಲೆ ರಾಷ್ಟ್ರೀಯ ವಾಹನ ಇಂಧನ ನೀತಿಯನ್ನು 2003ರಲ್ಲಿ ಅಧಿಕೃತವಾಗಿ ಘೋಷಿಸಲಾಯ್ತು. ನಂತರ 2010ರ ಅಕ್ಟೋಬರ್ ದೇಶದಾದ್ಯಂತ ಭಾರತ್ ಸ್ಟೇಜ್ -3 ಅನುಷ್ಠಾನಗೊಳಿಸಲಾಯ್ತು.

ಯಾವುದೇ ಸಮಸ್ಯೆಯಾಗಲ್ಲ:
ಮುಂದಿನ ಕೆಲ ವಾರಗಳಲ್ಲಿ ಇಂಧನ ಡಿಪೋಗಳಿಂದ ಶುದ್ಧ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆ ಆಗಲಿದೆ. ನಿರೀಕ್ಷೆಯಂತೆ ಏ.1ರಿಂದ ಯುರೋ-6 ದರ್ಜೆಯ ತೈಲ ದೇಶದೆಲ್ಲೆಡೆಯ ಪೆಟ್ರೋಲ್ ಪಂಪ್ ಗಳಿಗೆ ತಲುಪಲಿದೆ. ಗ್ರಾಹಕರಿಗೆ ಯಾವುದೇ ಸಮಸ್ಯೆಯಾಗದಂತೆ ಎಚ್ಚರವಹಿಸಲಾಗಿದೆ. ತೈಲ ಸಂಸ್ಕರಣ ಘಟಕಗಳನ್ನು ಉನ್ನತೀಕರಿಸಲು ಸುಮಾರು 35 ಸಾವಿರ ಕೋಟಿ ರೂ. ಹಣವನ್ನು ವೆಚ್ಚ ಮಾಡಲಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಅಧ್ಯಕ್ಷ ಸಂಜೀವ್ ಸಿಂಗ್ ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in