ಶಿವಮೊಗ್ಗ: ಶಿವಮೊಗ್ಗ ಕೆಎಸ್‌ಆರ್‌ಟಿಸಿ ಡಿಪೋಗೆ ಡೀಸೆಲ್ ಪೂರೈಕೆ ಮಾಡುವ ಟ್ಯಾಂಕರ್‌ನಲ್ಲಿ ಮಾರ್ಪಾಡು ಮಾಡಿ ಅತ್ಯಂತ ಚಾಣಾಕ್ಷತನದಿಂದ ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಈ ವಂಚನೆಯಲ್ಲಿ ಮುಖ್ಯವಾಗಿ ಮಂಗಳೂರು ಮೂಲದ ಟ್ಯಾಂಕರ್ ಮಾಲೀಕ ಹಾಗೂ ಚಾಲಕ, ಭಾರತ್ ಪೆಟ್ರೋಲಿಯಂ ಹಾಗೂ ಶಿವಮೊಗ್ಗ ಕೆಎಸ್ ಆರ್ ಟಿಸಿ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ.
Advertisement
ಶಿವಮೊಗ್ಗ ಡಿಪೋಗೆ ಪೂರೈಕೆಯಾಗುತ್ತಿದ್ದ ಡೀಸೆಲ್ ಟ್ಯಾಂಕರ್ ನಲ್ಲಿ ತಲಾ ನಾಲ್ಕು ಸಾವಿರ ಲೀಟರ್ ಸಾಮಥ್ರ್ಯದ ಮೂರು ಕಂಪಾರ್ಟ್ ಮೆಂಟ್ ಗಳಿವೆ. ಇವುಗಳಲ್ಲಿ ತುಂಬಿರುವ ಡೀಸೆಲನ್ನು ಡಿಪ್ ಕೋಲಿನಿಂದ ಗೇಜ್ ಮಾಡಿ, ಅನ್ಲೋಡ್ ಮಾಡಲಾಗುತ್ತದೆ.
Advertisement
Advertisement
ಈ ಲಾರಿಯಲ್ಲಿ ಡಿಪ್ ಕೋಲು ಹಾಕುವ ಜಾಗಕ್ಕೆ ಪ್ರತ್ಯೇಕವಾಗಿ ಪೈಪ್ ಕೂರಿಸಿದ್ದು, ಟ್ಯಾಂಕರ್ ನಲ್ಲಿ ಕಡಿಮೆ ಇದ್ದರೂ ಗೇಜ್ ನಲ್ಲಿ ಹೆಚ್ಚು ಅಳತೆ ತೋರಿಸಿದೆ. ಟ್ಯಾಂಕರ್ ನ ಕಂಪಾರ್ಟ್ ಮೆಂಟ್ ಒಳಗೆ ಅಕ್ರಮವಾಗಿ ಮಾರ್ಪಾಡು ಮಾಡಲಾಗಿದೆ. ಪ್ರಕರಣ ಬೆಳಕಿಗೆ ಬಂದ ನಂತರ ಲಾರಿ ಚಾಲಕ ಡಿಪೋದಲ್ಲಿ ಲಾರಿ ಬಿಟ್ಟು ಪರಾರಿ ಆಗಿದ್ದಾನೆ.
Advertisement
ಬಂಕ್ ಗೆ ಭಾರತ್ ಪೆಟ್ರೋಲಿಯಂ ಕಂಪನಿ ವಾರಕ್ಕೆ ಎರಡು ಮೂರು ಟ್ಯಾಂಕರ್ ಡೀಸೆಲ್ ಪೂರೈಕೆ ಮಾಡುತ್ತಿದೆ. ಮಂಗಳೂರಿನ ಬೈಕಂಪಾಡಿಯಲ್ಲಿ ಲೋಡ್ ಆದ ನಂತರ ಟ್ಯಾಂಕರ್ ಶಿವಮೊಗ್ಗದಲ್ಲಿ ಅನ್ ಲೋಡ್ ಆಗುತ್ತಿದೆ. ಕೆಎಸ್ ಆರ್ ಟಿಸಿ ನೀಡಿದ ದೂರಿನ ಅನುಸಾರ ಲೀಗಲ್ ಮೆಟ್ರಾಲಜಿ ವಿಭಾಗದವರು ಲಾರಿ ಪರಿಶೀಲನೆ ನಡೆಸಿ, ವಂಚನೆ ನಡೆದಿರುವುದು ಖಚಿತ ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಮುಂಚೆ ಈ ಲಾರಿ ಎಷ್ಟು ಬಾರಿ ಶಿವಮೊಗ್ಗ ಡಿಪೋಗೆ ಬಂದಿದೆ. ಇದೇ ಮಾಲೀಕರ ಬಳಿ ಇರುವ ಇನ್ನಷ್ಟು ಲಾರಿಗಳಲ್ಲೂ ಇದೇ ರೀತಿಯ ವಂಚನೆ ಆಗಿದೆಯೇ? ಇದೂವರೆಗೂ ಈ ರೀತಿ ವಂಚನೆ ನಡೆದಿದ್ದರೆ ಶಿವಮೊಗ್ಗ ಕೆಎಸ್ ಆರ್ ಟಿಸಿ ಅಧಿಕಾರಿಗಳಿಗೆ ಏಕೆ ತಿಳಿಯಲಿಲ್ಲ? ಈ ರೀತಿ ಕಡಿಮೆ ಡೀಸೆಲ್ ಒಟ್ಟು ವಂಚನೆ ಪ್ರಮಾಣ ಎಷ್ಟು ಎಂಬುದನ್ನು ತನಿಖೆಯಿಂದ ಪತ್ತೆ ಹಚ್ಚಬೇಕಾಗಿದೆ.