ಬಳ್ಳಾರಿ: ಲೋಕಸಭಾ ಉಪಚುನಾವಣೆಗೂ ಮುನ್ನ ಬಳ್ಳಾರಿ ಶಾಸಕರ ಸಭೆ ನಡೆಸಿ ಚುನಾವಣೆಯಲ್ಲಿ ಪ್ರತಿ ಶಾಸಕರಿಗೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ನೀಡಿದ್ದ ಟಾರ್ಗೆಟನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಈ ಮೂಲಕ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಉಗ್ರಪ್ಪ ಭಾರೀ ಅಂತರದಿಂದ ಗೆದ್ದಿದ್ದಾರೆ.
ಉಗ್ರಪ್ಪ ಅವರ ಗೆಲುವು ತಮ್ಮ ಸ್ವಕ್ಷೇತ್ರದಲ್ಲಿ ಶ್ರೀರಾಮುಲು ಅವರಿಗೆ ಭಾರೀ ಮುಖಭಂಗಕ್ಕೆ ಕಾರಣವಾಗಿದೆ. ಆದರೆ ಇದರ ಹಿಂದೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನೀಡಿದ ಗುರಿಯೇ ಪ್ರಮುಖವಾಗಿ ಕೆಲಸ ಮಾಡಿದೆ ಎನ್ನಲಾಗಿದೆ. ಚುನಾವಣೆ ಮತ ಎಣಿಕೆಯ ಕೊನೆಯ 18 ಸುತ್ತಿನ ಮುಕ್ತಾಯ ಬಳಿಕ ಉಗ್ರಪ್ಪ 6,28,163 ಮತ, ಬಿಜೆಪಿ ಅಭ್ಯರ್ಥಿ ಜೆ.ಶಾಂತಾ 3,84,892 ಮತ ಪಡೆದಿದ್ದಾರೆ. ಈ ಮೂಲಕ ಉಗ್ರಪ್ಪ ಅವರು 2,43,271 ಮತಗಳ ಭಾರೀ ಅಂತರದಲ್ಲಿ ಗೆಲುವು ಪಡೆದಿದ್ದಾರೆ. ಇತ್ತ ಪಕ್ಷೇತರ ಅಭ್ಯರ್ಥಿ ಶ್ರೀನಿವಾಸ್ 13,704 ಮತ ಪಡೆದರೆ, 12,403 ಮಂದಿ ನೋಟಾ ಮತ ಚಲಾಯಿಸಿದ್ದಾರೆ.
Advertisement
Advertisement
ಬಳ್ಳಾರಿಯ 7 ವಿಧಾನ ಸಭಾ ಕ್ಷೇತ್ರಗಳಲ್ಲಿ 10,47,619 ಮತದಾರರು ಇದ್ದು, ಇದರಲ್ಲಿ ಯಾವ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಮತಗಳು ಲಭಿಸಿದೆ ಎಂದು ನೋಡುವುದಾದರೇ, ಸಂಡೂರು ಶಾಸಕ ಟಿ ತುಕರಾಂ ಅವರ ಕ್ಷೇತ್ರದಲ್ಲಿ ಕೈ ಅಭ್ಯರ್ಥಿಗೆ 85,140 ಮತಗಳು ಹಾಗೂ ಕಂಪ್ಲಿ ಶಾಸಕ ಜೆಎನ್ ಗಣೇಶ್ ಅವರ ಕ್ಷೇತ್ರದಲ್ಲಿ 84,446 ಮತಗಳನ್ನು ಕಾಂಗ್ರೆಸ್ ಪಡೆದಿದೆ.
Advertisement
ಪ್ರಮುಖವಾಗಿ ಕಾಂಗ್ರೆಸ್ ಪಕ್ಷದ ಎನ್. ನಾಗೇಂದ್ರ ಅವರ ಕ್ಷೇತ್ರದಲ್ಲಿ 83,918 ಮತ ಹಾಗೂ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯಕ್ ಕ್ಷೇತ್ರದಲ್ಲಿ 83,364 ಮತ ಲಭಿಸಿದೆ. ವಿಜಯನಗರ (ಹೊಸಪೇಟೆ) ಶಾಸಕ ಅನಂದ್ ಸಿಂಗ್ ಕ್ಷೇತ್ರದಲ್ಲಿ 82,832, ಎನ್ ನಾಗೇಂದ್ರ ಶಾಸಕರಾಗಿರುವ ಬಳ್ಳಾರಿ ನಗರ ಕ್ಷೇತ್ರದಲ್ಲಿ 72,288, ಹೂವಿನಹಡಗಲಿ ಕ್ಷೇತ್ರದ ಶಾಸಕ ಪರಮೇಶ್ವರ್ ನಾಯ್ಕ್ ಕ್ಷೇತ್ರದಲ್ಲಿ 70,598 ಹಾಗೂ ಬಿಜೆಪಿ ಶಾಸಕರಾಗಿರುವ ಎನ್‍ವೈ ಗೋಪಾಲ ಕೃಷ್ಣ ಅವರ ಕೂಡ್ಲಿಗಿ ಕ್ಷೇತ್ರದಲ್ಲಿ 65,557 ಮತ ಲಭಿಸಿದೆ. ಸಿದ್ದರಾಮಯ್ಯ ಅವರು ಕೊಟ್ಟ ಪರೀಕ್ಷೆಯಲ್ಲಿ ಸಂಡೂರು ಶಾಸಕ ತುಕಾರಾಂ ಅತಿ ಹೆಚ್ಚು ಲೀಡ್ ಕೊಡಿಸಿದ್ದು, ಎರಡನೇ ಸ್ಥಾನದಲ್ಲಿ ಕಂಪ್ಲಿ ಶಾಸಕ ಗಣೇಶ್, ಮೂರನೇ ಸ್ಥಾನದಲ್ಲಿ ಬಳ್ಳಾರಿ ಶಾಸಕ ನಾಗೇಂದ್ರ, ನಾಲ್ಕನೇಯ ಸ್ಥಾನದಲ್ಲಿ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್, ಐದನೇ ಸ್ಥಾನದಲ್ಲಿ ಹೂವಿನಹಡಗಲಿ ಶಾಸಕ ಪರಮೇಶ್ವರ್ ನಾಯಕ್ ಹಾಗೂ 6ನೇ ಸ್ಥಾನದಲ್ಲಿ ವಿಜಯನಗರ ಶಾಸಕ ಆನಂದ್ ಸಿಂಗ್ ಇದ್ದಾರೆ.
