– ನಿಯಮದ ಪ್ರಕಾರ ಕೊಹ್ಲಿ ಔಟ್ – ಅಂಪೈರ್ ಪರ ಬ್ಯಾಟ್ ಬೀಸಿದ ಡುಪ್ಲೆಸಿಸ್
– ಅಂಪೈರ್ ವಿರುದ್ಧ ಫ್ಯಾನ್ಸ್ ಫುಲ್ ಗರಂ
ಕೋಲ್ಕತ್ತಾ: ಈಡನ್ ಗಾರ್ಡನ್ ಮೈದಾನದಲ್ಲಿ ಕೋಲ್ಕತ್ತಾ ನೈಟ್‌ರೈಡರ್ಸ್ ವಿರುದ್ಧ ಆರ್‌ಸಿಬಿ (RCB) ಕಂಡ ವಿರೋಚಿತ ಸೋಲು ಅಭಿಮಾನಿಗಳ (RCB Fans) ವಲಯದಲ್ಲಿ ಇನ್ನೂ ಬಿಸಿ-ಬಿಸಿ ಚರ್ಚೆಯಾಗುತ್ತಲೇ ಇದೆ. ಆ 2 ರನ್ ಇದ್ದಿದ್ದರೇ ಆರ್‌ಸಿಬಿ, ಗೆದ್ದೇ ಗೆಲ್ಲುತ್ತಿತ್ತು, ಪ್ಲೇ ಆಫ್ ಕನಸು ಜೀವಂತವಾಗಿರುತ್ತಿತ್ತು ಎಂದು ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಅದಕ್ಕೆ ಪೂರಕವಾಗಿ ವೀಡಿಯೋ ಸಾಕ್ಷಿಯೊಂದನ್ನೂ ಅಭಿಮಾನಿಗಳು ಹಂಚಿಕೊಂಡಿದ್ದಾರೆ.
223 ರನ್‌ಗಳ ಬೃಹತ್ ಮೊತ್ತ ಚೇಸಿಂಗ್ ಆರಂಭಿಸಿದ್ದ ಆರ್‌ಸಿಬಿ ಗೆಲುವಿನ ಹಾದಿಯಲ್ಲಿ ನಡೆಯುತ್ತಿತ್ತು. ಆದ್ರೆ 17ನೇ ಓವರ್‌ನ 5ನೇ ಎಸೆತದಲ್ಲಿ ವರುಣ್ ಚಕ್ರವರ್ತಿ ಅವರ ಬೌಲಿಂಗ್‌ಗೆ ಸುಯೇಶ್ ಪ್ರಭುದೇಸಾಯಿ (Suyash Prabhudesai) ಸಿಕ್ಸರ್ ಬಾರಿಸಿದರು. ಆದ್ರೆ ಆನ್‌ಫೀಲ್ಡ್ ಅಂಪೈರ್ (umpires) ಯಾವುದೇ ನಿರ್ಧಾರ ಪ್ರಕಟಿಸದೇ 3ನೇ ಅಂಪೈರ್ ಮೊರೆ ಹೋದರು. ವೀಡಿಯೋನಲ್ಲಿ ಬಾಲ್ ಗ್ರೌಂಡ್‌ಗೆ ತಾಕುವ ಮುನ್ನ ಬೌಂಡರಿ ಲೈನ್‌ಗೆ ಬಡಿದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಆದಾಗ್ಯೂ ಟಿವಿ ಅಂಪೈರ್ ಸಿಕ್ಸರ್ ಅನ್ನು ಬೌಂಡರಿ ಎಂದು ತೀರ್ಪು ನೀಡಿದರು. ಈ ವೀಡಿಯೋ ಹಂಚಿಕೊಂಡಿರುವ ಆರ್‌ಸಿಬಿ ಅಭಿಮಾನಿಗಳು, 2 ರನ್ ಹೆಚ್ಚುವರಿ ಸೇರಿದ್ದರೆ ಆರ್‌ಸಿಬಿ ಗೆದ್ದೇ ಗೆಲ್ಲುತ್ತಿತ್ತು ಎಂದು ಹೇಳಿಕೊಂಡಿದ್ದಾರೆ.
ರೂಲ್ಸ್ ಪ್ರಕಾರ ಕೊಹ್ಲಿ ಔಟ್:
ವೇಗದ ಬೌಲರ್ ಹರ್ಷಿತ್ ರಾಣಾ ಎಸೆದ ಸ್ಲೋ ಫುಲ್ ಟಾಸ್ ಎಸೆತವನ್ನು ರಕ್ಷಣಾತ್ಮಕ ಆಟವಾಡುವ ಪ್ರಯತ್ನದಲ್ಲಿ ಕೊಹ್ಲಿ ವಿಫಲರಾದರು. ಅಷ್ಟೇ ಅಲ್ಲದೇ ಆನ್‌ಫೀಲ್ಡ್ ಅಂಪೈರ್ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಡಿಆರ್‌ಎಸ್ (DRS) ತೆಗೆದುಕೊಂಡರು. ಕೊಹ್ಲಿ ಕ್ರೀಸ್ ಒಳಗೆ ನಿಂತು ಚೆಂಡನ್ನು ಎದುರಿಸಿದ್ದರೆ, ಆಗ ಅದು ಸೊಂಟದ ಮೇಲ್ಭಾಗಕ್ಕೆ ಬಿದ್ದ ಫುಲ್ ಟಾಸ್ ನೋಬಾಲ್ ಆಗಿರುತ್ತಿತ್ತು. ಆದರೆ ಕೊಹ್ಲಿ ಕ್ರೀಸ್‌ನಿಂದ ಮುಂದಿದ್ದರು. ಇದನ್ನೂ ಓದಿ: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ರೋಹಿತ್ ವಿರೋಧ; ಬಿಸಿಸಿಐ ಹೇಳಿದ್ದೇನು? – ಏನಿದು ಇಂಪ್ಯಾಕ್ಟ್ ಪ್ಲೇಯರ್ ರೂಲ್ಸ್?
