ಮೈಸೂರು: ದಲಿತ ಯುವಕನನ್ನು ಪ್ರೀತಿಸಿದ ತಪ್ಪಿಗೆ ಪೋಷಕರೇ ತಮ್ಮ ಮಗಳನ್ನ ಹತ್ಯೆ ಮಾಡಿರೋ ಆರೋಪ ಕೇಳಿಬಂದಿದೆ.
ಮೈಸೂರು ಜಿಲ್ಲೆಯ ಎಚ್.ಡಿ ಕೋಟೆಯ ಗೊಲ್ಲನ ಬೀಡು ಗ್ರಾಮದ ನಿವಾಸಿ ಕುಮಾರ್ ಎಂಬವರ ಮಗಳಾದ ಸುಷ್ಮಾ(20) ಮೃತ ಯುವತಿ. ಪೋಷಕರು ಸುಷ್ಮಾಳಿಗೆ ಜಮೀನಿನಲ್ಲಿ ವಿಷ ಕುಡಿಸಿ ಸುಟ್ಟು ಹಾಕಿದ್ದಾರೆ ಎಂದು ಆರೋಪ ಮಾಡಲಾಗಿದೆ. ಸುಷ್ಮಾ ಎಚ್.ಡಿ.ಕೋಟೆ ಆಲನಹಳ್ಳಿ ಗ್ರಾಮದ ಯುವಕನನ್ನು ಒಂದು ವರ್ಷದಿಂದ ಪ್ರೀತಿಸಿದ್ದಳು. ಇದಕ್ಕೆ ಮನೆಯವರಿಂದ ತೀವ್ರ ವಿರೋಧ ವ್ಯಕ್ತವಾಗಿ, ಆಕೆಯನ್ನು ಕಾಲೇಜಿನಿಂದ ಬಿಡಿಸಿದ್ದರು ಎಂದು ತಿಳಿದುಬಂದಿದೆ.
ಕಾಲೇಜಿನಿಂದ ಬಿಡಿಸಿದ್ದರೂ ಕೂಡ ಸುಷ್ಮಾ ಯುವಕನೊಂದಿಗೆ ಪ್ರೀತಿಯನ್ನು ಮುಂದುವರೆಸಿದ್ದಳು. ಈ ಹಿನ್ನೆಲೆಯಲ್ಲಿ ಫೆಬ್ರವರಿ 21ರಂದು ತಮ್ಮ ಜಮೀನಿನಲ್ಲಿ ಸುಷ್ಮಾಗೆ ವಿಷ ಕುಡಿಸಿ ಹತ್ಯೆ ಮಾಡಿ ಸುಟ್ಟು ಹಾಕಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಅನಾಮಧೇಯ ಪತ್ರವೊಂದು ಬಂದಿದೆ.
ಪತ್ರದ ಆಧಾರದ ಮೇಲೆ ಪೊಲೀಸರು ಸುಷ್ಮಾ ತಂದೆ ಕುಮಾರ್‍ನನ್ನು ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ.