ಬೆಂಗಳೂರು: ಈ ಹಿಂದೆ ಬಾಲಕನೊಬ್ಬನಿಗೆ ಚಾಕುವಿನಿಂದಲೇ ಕೇಕ್ ತಿನ್ನಿಸಿ ಟೀಕೆಗೆ ಗುರಿಯಾಗಿದ್ದ ಸಿಎಂ ಬಿಎಸ್ ಯಡಿಯೂರಪ್ಪ ಅವರು ಮತ್ತೆ ಅದೇ ರೀತಿಯ ಎಡವಟ್ಟು ಮಾಡಿಕೊಂಡಿದ್ದಾರೆ.
ಕ್ರೈಸ್ತ ಧರ್ಮಾಧಿಕಾರಿಗಳಿಗೆ ಚಾಕುವಿನಿಂದ ಕೇಕ್ ತಿನ್ನಿಸುವ ಮೂಲಕ, ಅವಮಾನ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಗುರುವಾರ ಮಿಲ್ಲರ್ಸ್ ರಸ್ತೆಯ ಕ್ರೈಸ್ತ ಧರ್ಮಾಧಿಕಾರಿಗಳ ನಿಲಯದಲ್ಲಿ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕ್ರಿಸ್ಮಸ್ ಹಬ್ಬ ಆಚರಣೆ ಮತ್ತು ಹೊಸ ವರ್ಷದ ಆಚರಣೆಗಾಗಿ ಕೇಕ್ ಕಟ್ ಮಾಡಲಾಯಿತು.
ಕೇಕ್ ಕಟ್ ಮಾಡಿದ ಸಿಎಂ ಯಡಿಯೂರಪ್ಪ ಕ್ರೈಸ್ತ ಧರ್ಮ ಗುರು ಆರ್ಚ್ ಬಿಷಪ್ ಪೀಟರ್ ಮಚಾಡೊಗೆ ಚಾಕುವಿನಿಂದಲೇ ಕೇಕ್ ತಿನ್ನಿಸಿದರು. ಮತ್ತೊಬ್ಬರು ಧರ್ಮ ಗುರು ಬರ್ನಾಡ್ ಮೊರೆಸೊ ಅವರಿಗೂ ಚಾಕುವಿನಿಂದಲೇ ಕೇಕ್ ತಿನ್ನಿಸಿದ್ದರು. ಇದೀಗ ಸಿಎಂ ಅವರ ಈ ನಡೆ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದೆ.
ಕೈಯಿಂದ ಕೇಕ್ ತಿನ್ನಿಸದೇ ಚಾಕುವಿನಿಂದ ಕೇಕ್ ತಿನ್ನಿಸಿ, ಕ್ರೈಸ್ತ ಧರ್ಮ ಗುರುಗಳಿಗೆ ಅವಮಾನ ಮಾಡಲಾಗಿದೆ ಎನ್ನುವ ಟೀಕೆಗಳು ಕೇಳಿ ಬರುತ್ತಿವೆ.