ಅಲ್ಲದೇ ಹಾಕ್ ಐನಲ್ಲಿ (ಚೆಂಡು ಬೀಳುವ ಕ್ರಮವನ್ನು ಸ್ಕ್ರೀನ್‌ನಲ್ಲಿ ಅಂದಾಜಿಸುವ ಚಿತ್ರಣ) ಚೆಂಡು ವಿಕೆಟ್ ನೇರವಾಗಿ ಇರುವು ಕಂಡುಬಂದಿತು. ಆದ್ದರಿಂದ ಕೊಹ್ಲಿ ಅವರ ಕ್ಯಾಚ್ ಅನ್ನು ಔಟ್ ಎಂದು ತೀರ್ಪು ನೀಡಲಾಯಿತು. ಬಳಿಕ ಅಂಪೈರ್ ತೀರ್ಪಿನ ವಿರುದ್ಧವೂ ಆನ್‌ಫೀಲ್ಡ್‌ನಲ್ಲೇ ಅಸಮಾಧಾನ ಹೊರಹಾಕಿದ ಕೊಹ್ಲಿ, ಅಂಪೈರ್‌ಗಳ ಬಳಿ ತೆರಳಿ ವಾದಕ್ಕೆ ಇಳಿದಿದ್ದರು. ಬಳಿಕ ಡ್ರೆಸಿಂಗ್ ರೂಮ್‌ನಲ್ಲೂ ಸಹ ಆಟಗಾರರ ಜೊತೆಗೆ ತಮ್ಮ ವಾದ ಮುಂದುವರಿಸಿದರು.
ನಾಯಕ ಡುಪ್ಲೆಸಿಸ್ ಹೇಳಿದ್ದೇನು?
ಈ ಬಗ್ಗೆ ಪಂದ್ಯದ ಬಳಿಕ ಮಾತನಾಡಿದ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್, ಆನ್‌ಫೀಲ್ಡ್ ಅಂಪೈರ್‌ಗಳ ಪರ ಬ್ಯಾಟ್ ಬೀಸಿದರು. ನಿಯಮಗಳ ಪ್ರಕಾರ ವಿರಾಟ್ ಕೊಹ್ಲಿ ಔಟ್ ಆಗಿದ್ದಾರೆ. ಅಂಪೈರ್‌ಗಳು ತೆಗೆದುಕೊಂಡ ನಿರ್ಧಾರದಲ್ಲಿ ಯಾವುದೇ ತಪ್ಪಿಲ್ಲ. ಶತಾಯ ಗತಾಯ ನಾವು ಪಂದ್ಯ ಗೆಲ್ಲಲೇ ಬೇಕಿತ್ತು. ಟೂರ್ನಿಯಲ್ಲಿ ಪ್ಲೇ ಆಫ್ ರೇಸ್‌ನಲ್ಲಿ ಉಳಿಯಲು ಈ ಗೆಲುವು ಅಗತ್ಯವಿತ್ತು. ಆದ್ರೆ ನಾವು ನಮ್ಮ ಅಭಿಮಾನಿಗಳಿಗೂ ನಿರಾಸೆ ಮೂಡಿಸಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: IPL 2024: ಹೆಚ್ಚುವರಿ 20 ರನ್ ಕೊಟ್ಟಿದ್ದೇ ಆರ್‌ಸಿಬಿಗೆ ಮುಳುವಾಯ್ತಾ? – ಗ್ರೀನ್ ಬಾಯ್ಸ್ ಎಡವಿದ್ದೆಲ್ಲಿ?
ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಫೀಲ್ಡಿಂಗ್‌ಗೆ ಇಳಿದ ಆರ್‌ಸಿಬಿ ಬ್ಯಾಟಿಂಗ್ ಮಾಡುವ ಅವಕಾಶವನ್ನು ಕೋಲ್ಕತ್ತಾ ನೈಟ್‌ರೈಡರ್ಸ್‌ಗೆ ಬಿಟ್ಟುಕೊಟ್ಟಿತು. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಬರೋಬ್ಬರಿ 222 ರನ್ ಬಾರಿಸಿತ್ತು. 223 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಆರ್‌ಸಿಬಿ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿ ವಿರೋಚಿತ ಸೋಲನುಭವಿಸಿತು. ಇದನ್ನೂ ಓದಿ: ಟಿ20 ವಿಶ್ವಕಪ್: ಐರ್ಲೆಂಡ್, ಸ್ಕಾಟ್ಲೆಂಡ್ ತಂಡಗಳಿಗೆ ಕರ್ನಾಟಕದ ‘ನಂದಿನಿ’ ಪ್ರಯೋಜಕತ್ವ