ಭಾರತದ ದಾಳಿ ನಂತ್ರ ಪಾಕ್‌ನಲ್ಲಿ ಪರಮಾಣು ವಿಕಿರಣ ಸೋರಿಕೆ ಆಗ್ತಿದ್ಯಾ? ಮತ್ತೆ ಜಗತ್ತಿನ ಮುಂದೆ ಬೆತ್ತಲಾದ ಪಾಕ್‌

Public TV
2 Min Read
Kirna Hilla Mushaf Airbase Sargodha Pakistan

ಇಸ್ಲಾಮಾಬಾದ್‌: ಭಾರತ (India) ಪ್ರತಿದಾಳಿ ನಡೆಸಿದ ಬಳಿಕ ಪಾಕಿಸ್ತಾನದಲ್ಲಿ (Pakistan) ಪರಮಾಣು ವಿಕಿರಣ ಸೋರಿಕೆ ಆಗುತ್ತಿದ್ಯಾ? ಎಂಬ ಪ್ರಶ್ನೆಗೆ ಅಂತಾರಾಷ್ಟ್ರೀಯ ಅಣುಶಕ್ತಿ ಪ್ರಾಧಿಕಾರ (IAEA) ಪ್ರತಿಕ್ರಿಯೆ ನೀಡಿದೆ.

ಹೌದು. ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಸಂದರ್ಭದಲ್ಲಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸರ್ಗೋಧಾ ವಾಯುನೆಲೆಯ ಮೇಲೆ ಭಾರತ ದಾಳಿ ನಡೆಸಿತ್ತು. ಈ ವಾಯುನೆಲೆ ಕಿರಾನಾ ಬೆಟ್ಟದೊಂದಿಗೆ (Kirana Hills) ಸಂಪರ್ಕ ಹೊಂದಿದೆ. ಕಿರಾನಾ ಬೆಟ್ಟದ ಕೆಳಗಡೆ ಇರುವ ಅಣ್ವಸ್ತ್ರ ಗೋದಾಮಿನಿಂದ ವಿಕಿರಣ ಸೋರಿಕೆಯಾಗುತ್ತಿದೆ (Nuclear Leak) ಎಂಬ ವದಂತಿಯನ್ನ ಪಾಕ್‌ ಹಬ್ಬಿಸಿತ್ತು. ಇದೇ ಕಾರಣಕ್ಕೆ ಕದನ ವಿರಾಮಕ್ಕೆ ಅಮೆರಿಕದ ಕಾಲು ಹಿಡಿದುಕೊಂಡಿತ್ತು. ವಿಕಿರಣ ಸೋರಿಕೆ ವದಂತಿಗಳ ಕುರಿತು ನೆಟ್ಟಿಗರು ಸೋಷಿಯಲ್‌ ಮೀಡಿಯಾಗಳಲ್ಲಿ ಮೀಮ್ಸ್‌ ಹಂಚಿಕೊಳ್ಳುವ ಮೂಲಕ ವ್ಯಂಗ್ಯ ಮಾಡಿದ್ದರು. ಇದೀಗ ಅಂತರರಾಷ್ಟ್ರೀಯ ಅಣುಶಕ್ತಿ ಪ್ರಾಧಿಕಾರ (ಐಎಇಎ) ಪ್ರತಿಕ್ರಿಯೆ ನೀಡಿದ್ದು, ಪಾಕಿಸ್ತಾನದ ನಿಜಬಣ್ಣ ಬಯಲಾಗಿದೆ.

Kirana Hills

ಪಾಕಿಸ್ತಾನದಲ್ಲಿ ಪರಮಾಣು ವಿಕಿರಣ ಸೋರಿಕೆ ಆಗಿದೆಯೇ? ಎಂಬುದನ್ನು ಪ್ರಶ್ನಿಸಿ ಇತ್ತೀಚೆಗೆ ಮಾಧ್ಯಮ ಸಂಸ್ಥೆಯೊಂದು ಐಎಇಎಗೆ ಇ-ಮೇಲ್‌ ಪತ್ರ ಕಳುಹಿಸಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಐಎಇಎ, ನಮಗೆ ಲಭ್ಯವಿರುವ ಮಾಹಿತಿ ಹಾಗೂ ವರದಿಗಳ ಪ್ರಕಾರ ಪಾಕಿಸ್ತಾನದಲ್ಲಿ ಯಾವುದೇ ಪರಮಾಣು ಸೌಲಭ್ಯದಿಂದ ವಿಕಿರಣ ಸೋರಿಕೆ ಆಗಿಲ್ಲ ಎಂದು ಹೇಳಿದೆ.

