ಬೆಂಗಳೂರು: ವಿಪಕ್ಷಗಳ ಬಾಯಿಗೆ ಬೀಗ ಹಾಕಲು ಪ್ರಧಾನಿ ನರೇಂದ್ರ ಮೋದಿ ಎದುರು ಸಿಎಂ ಯಡಿಯೂರಪ್ಪ ಆ ರೀತಿಯ ಭಾಷಣ ಮಾಡಿದ್ದಾರಾ ಹೀಗೊಂದು ಪ್ರಶ್ನೆ ಈಗ ಎದ್ದಿದೆ.
ತುಮಕೂರಿನಲ್ಲಿ ಗುರುವಾರ ಸಿಎಂ ಯಡಿಯೂರಪ್ಪ ಪ್ರಧಾನಿ ನರೇಂದ್ರ ಮೋದಿ ಎದುರೇ ಮಾಡಿದ ಭಾಷಣ ಹತ್ತು ಹಲವು ವಿಶ್ಲೇಷಣೆಗಳಿಗೆ ವೇದಿಕೆ ಒದಗಿಸಿದೆ. ಹಲವು ಕೋನಗಳಲ್ಲಿ ಯಡಿಯೂರಪ್ಪ ಅವರ ಭಾಷಣವನ್ನು ವಿಶ್ಲೇಷಿಸಲಾಗುತ್ತಿದೆ. ಉಪಚುನಾವಣೆ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಹಳೆಯ ಇಮೇಜ್ ಅನ್ನು ಮರಳಿ ಪಡೆದಿರೋದೇನೋ ನಿಜ. ಉಪಚುನಾವಣೆಯ ಗೆಲುವೇ ಬಿಎಸ್‍ವೈಗೆ ಪ್ರಧಾನಿ ಎದುರೇ ಕೇಂದ್ರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ಮಾತಾಡುವಷ್ಟು ದಿಟ್ಟತನ ತಂದುಕೊಟ್ಟಿರುವುದೂ ಸುಳ್ಳಲ್ಲ. ಆದರೆ ಯಡಿಯೂರಪ್ಪನವರ ಭಾಷಣದ ಹಿಂದೆ ಮತ್ತೊಂದು ಲೆಕ್ಕಾಚಾರವೂ ಇದೆ ಎನ್ನಲಾಗುತ್ತಿದೆ. ಅದು ವಿರೋಧ ಪಕ್ಷಗಳ ಬಾಯಿಗೆ ಬೀಗ ಹಾಕುವುದು.
Advertisement
Advertisement
ಕಳೆದ ವರ್ಷ ಆಗಸ್ಟ್ ನಲ್ಲಿ ಎದುರಾದ ಪ್ರವಾಹ ಪರಿಸ್ಥಿತಿಗೆ ಕೇಂದ್ರ ಸರ್ಕಾರದ ಸ್ಪಂದನೆ ಸಮರ್ಪಕವಾಗಿಲ್ಲ. ಆಗಸ್ಟ್ ಪ್ರವಾಹಕ್ಕೆ ಅಕ್ಟೋಬರಿನಲ್ಲಿ ಕೇವಲ 1,200 ಕೋಟಿ ರೂ.ನಷ್ಟು ಅಲ್ಪ ಪರಿಹಾರ ಬಿಡುಗಡೆ ಮಾಡಿ ಸುಮ್ಮನಾಗಿದೆ. ನೆರೆ ಪರಿಹಾರ ಕೋರಿ ರಾಜ್ಯ ಸರ್ಕಾರ ಹತ್ತು ಹಲವು ಸಲ ಮನವಿ ಮಾಡಿಕೊಂಡರೂ ಕೇಂದ್ರ ಸರ್ಕಾರ ತಾತ್ಸಾರ ತೋರುತ್ತಿರುವುದು ವಾಸ್ತವದ ಸಂಗತಿ.
Advertisement
ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಾಯಕರು ಕಳೆದ ನಾಲ್ಕೈದು ತಿಂಗಳಿಂದಲೂ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ನಿರಂತರ ಟೀಕಾಪ್ರಹಾರ ನಡೆಸುತ್ತಿವೆ. ಅದರಲ್ಲೂ ಸಿಎಂ ಯಡಿಯೂರಪ್ಪ ವಿರುದ್ಧ ತುಸು ಹೆಚ್ಚೇ ವಾಗ್ದಾಳಿ ನಡೆಸಲಾಗುತ್ತಿದೆ. ಯಡಿಯೂರಪ್ಪ ಕೇಂದ್ರದ ಎದುರು ಧೈರ್ಯವಾಗಿ ನೆರೆ ಪರಿಹಾರ ಕೇಳಿಲ್ಲ ಎಂದು ಬಿಎಸ್‍ವೈ ಅವರ ಸ್ವಾಭಿಮಾನವನ್ನೇ ವಿಪಕ್ಷಗಳು ಕೆಣಕಿದ್ದವು. ಜೊತೆಗೆ ಮುಂಬರುವ ವಿಧಾನಮಂಡಲ ಜಂಟಿ ಅಧಿವೇಶ ಮತ್ತು ಬಜೆಟ್ ಅಧಿವೇಶನದಲ್ಲೂ ಇದೇ ವಿಚಾರವನ್ನು ಇಟ್ಟುಕೊಂಡು ಸರ್ಕಾರವನ್ನು ಕಟ್ಟಿಹಾಕಲು ರಣತಂತ್ರ ಹೆಣೆದಿವೆ.
Advertisement
ವಿರೋಧ ಪಕ್ಷಗಳ ಈ ಟೀಕೆಗಳಿಗೆಲ್ಲ ಯಡಿಯೂರಪ್ಪ ತಕ್ಕ ಉತ್ತರ ಕೊಡಲು ಇಂಥ ಸಂದರ್ಭಕ್ಕೆ ಎದುರು ನೋಡುತ್ತಿದ್ದರು. ಪ್ರಧಾನಿ ರಾಜ್ಯಕ್ಕೆ ಬಂದರೂ ನೆರೆ ಪರಿಹಾರ ಕೇಳಲಿಲ್ಲ ಎಂಬ ಟೀಕೆ ಬರಬಾರದೆಂಬ ಕಾರಣಕ್ಕೆ ಸಿಎಂ ತುಸು ಕಟುವಾಗಿಯೇ ನಿನ್ನೆಯ ಭಾಷಣದಲ್ಲಿ ಪ್ರಧಾನಿಗೆ ಪರಿಹಾರ ಕೇಳಿದ್ದಾರೆ ಎಂದು ಹೇಳಲಾಗುತ್ತಿದೆ. ನೀವು ಅಂದುಕೊಂಡಿರುವ ಯಡಿಯೂರಪ್ಪ ನಾನಲ್ಲ ಎಂಬ ಖಡಕ್ ಸಂದೇಶವನ್ನು ಯಡಿಯೂರಪ್ಪ ತಮ್ಮ ಭಾಷಣದ ಮೂಲಕ ವಿಪಕ್ಷಗಳಿಗೆ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ನಿನ್ನೆ ತುಮಕೂರಿನಲ್ಲಿ ಯಡಿಯೂರಪ್ಪ ಮಾಡಿದ ಭಾಷಣಕ್ಕೆ ವಿರೋಧ ಪಕ್ಷಗಳೂ ಶಾಕ್ ಆಗಿರುವುದಂತು ಹೌದು.