Advertisement
ಇತ್ತ ಬಿಜೆಪಿಗೆ ವಿಜಯನಗರ (ಹೊಸಪೇಟೆ)ದಲ್ಲಿ 53,372 ಮತ, ಹಗರಿಬೊಮ್ಮನಹಳ್ಳಿಯಲ್ಲಿ 53,102 ಮತ, ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ 50,663 ಮತ, ಕಂಪ್ಲಿಯಲ್ಲಿ 50,018, ಬಳ್ಳಾರಿ ನಗರದಲ್ಲಿ 48,565, ಸಂಡೂರಿನಲ್ಲಿ 46,465, ಕೂಡ್ಲಿಗಿ ಕ್ಷೇತ್ರದಲ್ಲಿ 43,528 ಮತ ಹಾಗೂ ಹೂವಿನಹಡಗಲಿ 39,179 ಮತಗಳನ್ನು ಬಿಜೆಪಿ ಪಡೆದಿದೆ.
ಉಪಚುನಾವಣೆಯ ಬಳಿಕ ಸಮ್ಮಿಶ್ರದ ಸಂಪುಟ ವಿಸ್ತರಣೆಗೆ ಮಾಡುತ್ತೇವೆ ಎಂದು ಕಾಂಗ್ರೆಸ್ ತಮ್ಮ ಶಾಸಕರಿಗೆ ಸ್ಪಷ್ಟನೆ ನೀಡಿತ್ತು. ಈ ವೇಳೆ ಸಂಪುಟದಲ್ಲಿ ಸಚಿವ ಸ್ಥಾನ ಪಡೆಯಲು ಎಲ್ಲಾ ಶಾಸಕರು ತಮ್ಮ ಕ್ಷೇತ್ರದಲ್ಲಿ 30 ಸಾವಿರ ಮತಗಳ ಲೀಡ್ ತಂದುಕೊಡಬೇಕು. ಸಂಪುಟ ವಿಸ್ತರಣೆ ವೇಳೆ ಹೆಚ್ಚು ಲೀಡ್ ತಂದುಕೊಡುವ ಶಾಸಕರನ್ನು ಪರಿಗಣಿಸುತ್ತೇವೆ ಎಂದು ಸಿದ್ದರಾಮಯ್ಯ ಚುನಾವಣೆಗೂ ಮುನ್ನ ಆಶ್ವಾಸನೆ ನೀಡಿದ್ದರು. ಅಲ್ಲದೇ ಯಾವ ಕ್ಷೇತ್ರದಲ್ಲಿ ಬಿಜೆಪಿಗೆ ಲೀಡ್ ಬರುತ್ತದೆ ಅಂತಹ ಕ್ಷೇತ್ರದ ಶಾಸಕರನ್ನು ಪರಿಗಣಿಸುವುದಿಲ್ಲ ನೇರವಾಗಿಯೇ ಹೇಳಿದ್ದರು. ಸದ್ಯ ಸಿದ್ದರಾಮಯ್ಯ ನೀಡಿದ ಟಾರ್ಗೆಟನ್ನು ಎಲ್ಲಾ ಶಾಸಕರು ಪೂರ್ಣಗೊಳಿಸಿದ್ದು ಯಾರಿಗೆ ಸಚಿವ ಸ್ಥಾನ ಲಭಿಸಲಿದೆ ಎನ್ನುವ ಕುತೂಹಲ ಈಗ ಹೆಚ್ಚಾಗಿದೆ.
2014ರ ಚುನಾವಣೆಯಲ್ಲಿ ಶ್ರೀರಾಮುಲು 85,144 ಮತಗಳ ಅಂತರದಿಂದ ಗೆದ್ದಿದ್ದರು. ಶ್ರೀರಾಮುಲು ಅವರಿಗೆ 5,34,406 ಮತಗಳು ಬಿದ್ದಿದ್ದರೆ, ಕಾಂಗ್ರೆಸ್ಸಿನ ಎನ್‍ವೈ ಹನುಮಂತಪ್ಪ ಅವರಿಗೆ 4,49,262 ಮತಗಳು ಬಿದ್ದಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv