ಜೈಪುರ: ಸಮಾಜದ ಏಳಿಗೆಗೋಸ್ಕರ ದಯಮಾಡಿ ತಂಬಾಕು ಉತ್ಪನ್ನದ ಬಗ್ಗೆ ಜಾಹೀರಾತು ನೀಡಬೇಡಿ ಎಂದು ಕಟ್ಟ ಅಭಿಮಾನಿಯೊಬ್ಬರು ಬಾಲಿವುಡ್ ನಟ ಅಜಯ್ ದೇವಗನ್ ಬಳಿ ಮನವಿ ಮಾಡಿದ್ದಾರೆ.
ಅಭಿಮಾನಿಯಾಗಿರುವ 40 ವರ್ಷದ ನನಕ್ರಮ್ ಜಾಹೀರಾತುಗಳಲ್ಲಿ ಅಭಿನಯಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಮೂಲತಃ ರಾಜಸ್ಥಾನದವರಾಗಿರುವ ಇವರು ಜೈಪುರದ ಸಂಗನೆರ್ ಪಟ್ಟಣದಲ್ಲಿ ವಾಸವಾಗಿದ್ದು, ಸದ್ಯ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ.
ನನಕ್ರಮ್ ಅವರು ಅಜಯ್ ದೇವಗನ್ ಅವರ ಅಪ್ಪಟ ಅಭಿಮಾನಿಯಾಗಿದ್ದಾರೆ. ಹೀಗಾಗಿ ತನ್ನ ನೆಚ್ಚಿನ ನಟ ನೀಡುತ್ತಿರುವ ತಂಬಾಕು ಜಾಹೀರಾತು ನೋಡಿ ಅದನ್ನು ಪ್ರತಿನಿತ್ಯ ತೆಗೆದುಕೊಳ್ಳಲು ಆರಂಭಿಸಿದ್ದಾರೆ. ಇದು ಅವರ ದೇಹದ ಮೇಲೆ ಪರಿಣಾಮ ಬೀರಿದೆ ಎಂದು ರೋಗಿಯ ಕುಟುಂಬಸ್ಥರು ತಿಳಿಸಿದ್ದಾರೆ.
ನಟ ದೇವಗನ್ ಅವರು ಜಾಹೀರಾತು ನೀಡುತ್ತಿರುವ ತಂಬಾಕನ್ನೇ ಕಳೆದ ಕೆಲ ವರ್ಷಗಳ ಹಿಂದೆಯಿಂದ ನನ್ನ ತಂದೆ ಸೇವನೆ ಮಾಡಲು ಆರಂಭಿಸಿದ್ದಾರೆ. ದೇವಗನ್ ಅವರು ನೀಡುತ್ತಿರುವ ಜಾಹೀರಾತಿನಿಂದ ತಂದೆ ಪ್ರಭಾವಿತರಾಗಿದ್ದರು. ಆದರೆ ಇದೀಗ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಹೀಗಾಗಿ ಒಬ್ಬ ದೊಡ್ಡ ನಟ ಮನುಷ್ಯನ ಜೀವನಕ್ಕೆ ಕುತ್ತು ತರುವಂತಹ ಜಾಹೀರಾತುಗಳನ್ನು ನೀಡಿ ಜನರನ್ನು ಪ್ರೇರೇಪಣೆಗೊಳಿಸಬಾರದು ಅಂತ ತಂದೆ ಹೇಳುತ್ತಿದ್ದಾರೆಂದು ಮಗ ದಿನೇಶ್ ಮೀನಾ ತಿಳಿಸಿದ್ದಾರೆ.
ಮದ್ಯಪಾನ, ಸಿಗರೇಟ್ ಹಾಗೂ ತಂಬಾಕು ಮನುಷ್ಯನ ದೇಹದ ಮೇಲೆ ಅಡ್ಡಪರಿಣಾಮ ಬೀರುತ್ತವೆ. ಹೀಗಾಗಿ ಕುತ್ತು ತರುವಂತಹ ಉತ್ಪನ್ನಗಳ ಜಾಹೀರಾತುಗಳನ್ನು ನಟರು ಕೊಡಬಾರದೆಂದು ನನಕ್ರಮ್ ಮೀನಾ ಮನವಿ ಮಾಡಿಕೊಂಡಿದ್ದಾರೆ.
ಒಟ್ಟಿನಲ್ಲಿ ಇಬ್ಬರು ಮಕ್ಕಳ ತಂದೆಯಾಗಿರುವ ನನಕ್ರಮ್ ಅವರು ಟೀ ಸ್ಟಾಲ್ ಇಟ್ಟುಕೊಂಡು ವ್ಯಾಪಾರ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಆದರೆ ಇದೀಗ ಅವರು ಕ್ಯಾನ್ಸರ್ ರೋಗಿಯಾಗಿದ್ದು ಜೀವನ ನಡೆಸಲು ಕಷ್ಟ ಪಡುತ್ತಿದ್ದಾರೆ.