Connect with us

ಸಿಎಂ ಆಪ್ತ, ಎಂಎಲ್‍ಸಿ ಗೋವಿಂದರಾಜು ಮನೆಯಲ್ಲಿ ಸಿಕ್ಕ ಡೈರಿಯಲ್ಲಿ ಏನಿದೆ ಗೊತ್ತಾ?

ಸಿಎಂ ಆಪ್ತ, ಎಂಎಲ್‍ಸಿ ಗೋವಿಂದರಾಜು ಮನೆಯಲ್ಲಿ ಸಿಕ್ಕ ಡೈರಿಯಲ್ಲಿ ಏನಿದೆ ಗೊತ್ತಾ?

– ಬಿಎಸ್‍ವೈ ಆರೋಪ ಹಿನ್ನೆಲೆಯಲ್ಲಿ ಬೆನ್ನು ಬಿದ್ದ ಪಬ್ಲಿಕ್ ಟಿವಿಗೆ ಸಿಕ್ಕಿದೆ ಸ್ಫೋಟಕ ಮಾಹಿತಿ

ಬೆಂಗಳೂರು: ಸಿಎಂ ಆಪ್ತ ಎಂಎಲ್‍ಸಿ ಗೋವಿಂದ್‍ರಾಜು ಕೇಂದ್ರದ ಕಾಂಗ್ರೆಸ್ ಮುಖಂಡರಿಗೆ ಸಾವಿರ ಕೋಟಿಗೂ ಹೆಚ್ಚಿನ ದುಡ್ಡು ಕೊಟ್ಟಿದ್ದಾರೆ. ಇಂದೋ ನಾಳೆಯೋ ಈ ಸತ್ಯ ಹೊರಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಶುಕ್ರವಾರದಂದು ಆರೋಪ ಮಾಡಿದ್ದರು. ಈ ವಿಚಾರ ಈಗ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಯಡಿಯೂರಪ್ಪ ಸುಮ್ನೆ ಆರೋಪ ಮಾಡಿದ್ದಾರೆ ಅಂತ ಕೆಲವರು ಅಂದುಕೊಂಡಿದ್ರು. ಆದ್ರೆ, ಆರೋಪದ ಬೆನ್ನು ಹತ್ತಿ ಹೋದ ಪಬ್ಲಿಕ್ ಟಿವಿಗೆ ಈಗ ಆ ಡೈರಿ ಜಾರಿ ನಿರ್ದೇಶನಾಲಯದ ಬಳಿಯಿಲ್ಲ. ಬದಲಿಗೆ ಆದಾಯ ತೆರಿಗೆ ಅಧಿಕಾರಿಗಳ ಬಳಿ ಇದೆ ಅನ್ನೋದು ಗೊತ್ತಾಗಿದೆ.

ಆ ಡೈರಿ ಬೇರೆ ಯಾವುದೂ ಅಲ್ಲ. ಎಂಎಲ್‍ಸಿ ಗೋವಿಂದರಾಜು ಮನೆಯಲ್ಲಿ ಸಿಕ್ಕ ಬ್ಲಾಕ್ ಡೈರಿ. ಆರು ತಿಂಗಳ ಹಿಂದೆಯಷ್ಟೇ ಇಂದಿರಾನಗರದ ಮನೆಯಲ್ಲಿ ಈ ಡೈರಿ ಸಿಕ್ಕಿತ್ತು.

ಬ್ಲಾಕ್‍ಡೈರಿಯಲ್ಲಿ ಸಚಿವರ ಬಂಡವಾಳ!: ಕಾಂಗ್ರೆಸ್ ಸರ್ಕಾರದಲ್ಲಿ ಸಾಕಷ್ಟು ಜನ ಸಿಕ್ಕಿ ಬೀಳ್ತಾರೆ ಅಂತ ಹೇಳಿದ್ದ ಯಡಿಯೂರಪ್ಪ ಮಾತಿಗೆ ಪುಷ್ಟಿಕೊಟ್ಟಿದ್ದೆ ಈ ಬ್ಲಾಕ್ ಡೈರಿ. ಸಿದ್ದರಾಮಯ್ಯ ಆಪ್ತ ಎಂಎಲ್‍ಸಿ ಗೋವಿಂದ ರಾಜು ಮನೆಯ ಮೇಲೆ ದಾಳಿ ಮಾಡಿದ ಆದಾಯ ತೆರಿಗೆ ಇಲಾಖೆ ಒಂದು ಬ್ಲಾಕ್ ಡೈರಿಯನ್ನು ವಶಪಡಿಸಿಕೊಂಡಿತ್ತು. ಆಶ್ಚರ್ಯ ಅಂದ್ರೆ ಸಹಸ್ರ ಕೋಟಿ ವ್ಯವಹಾರದ ಪಿನ್ ಟು ಪಿನ್ ಡಿಟೈಲ್ಸ್ ಆ ಡೈರಿಯಲ್ಲಿ ಇತ್ತು. ಅದರ ಆಧಾರದ ಮೇಲೆ ಐಎಎಸ್ ಅಧಿಕಾರಿಗಳು, ಚೀಫ್ ಎಂಜಿನಿಯರ್‍ಗಳು, ಕೆಲ ಅಧಿಕಾರಿಗಳು ಸೇರಿದಂತೆ ಸಚಿವರಿಗೆ ನೋಟಿಸ್ ನೀಡಿತ್ತು.

ಯಡಿಯೂರಪ್ಪ ಹೇಳಿದಂತೆ ಸಹಸ್ರ ಕೋಟಿ ಹಣ ಕಾಂಗ್ರೆಸ್ ಹೈಕಮಾಂಡ್, ಸೋನಿಯಾ ಗಾಂಧಿ ಆಪ್ತ ಕಾರ್ಯದರ್ಶಿ ಅಹ್ಮದ್ ಪಟೇಲ್, ಹಿರಿಯ ನಾಯಕ ಮೋತಿಲಾಲ್ ವೋರಾ, ದಿಗ್ವಿಜಯ್ ಸಿಂಗ್ ಮತ್ತಿತರರ ಹೆಸರಿಗೆ ಹೋಗಿ ಸೇರಿದೆ ಅಂತ ಡೈರಿಯಲ್ಲಿ ಉಲ್ಲೇಖ ಆಗಿದೆ ಅಂತ ಹೇಳಲಾಗಿದೆ. ಈ ಉಲ್ಲೇಖವನ್ನು ಹಿಡಿದುಕೊಂಡು ಮತ್ತಿತರರ ಬಗ್ಗೆ ಈಗ ಮಾಹಿತಿ ಕಲೆ ಹಾಕಲಾಗ್ತಿದೆ.

ಪ್ರಭಾವಿ ಸಚಿವರೇ ಡೈರಿಯ ತಿರುಳು!: ಹೌದು, ಬ್ಲಾಕ್‍ಡೈರಿಯಲ್ಲಿ ಸಿಕ್ಕ ಮಾಹಿತಿಯ ಪ್ರಕಾರ ಪ್ರಭಾವಿ ಸಚಿವರಾದ ಡಿ.ಕೆ. ಶಿವಕುಮಾರ್, ಮಹದೇವಪ್ಪ, ಕೆ.ಜೆ. ಜಾರ್ಜ್, ಎಂ.ಬಿ ಪಾಟೀಲ್ ಅವರ ಹೆಸರು ಸೇರಿದಂತೆ 12 ಕ್ಕೂ ಹೆಚ್ಚು ಸಚಿವರ ಹೆಸರು ಐಟಿ ಅಧಿಕಾರಿಗಳ ಲಿಸ್ಟ್ ಸೇರಿತ್ತು. ಗೃಹ ಇಲಾಖೆಯನ್ನೇ ನಿಯಂತ್ರಣ ಮಾಡೋ ಕೆಂಪಯ್ಯ ಮತ್ತು ಅಧಿಕಾರಿಗಳು ಐಟಿ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ರು. ಅದೇ ರೀತಿ, ಡಿಕೆಶಿ ಸೇರಿದಂತೆ ಎಲ್ಲಾ ಸಚಿವರು ಐಟಿ ಮುಂದೆ ಹೇಳಿಕೆ ಕೊಟ್ಟಿದ್ದರು. ಯಾವುದೋ ಒಂದು ಡೈರಿ ಇಟ್ಕೊಂಡು ನಮ್ಮನ್ನೆಲ್ಲಾ ಪ್ರಶ್ನೆ ಮಾಡಿದ್ದೀರಿ. ನಿಮ್ಮ ಪ್ರಶ್ನೆಗೆ ದಾಖಲೆಗಳೇ ಇಲ್ಲ ಅಂತ ಹೇಳಿ ವಾಪಸ್ಸು ಬಂದಿದ್ರು. ಆದ್ರೆ, ಇದೇ ಮಾಹಿತಿಯನ್ನು ಆಧರಿಸಿ ಜಯಚಂದ್ರ ಮತ್ತು ಚಿಕ್ಕರಾಯಪ್ಪ ಸೇರಿದಂತೆ ಕಾಂಗ್ರೆಸ್ ಜೊತೆ ಗುರುತಿಸಿಕೊಂಡವರ ಮೇಲೆ ದಾಳಿ ಮಾಡಿದ್ದಾರೆ ಅನ್ನೋ ಮಾಹಿತಿಯೂ ಇದೆ.

ಇನ್ಯಾರ ಬುಡಕ್ಕೆ ಬಿಸಿನೀರು?: ಈಗಾಗ್ಲೇ ಸಿದ್ದರಾಮಯ್ಯ ಅವರ ಆಪ್ತ ಗೋವಿಂದರಾಜು ಡೈರಿಯಲ್ಲಿರೋ ಮತ್ತಷ್ಟು ಮಾಹಿತಿ ಆಧರಿಸಿ ತನಿಖೆ ನಡೆಸ್ತಾ ಇರೋ ಐಟಿ ಅಧಿಕಾರಿಗಳು ಎಲ್ಲಾ ಸಚಿವರನ್ನು ವಿಚಾರಣೆಗೆ ಕರೆದುಕೊಂಡು ಹೋಗುವ ಸಾಧ್ಯತೆ ಹೆಚ್ಚಾಗಿವೆ. ಸಚಿವ ಕೆ.ಜೆ. ಜಾರ್ಜ್ ಬಲಗೈಬಂಟ ಅನ್ನಿಸಿಕೊಂಡಿರೋ ಗನ್ ಮರ್ಚೆಂಟ್ ಇಸ್ಮಾಯಿಲ್ ಎಂಬವರ ಹೆಸರು ಕೂಡ ಡೈರಿಯಲ್ಲಿದೆ ಎನ್ನಲಾಗಿದೆ.

ಒಟ್ಟಿನಲ್ಲಿ, ಐಟಿ ಅಧಿಕಾರಿಗಳ ಅಂಗಳಕ್ಕೆ ಸೇರಿರೋ ಡೈರಿ ಇದೀಗ ಸಿದ್ದರಾಮಯ್ಯ ಸರ್ಕಾರದ ಬುಡವನ್ನೇ ಅಲುಗಾಡಿಸಿದೆ. ಆದರೆ, ಯಡಿಯೂರಪ್ಪ ಅವರ ಆರೋಪಕ್ಕೆ ಶುಕ್ರವಾರದಂದು ಸಿದ್ದರಾಮಯ್ಯ ಕೆರಳಿ ಕೆಂಡವಾಗಿದ್ದರು. ವಿಧಾನಸೌಧದ ಬಳಿ ಖಾರವಾಗೇ ಮಾತನಾಡಿ, ಇದನ್ನ ಸಾಬೀತು ಮಾಡಬೇಕು. ಇಲ್ಲಾಂದ್ರೆ, ರಾಜಕೀಯದಿಂದ ನಿವೃತ್ತಿಯಾಗಬೇಕು. ಅವರೊಬ್ಬ ಬೇಜಾವಾಬ್ದಾರಿ ಮನುಷ್ಯ ಅಂದಿದ್ರು.

ಈ ಮೊದಲು ಹೇಳಿದಂತೆ ಗೋವಿಂದರಾಜು ಮನೆಯಲ್ಲಿ ಸಿಕ್ಕ ಡೈರಿ ಆಧರಿಸಿಯೇ ರಾಜ್ಯದಲ್ಲಿ ಕಾಂಗ್ರೆಸ್ ನಾಯಕರ ಮೇಲೆ ಐಟಿ ರೇಡ್ ಆಗಿದ್ಯಾ ಅನ್ನೋ ಸಂಶಯ ದಟ್ಟವಾಗ್ತಿದೆ. ಕಳೆದ 6 ತಿಂಗಳಲ್ಲಿ ರಾಜ್ಯದಲ್ಲಿ ನಡೆದ ಪ್ರಮುಖ ಐಟಿ ದಾಳಿಗಳು ಹೀಗಿವೆ:

> ಚಿಕ್ಕರಾಯಪ್ಪ ( ಕಾವೇರಿ ನೀರಾವರಿ ನಿಗಮ ಎಂಡಿ)
> ಜಯಚಂದ್ರ ( ರಾಜ್ಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಯೋಜನಾ ಮುಖ್ಯಾಧಿಕಾರಿ)
> ಕೆಂಪಯ್ಯ ವಿಚಾರಣೆ (ಗೃಹ ಇಲಾಖೆ ಸಲಹೆಗಾರ ರಾತ್ರೋ ರಾತ್ರಿ ತನಿಖೆಗೆ ಹೋಗಿದ್ದು ಸುದ್ದಿಯಾಗಿತ್ತು)
> ರಮೇಶ್ ಜಾರಕಿಹೊಳಿ
> ಲಕ್ಷ್ಮಿ ಹೆಬ್ಬಾಳ್ಕರ್
> ಎಂಟಿಬಿ ನಾಗರಾಜ್ (ಹೊಸಕೋಟೆ ಕಾಂಗ್ರೆಸ್ ಶಾಸಕ, ಸಿದ್ದರಾಮಯ್ಯ ಸಮುದಾಯದ ಶಾಸಕ)

Advertisement
Advertisement