ಗಾಂಧಿನಗರ: ಅಯೋಧ್ಯೆ ರಾಮ ಮಂದಿರ (Ayodhya Ram Mandir) ನಿರ್ಮಾಣಕ್ಕೆ 2011ರಲ್ಲೇ 11 ಕೋಟಿ ರೂ. ದೇಣಿಗೆ ನೀಡಿದ್ದ ಉದ್ಯಮಿ, ಸಮಾಜ ಸೇವಕ ಗೋವಿಂದ್ ಧೋಲಾಕಿಯಾ (Govind Dholakia) ಅವರನ್ನು ರಾಜ್ಯಸಭಾ ಚುನಾವಣೆಗೆ (Rajya Sabha) ಗುಜರಾತ್‌ನಿಂದ ಬಿಜೆಪಿ (BJP) ನಾಮನಿರ್ದೇಶನ ಮಾಡಿದೆ.
ಗೋವಿಂದ್ ಧೋಲಾಕಿಯಾ ಅವರು ಸೂರತ್ ಮೂಲದ ವಜ್ರ (Diamond) ಉತ್ಪಾದನೆ ಮತ್ತು ರಫ್ತು ಮಾಡುವ ಕಂಪನಿಯಾದ ಶ್ರೀ ರಾಮಕೃಷ್ಣ ಎಕ್ಸ್‌ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷರಾಗಿದ್ದಾರೆ.
ಕಡುಬಡತನದಲ್ಲಿ ಬಾಲ್ಯ ಕಳೆದಿದ್ದ ಇವರು ಈಗ ದೊಡ್ಡ ಉದ್ಯಮಿಯಾಗಿ ಹೊರ ಹೊಮ್ಮಿದ್ದು ವಿಶ್ವದ ಅತಿ ದೊಡ್ಡ ವಜ್ರ ಕಂಪನಿಗಳಲ್ಲಿ ಇವರ ಕಂಪನಿಯೂ ಒಂದಾಗಿದೆ. ಇದನ್ನೂ ಓದಿ: ಭಾರತೀಯ ಕಾರ್ಮಿಕರಿಗಾಗಿ ಆಸ್ಪತ್ರೆ ನಿರ್ಮಾಣಕ್ಕೆ ದುಬೈನಲ್ಲಿ ಭೂಮಿ: UAE ಘೋಷಣೆಗೆ ಮೋದಿ ಕೃತಜ್ಞತೆ
ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ರೈತ ಕುಟುಂಬದಿಂದ ನಾನು ಬಂದಿದ್ದೇನೆ. ರಾಜ್ಯಸಭಾ ಅಭ್ಯರ್ಥಿಗಳ ಪಟ್ಟಿ ಅಧಿಕೃತವಾಗಿ ಬಿಡುಗಡೆಯಾಗುವ ನಾಲ್ಕು ಗಂಟೆಗಳ ಮೊದಲು ನನ್ನ ನಾಮನಿರ್ದೇಶನದ ಬಗ್ಗೆ ನನಗೆ ತಿಳಿಯಿತು. ನನ್ನ ಹೆಸರನ್ನು ಅಂತಿಮಗೊಳಿಸುವ ಮೊದಲು ಬಿಜೆಪಿ ನಾಯಕತ್ವವು ಖಂಡಿತವಾಗಿಯೂ ಚಿಂತನೆ ನಡೆಸಿರಬೇಕು ಎಂದು ಹೇಳಿದರು.
ಆರಂಭದಲ್ಲಿ ವಜ್ರ ಕಂಪನಿಯೊಂದರಲ್ಲಿ ಕಾರ್ಮಿಕನಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಇವರು ಸಣ್ಣ ಪ್ರಮಾಣದಲ್ಲಿ ಸಾಲ ಮಾಡಿ 1970ರಲ್ಲಿ ಕಂಪನಿ ಆರಂಭಿಸಿದರು. ಸದ್ಯ 5000ಕ್ಕೂ ಹೆಚ್ಚು ಉದ್ಯೋಗಿಗಳು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಉತ್ತಮ ಭಾಷಣಕಾರರಾಗಿರುವ ಗೋವಿಂದ್ ಧೋಲಾಕಿಯಾ ತಮ್ಮ ಸಮಾಜಸೇವಕರಾಗಿಯೂ ಗುರುತಿಸಿಕೊಂಡಿದ್ದಾರೆ. ದೀಪಾವಳಿ ಸಮಯದಲ್ಲಿ ತಮ್ಮ ಉದ್ಯೋಗಿಗಳಿಗೆ ಕಾರು, ಫ್ಲ್ಯಾಟ್ ಸೇರಿದಂತೆ ದುಬಾರಿ ಉಡುಗೊರೆ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೇ ಉದ್ಯೋಗಿಗಳ ಜೊತೆ ಅವರ ಕುಟುಂಬದ ಸದಸ್ಯರಿಗೂ ಪ್ರವಾಸವನ್ನು ಆಯೋಜಿಸುವ ಮೂಲಕ ಸುದ್ದಿಯಾಗಿದ್ದರು. ಇದನ್ನೂ ಓದಿ: T20 World Cup: ರೋಹಿತ್ ಶರ್ಮಾ ನಾಯಕ, ಹಾರ್ದಿಕ್ ಉಪನಾಯಕ: ಜಯ್ ಶಾ
ಯಶಸ್ವಿ ಉದ್ಯಮಿಯಾಗಿರುವ ಇವರು ಹಲವಾರು ಕಾರ್ಯಕ್ರಮದಲ್ಲಿ ಯುವ ಜನತೆಯನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಅಹಮಾದಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ದೆಹಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಗಾಗ ಇವರನ್ನು ಆಹ್ವಾನಿಸುತ್ತಿದೆ.
ವಡೋದರಾದ ನ್ಯಾಷನಲ್ ಅಕಾಡೆಮಿ ಆಫ್ ಇಂಡಿಯನ್ ರೈಲ್ವೇಸ್, ಪುಣೆಯ ಸಿಂಬೋಸಿಸ್ ಇನ್‌ಸ್ಟಿಟ್ಯೂಟ್ ಆಫ್ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್, ಪುಣೆಯ ಎಂಐಟಿ ಸೇರಿದಂತೆ ದೇಶದ ಹಲವಾರು ಪ್ರಸಿದ್ಧ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರಾಗಿಯೂ ತೆರಳಿ ಮಕ್ಕಳಿಗೆ ಉದ್ಯಮದ ಕಥೆಯ ಬಗ್ಗೆ ಪಾಠ ಮಾಡುತ್ತಿದ್ದಾರೆ.
ಗೋವಿಂದ್ ಧೋಲಾಕಿಯಾ ಅವರು ಬಡ ಮಕ್ಕಳ ಶಿಕ್ಷಣ, ಬಡವರಿಗೆ ಆರೋಗ್ಯ, ಯುವಕರಿಗೆ ಉದ್ಯಮ ಮಾರ್ಗದರ್ಶನ, ಗ್ರಾಮೀಣ ಅಭಿವೃದ್ಧಿ ಸೇರಿದಂತೆ ಸಮಾಜ ಸೇವೆಗಾಗಿ 2014 ರಲ್ಲಿ ಎಸ್‌ಆರ್‌ಕೆಕೆಎಫ್ ಹೆಸರಿನಲ್ಲಿ ನಾಲೆಡ್ಜ್ ಫೌಂಡೇಶನ್ ಸ್ಥಾಪಿಸಿದ್ದಾರೆ.