ಬೆಂಗಳೂರು: ಕೆಪಿಸಿಸಿ (KPCC) ಕಾರ್ಯಾಧ್ಯಕ್ಷ ಧ್ರುವನಾರಾಯಣ್ (R.Dhruvanarayan) ಅವರ ಸಾವಿಗೆ ಮಾಜಿ ಸಚಿವ ಜಿ.ಟಿ.ದೇವೇಗೌಡ (G.T.Devegowda) ಅವರು ಸಂತಾಪ ಸೂಚಿಸಿ ಅವರೊಂದಿಗಿನ ತಮ್ಮ ಸ್ನೇಹ ಮತ್ತು ಒಡನಾಟದ ಕುರಿತು ಮಾಹಿತಿಯನ್ನು ನೀಡಿದರು.
ಪಬ್ಲಿಕ್ ಟಿವಿ (Public TV) ಜೊತೆ ಮಾತನಾಡಿದ ಅವರು, ನಾನು ಮತ್ತು ಧ್ರುವನಾರಾಯಣ್ ಅವರು 1980ರಲ್ಲಿ ರಾಜಶೇಖರ್ ಮೂರ್ತಿಯವರ ಪಾರ್ಲಿಮೆಂಟ್ ಚುನಾವಣೆ ಸಂದರ್ಭದಲ್ಲಿ ಸ್ನೇಹಿತರಾದೆವು. ಅವತ್ತಿನಿಂದ ಇವತ್ತಿನವರೆಗೂ ಕೂಡಾ ನಮ್ಮಿಬ್ಬರ ಸ್ನೇಹ ತುಂಬಾ ಗಟ್ಟಿಯಾಗಿತ್ತು. ಅವರು ಆರೋಗ್ಯವಂತರಾಗಿದ್ದರು. ಬೆಳಗ್ಗಿನಿಂದ ರಾತ್ರಿವರೆಗೂ ಕಾಯಕ ಕೆಲಸ ಮಾಡುತ್ತಿದ್ದರು. ಧ್ರುವನಾರಾಯಣ್ ಅವರ ಹೆಂಡತಿಗೆ ಬಹಳ ವರ್ಷಗಳಿಂದ ಕ್ಯಾನ್ಸರ್ (Cancer) ರೋಗ ಇದೆ. ಅದನ್ನು ಲೆಕ್ಕಿಸದೆ ಧ್ರುವನಾರಾಯಣ್ ಅವರು ಗುಲ್ಬರ್ಗ, ರಾಯಚೂರು, ಚಾಮರಾಜನಗರ, ಮೈಸೂರು ಎಂದು ರಾಜಕೀಯ ವಿಚಾರವಾಗಿ ಅಲ್ಲಿ ಇಲ್ಲಿ ಓಡಾಡುತ್ತಿದ್ದರು ಎಂದು ಮೆಚ್ಚುಗೆ ಸಲ್ಲಿಸಿದರು. ಇದನ್ನೂ ಓದಿ: ಧ್ರುವನಾರಾಯಣ್ ನಿಧನಕ್ಕೆ ಕಾರಣ ಬಿಚ್ಚಿಟ್ಟ ವೈದ್ಯ ಡಾ. ಮಂಜುನಾಥ್
Advertisement
Advertisement
ಡಾ. ರೇವಣ್ಣ, ಅವರ ಕುಟುಂಬದ ಡಾಕ್ಟರ್ ಆಗಿದ್ದರು. ಸುದೀಪ್ ಎನ್ನುವವರು ಅವರ ಸ್ನೇಹಿತರಾಗಿದ್ದರು. ಅವರ ಜೊತೆ ಕುಳಿತುಕೊಂಡು ನಾವು ಯಾವಾಗಲೂ ರಾಜಕೀಯ ಚರ್ಚೆ ಮಾಡುತ್ತಿದ್ದೆವು. ವಿಜಯನಗರ (Vijayanagara) 4ನೇ ಹಂತದಲ್ಲಿ ಅವರ ಮನೆಯಿತ್ತು. ಫ್ರೀ ಇದ್ದಾಗೆಲ್ಲಾ ನಮ್ಮ ಮನೆಗೆ ಬರುತ್ತಿದ್ದರು. ಕಳೆದ ಎಂಟತ್ತು ದಿನಗಳಲ್ಲಿ ನಾವೆಲ್ಲರೂ ಭೇಟಿಯಾಗಿ ಜೊತೆಗೆ ಕಾಫಿ ಕುಡಿದಿದ್ದೆವು. ಸ್ನೇಹಕ್ಕೆ ಹಾಗೂ ಆತ್ಮೀಯತೆಗೆ ಧ್ರುವನಾರಾಯಣ್ ಅರ್ಹವಾದ ವ್ಯಕ್ತಿಯಾಗಿದ್ದರು. ನಂಬಿಕೆಗೆ ದ್ರೋಹವಿಲ್ಲ, ಮೋಸವಿಲ್ಲ. ದ್ವೇಷವಿಲ್ಲ. ಪ್ರೀತಿಯಿಂದ ರಾಜಕಾರಣ ಮಾಡುತ್ತಿದ್ದಂತಹ ಒಬ್ಬ ನಾಯಕನೆಂದರೆ ಅದು ಧ್ರುವನಾರಾಯಣ್ ಎಂದು ಹೇಳಿದರು. ಇದನ್ನೂ ಓದಿ: ಧ್ರುವನಾರಾಯಣ್ ನಿಧನಕ್ಕೆ ಖರ್ಗೆ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ಮುಖಂಡರಿಂದ ಸಂತಾಪ
Advertisement
ಅದರ ಜೊತೆಗೆ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ನಮ್ಮ ಮನೆಗೆ ಬಂದಿದ್ದರು. ಅಲ್ಲದೇ ಚುನಾವಣೆ ಸೋತ ಬಳಿಕ ಮತ್ತೆ ನಮ್ಮ ಮನೆಗೆ ಬಂದು ನೀವೊಬ್ಬರು ನಮ್ಮ ಬೆಂಬಲಕ್ಕೆ ನಿಂತಿದ್ದರೆ ನಾನಿವತ್ತು ಗೆಲ್ಲುತ್ತಿದ್ದೆ. ಹೈಕಮಾಂಡ್ ನನ್ನ ಜೊತೆ ಚೆನ್ನಾಗಿದ್ದರು. ನನಗೆ ರಾಷ್ಟ್ರಮಟ್ಟದಲ್ಲಿ ಬೆಳೆಯುವ ಅವಕಾಶವಿತ್ತು. ಆದರೆ ಅದು ಕೈತಪ್ಪಿ ಹೋಯಿತು ಎಂದಿದ್ದರು.
Advertisement
ನಾನಿನ್ನು ರಾಷ್ಟ್ರಮಟ್ಟಕ್ಕೆ ಹೋಗುವುದಿಲ್ಲ. ನಾವು ನೀವು ಸೇರಿಕೊಂಡು ಮುಂದೆ ರಾಜ್ಯಮಟ್ಟದಲ್ಲಿ ರಾಜಕೀಯ ಮಾಡೋಣ. ನಂಜನಗೂಡು (Nanjangud) ಕ್ಷೇತ್ರದಿಂದ ನಾನು ಸ್ಪರ್ಧೆ ಮಾಡುತ್ತೇನೆ. ಟಿಕೆಟ್ ವಿಚಾರದಲ್ಲಿ ಸ್ವಲ್ಪ ಸಮಸ್ಯೆಯಿದೆ. ಆದರೂ ಡಿ.ಕೆ.ಶಿವಕುಮಾರ್ (D.K.Shivakumar) ಹಾಗೂ ಖರ್ಗೆಯವರಿದ್ದಾರೆ. ಆದ್ದರಿಂದ ನನಗೇ ಟಿಕೆಟ್ ಸಿಗುತ್ತದೆ ಎಂದು ನುಡಿದಿದ್ದರು. ಇದನ್ನೂ ಓದಿ: ಧ್ರುವನಾರಾಯಣ್ ಕಾರ್ಯಾಧ್ಯಕ್ಷ ಅಲ್ಲ, ನನ್ನ ಕುಟುಂಬವಾಗಿದ್ದರು: ಕಣ್ಣೀರು ಹಾಕಿದ ಡಿಕೆಶಿ
ಧ್ರುವನಾರಾಯಣ್ ಎಲ್ಲಿರುತ್ತಿದ್ದರೋ ಜನ ಅಲ್ಲಿರುತ್ತಿದ್ದರು. ಅವರು ಎಲ್ಲಾ ಜನರಿಗೆ ನೇರವಾಗಿ ಸ್ಪಂದಿಸುತ್ತಿದ್ದರು. ಜನಗಳ ಕಷ್ಟ ಸುಖಕ್ಕೆ ನೆರವಾಗುತ್ತಿದ್ದರು. ವರ್ಕಿಂಗ್ ಪ್ರೆಸಿಡೆಂಟ್ (Working President) ಆಗಿ ಅವರ ತರಹ ಊರೂರು ಸುತ್ತಿದವರು ಯಾರೂ ಇಲ್ಲ. ಸಭೆಗಳನ್ನು ನಡೆಸುತ್ತಿದ್ದರು, ಸಮಸ್ಯೆಗಳಿಗೆ ತಕ್ಕ ಉತ್ತರ ನೀಡುತ್ತಿದ್ದರು. ಅವರ ರಾಜಕೀಯದಲ್ಲಿ ಯಾವುದೇ ಒಂದು ಕಪ್ಪು ಚುಕ್ಕೆ ಬರಲಿಲ್ಲ. ಅವರ ರಾಜಕೀಯದಲ್ಲಿ ಯಾವುದೇ ಒಂದು ಭ್ರಷ್ಟಾಚಾರದ (Corruption) ಆಪಾದನೆ ಇರಲಿಲ್ಲ ಎಂದರು.
ಸರಳತೆ ಮತ್ತು ಸಜ್ಜನಿಕೆಗೆ ಹೆಸರಾಗಿರುವ ಧ್ರುವನಾರಾಯಣ್ ಅವರು ರಾಜ್ಯಕ್ಕೆ ಧ್ರುವ ತಾರೆಯಾಗಿದ್ದರು. ಕಾಂಗ್ರೆಸ್ (Congress) ಪಕ್ಷಕ್ಕೆ ಮಾತ್ರವಲ್ಲದೇ ರಾಜ್ಯಕ್ಕೂ ದೊಡ್ಡ ಆಸ್ತಿಯಾಗಿದ್ದರು. ಇವತ್ತಿನ ರಾಜಕೀಯದಲ್ಲಿ ಇಂತಹ ರಾಜಕಾರಣಿ ಸಿಗುವುದು ಅಪರೂಪ. ಇವರ ಸಾವು ತುಂಬಾ ಆಘಾತವನ್ನುಂಟುಮಾಡಿದೆ. ಇವರ ಅಭಿಮಾನಿಗಳಿಗೆ ಆ ದೇವರು ಈ ದುಃಖವನ್ನು ಭರಿಸುವ ಶಕ್ತಿಯನ್ನು ಕೊಡಲಿ. ಇವರ ಕುಟುಂದವರು ಇವರದ್ದೇ ಮಾರ್ಗದಲ್ಲಿ ನಡೆದು ಅವರ ನಾಯಕತ್ವ ಗುಣಗಳನ್ನು ಉಳಿಸುವ ಶಕ್ತಿಯನ್ನು ಅವರ ಮಕ್ಕಳಿಗೆ ನೀಡಲಿ. ಅವರ ಪತ್ನಿಗೆ ಆರೋಗ್ಯ ಸ್ಥಿತಿಯನ್ನು ಕಾಪಾಡಲಿ. ಧ್ರುವನಾರಾಯಣ್ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೊಡಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್ ಇನ್ನಿಲ್ಲ