ಇದಕ್ಕೂ ಮುನ್ನ ಏರ್ ಮಾರ್ಷಲ್ ಎ.ಕೆ. ಭಾರ್ತಿ ಅವರು ಭಾರತ ಕಿರಾನಾ ಬೆಟ್ಟಗಳನ್ನು ಹೊಡೆದುರುಳಿಸಿಲ್ಲ ಎಂದು ದೃಢಪಡಿಸಿದ್ದರು. ಅಲ್ಲದೇ ಕಿರಾನಾ ಬೆಟ್ಟಗಳಲ್ಲಿ ಅಣುಸ್ಥಾವರಗಳಿವೆ ಎಂದು ಹೇಳಿದ್ದಕ್ಕಾಗಿ ಧನ್ಯವಾದಗಳು, ನಮಗೆ ಈ ಬಗ್ಗೆ ಗೊತ್ತೇ ಇರಲಿಲ್ಲ ಎಂದು ಮುಗುಳುನಕ್ಕಿದ್ದರು.

Kirana Hills pakistan

ಭಾರತವಲ್ಲದಿದ್ದರೆ ದಾಳಿ ಮಾಡಿದ್ದು ಮತ್ಯಾರು?
ಭಾರತ ದಾಳಿ ಸಂದರ್ಭದಲ್ಲಿ ಪಾಕ್‌ನ ವಾಯುಸೀಮೆಯಲ್ಲಿ ಯುಎಸ್‌ನ ಬೀಚ್‌ಕ್ರಾಫ್ಟ್‌ ಬಿ-350 ವೈಮಾನಿಕ ಮಾಪನ ವ್ಯವಸ್ಥೆ (ಎಎಂಎಸ್) ವಿಮಾನ ಪತ್ತೆಯಾಗಿತ್ತು. ಇದು ರೆಡಾರ್‌ ವ್ಯವಸ್ಥೆಯ ವಿಮಾನ ಆಗಿದೆ. ತುರ್ತು ಸಂದರ್ಭಗಳಲ್ಲಿ ವಿಕಿರಣಶೀಲ ಮಾಲಿನ್ಯ ಗುರುತಿಸಲು ಅಮೆರಿಕ ವಿನ್ಯಾಸಗೊಳಿಸಿದ ವಿಮಾನ ಇದಾಗಿದೆ. ಇದು ಪಾಕ್‌ ವಾಯುಸೀಮೆಯಲ್ಲಿ ಪತ್ತೆಯಾಗಿರುವುದು ಮತ್ತಷ್ಟು ಊಹಾಪೋಹಗಳಿಗೆ ಕಾರಣವಾಹಗಿದೆ.

ಕಿರಾನಾ ಬೆಟ್ಟ ಎಲ್ಲಿದೆ?
ಸರ್ಗೋಧಾ ವಾಯುನೆಲೆಯಿಂದ ರಸ್ತೆಯ ಮೂಲಕ ಕೇವಲ 20 ಕಿಮೀ ಮತ್ತು ಕುಶಾಬ್ ಪರಮಾಣು ಸ್ಥಾವರದಿಂದ 75 ಕಿಮೀ ದೂರದಲ್ಲಿ ಕಿರಾನಾ ಬೆಟ್ಟ ಇದೆ. ಸುಮಾರು 68 ಚದರ ಕಿ.ಮೀ ಪ್ರದೇಶವನ್ನು ಆವರಿಸಿರುವ ಮತ್ತು 39 ಕಿ.ಮೀ ಪರಿಧಿಯಿಂದ ಸುತ್ತುವರೆದಿರುವ ಕಿರಾನಾ ಬೆಟ್ಟಗಳು ಬಹು-ಪದರದ ರಕ್ಷಣಾ ವ್ಯವಸ್ಥೆಯೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇದರ ಒಳಗಡೆ ಕನಿಷ್ಠ 10 ಭೂಗತ ಸುರಂಗ ಇದೆ ಎನ್ನಲಾಗುತ್ತಿದೆ.

US Beechcraft

ಚರ್ಚೆ ಆಗುತ್ತಿರುವುದು ಯಾಕೆ?
ಭಾರತ ಮತ್ತು ಪಾಕಿಸ್ತಾನದ ಮಧ್ಯೆ ತೀವ್ರ ಸಂಘರ್ಷ ನಡೆಯುತ್ತಿದ್ದಾಗ ದಿಢೀರ್‌ ಕದನ ವಿರಾಮ ಘೋಷಣೆಯಾಗಿದ್ದಕ್ಕೆ ಕಾರಣ ಕಿರಾನಾ ಬೆಟ್ಟದ ಮೇಲಿನ ದಾಳಿ ಎಂಬ ವಿಚಾರ ಕಳೆದ ಶನಿವಾರದಿಂದ ಜೋರಾಗಿ ಚರ್ಚೆ ಆಗುತ್ತಿದೆ.

Share This Article