ವಾಷಿಂಗ್ಟನ್: ಅಮೆರಿಕದಲ್ಲಿ ನೆಲೆಸಿರುವ ಭಾರತ ಮೂಲದ ಧ್ರುವಿ ಪಟೇಲ್ ಅವರು ಮಿಸ್ ಇಂಡಿಯಾ ವರ್ಲ್ಡ್‌ವೈಡ್ 2024ರ (Miss India Worldwide 2024) ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಇತ್ತೀಚೆಗೆ ನ್ಯೂಜೆರ್ಸಿಯ ಎಡಿಸನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜೇತರನ್ನು ಘೋಷಿಸಲಾಯಿತು. ಇದರಲ್ಲಿ ಧ್ರವಿ ಮಿಸ್ ಇಂಡಿಯಾ ವರ್ಲ್ಡ್‌ವೈಡ್ ಕಿರೀಟ ಮುಡಿಗೇರಿಸಿಕೊಂಡರೆ, ನೆದರ್ಲೆಂಡ್ಸ್‌ನ ಶ್ರೇಯಾ ಸಿಂಗ್ ಮತ್ತು ಸುರಿನಾಮ್‌ನ ಶ್ರಧಾ ಟೆಡ್ಜೋ ಮೊದಲ ಮತ್ತು ಎರಡನೇ ರನ್ನರ್ ಅಪ್ ಎಂದು ಘೋಷಿಸಲಾಯಿತು.
ಪ್ರಶಸ್ತಿ ಬಳಿಕ ಮಾತನಾಡಿರುವ ಧ್ರುವಿ, ತನಗೆ ಬಾಲಿವುಡ್ ನಟಿ ಮತ್ತು UNICEF ರಾಯಭಾರಿಯಾಗುವ ಆಸೆಯಿದೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ ಇದು ನನಗೆ ಜಾಗತಿಕವಾಗಿ ಸಿಕ್ಕ ಮನ್ನಣೆ. ಮಿಸ್ ಇಂಡಿಯಾ ವರ್ಲ್ಡ್ ವೈಡ್ ಗೆಲ್ಲುವುದು ಅತ್ಯಂತ ಗೌರವವಾಗಿದೆ. ಇದು ಮಿಸ್ ವರ್ಲ್ಡ್‌ಗಿಂತಲೂ ಹೆಚ್ಚಿನ ಗೌರವ ಅನಿಸಿದೆ ಎಂದಿದ್ದಾರೆ.
ಗುಜರಾತ್ ಮೂಲದ ಧ್ರುವಿ ಪಟೇಲ್ ಅವರು ಅಮೆರಿಕದಲ್ಲಿ ಕಂಪ್ಯೂಟರ್ ಇನ್ಫರ್ಮೇಷನ್ ಸಿಸ್ಟಂ ಪದವಿ ಓದುತ್ತಿದ್ದಾರೆ.
ನ್ಯೂಯಾರ್ಕ್‌ನಲ್ಲಿ ನೆಲೆಸಿರುವ ಇಂಡಿಯನ್ ಫೆಸ್ಟಿವಲ್ ಕಮೀಟಿ ಮಿಸ್ ಇಂಡಿಯಾ ವರ್ಲ್ಡ್ ವೈಡ್ ಸ್ಪರ್ಧೆ ಆಯೋಜಿಸುತ್ತದೆ. ಭಾರತೀಯ-ಅಮೆರಿಕನ್ನರಾದ ನೀಲಂ ಮತ್ತು ಧರ್ಮಾತ್ಮ ಸರನ್ ನೇತೃತ್ವ ವಹಿಸಿದ್ದಾರೆ. ಈ ಪ್ರಶಸ್ತಿಯು ಪ್ರಸಕ್ತ ವರ್ಷ ತನ್ನ 31ನೇ ವಾರ್ಷಿಕೋತ್ಸವ ಆಚರಿಸುತ್ತಿದೆ.