ನಾಯಿ ಹಾಗೂ ಅದರ ಮಾಲೀಕ ಗೋವಿಂದೇಗೌಡನ ನಡುವಿನ ಅವಿನಾಭಾವ ಸಂಬಂಧದ ಕಥೆಯನ್ನು ಹೇಳುವ ‘ನಾನು ಮತ್ತು ಗುಂಡ’ (Naanu Mattu Gunda 2) ಚಿತ್ರವು ಎರಡು ವರ್ಷಗಳ ಹಿಂದೆ ತೆರೆಕಂಡು ಯಶಸ್ವಿ ಪ್ರದರ್ಶನ ಕಂಡಿತ್ತು. ಶಿವರಾಜ್ ಕೆ.ಆರ್. ಪೇಟೆ ನಾಯಕನಾಗಿ ಅಭಿನಯಿಸಿದ್ದ ಆ ಚಿತ್ರಕ್ಕೆ ರಘು ಹಾಸನ್ (Raghu Haasan) ಆಕ್ಷನ್ ಕಟ್ ಹೇಳಿದ್ದರು. ಈಗ ಅದರ ಮುಂದುವರೆದ ಭಾಗವಾಗಿ ‘ನಾನು ಮತ್ತು ಗುಂಡ-2’ ತಯಾರಾಗುತ್ತಿದ್ದು, ಚಿತ್ರದಲ್ಲಿ ಬಹುತೇಕ ಹಳೆಯ ತಂಡವೇ ಕೆಲಸ ಮಾಡುತ್ತಿದೆ. ಮೊದಲ ಭಾಗದಲ್ಲಿ ಮರಣ ಹೊಂದಿದ್ದ ಮಾಲೀಕನಿಗೆ ಇಲ್ಲಿ ಪುನರ್ಜನ್ಮವಾಗಿರುತ್ತದೆ. ಕನ್ನಡ, ತೆಲುಗು, ಹಿಂದಿ ಸೇರಿ ಐದು ಭಾಷೆಗಳಲ್ಲಿ ಈ ಚಿತ್ರ ತೆರೆಗೆ ಬರುತ್ತಿದ್ದು, ಬುಧವಾರ ಸಂಜೆ ಈ ಚಿತ್ರದ ಟೈಟಲ್ ಟೀಸರನ್ನು (Title Teaser) ನಟ ಧ್ರುವಸರ್ಜಾ (Dhruva Sarja) ಬಿಡುಗಡೆ ಮಾಡಿದರು.
ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ರಘು ಹಾಸನ್ ಮಾತನಾಡುತ್ತ ಈ ಚಿತ್ರದಲ್ಲಿ ಸಿಂಬನ ಮಗ ನಟಿಸುತ್ತಿದ್ದಾನೆ. ಸಿಂಬು ನಾಲ್ಕು ದಿನವಷ್ಟೇ ಶೂಟಿಂಗ್ ನಲ್ಲಿ ಭಾಗವಹಿಸಿ ನಿಧನ ಹೊಂದಿದ. ಈಗ ಅವನ ಮಗ ಸಿಂಬ ನಟಿಸುತ್ತಿದ್ದಾನೆ. ಗೋವಿಂದೇಗೌಡ ಹಾಗೂ ನಾಯಿಯ ಪಾತ್ರದ ಮೂಲಕ ಸಿನಿಮಾ ಮುಂದುವರೆಯಲಿದೆ. ಮೊದಲಭಾಗ ಮಾಡುವಾಗಲೇ ೨ರ ಕಥೆ ರೆಡಿ ಮಾಡಿಕೊಂಡಿದ್ದೆ. ಸೋಷಿಯಲ್ ಕನ್ ಸರ್ನ್ ಜೊತೆಗೆ ಡಿವೈನ್ ಕಂಟೆಂಟ್ ಕೂಡ ಚಿತ್ರದಲ್ಲಿದೆ. ಈಗಾಗಲೇ ಶಿವಮೊಗ್ಗ, ತೀರ್ಥಹಳ್ಳಿ, ಬಾಳೆಹೊನ್ನೂರು ಸುತ್ತಮುತ್ತ 50 ದಿನಗಳ ಶೂಟಿಂಗ್ ನಡೆಸಲಾಗಿದ್ದು, ಊಟಿ ಭಾಗದ 20 ದಿನದ ಚಿತ್ರೀಕರಣವಷ್ಟೇ ಬಾಕಿಯಿದೆ. ನಾನು ಪಾತ್ರವನ್ನು ಸದ್ಯದಲ್ಲೇ ರಿವೀಲ್ ಮಾಡುತ್ತೇವೆ.
ಕಳೆದಬಾರಿ ಫಂಡಿಂಗ್ ಕೊರತೆಯಿಂದ ಹೆಚ್ಚು ಪ್ರಚಾರ ಮಾಡಲಾಗಿರಲಿಲ್ಲ, ಈಗ ಆರಂಭದಿಂದಲೇ ಪ್ರೊಮೋಷನ್ ಮಾಡುತ್ತಿದ್ದೇವೆ ಎಂದು ಹೇಳಿದರು. ನಂತರ ಧ್ರುವ ಸರ್ಜ ಮಾತನಾಡಿ ನಾನು ಮತ್ತು ಗುಂಡ ನನಗೆ ಮತ್ತು ನನ್ನ ಪತ್ನಿಗೆ ತುಂಬಾ ಇಷ್ಟವಾಗಿತ್ತು. ಅದರ ಕ್ಲೈಮ್ಯಾಕ್ಸ್ ಅದ್ಭುತವಾಗಿತ್ತು. ಈ ಟೈಟಲ್ ಟೀಸರ್ ತುಂಬಾ ಚನ್ನಾಗಿ ಬಂದಿದೆ. ಯುವ ಪ್ರತಿಭೆಗಳಿಗೆ ನಾವೆಲ್ಲ ಪ್ರೋತ್ಸಾಹ ನೀಡಬೇಕು. ಅಂತವರು ಬೆಳೆಯುತ್ತಾರೆ ಎಂದು ಹೇಳಿದರು.
ಸಂಭಾಷಣೆ ಸಾಹಿತ್ಯ ಬರೆದ ರೋಹಿತ್ ರಮನ್ ಮಾತನಾಡಿ ಮೊದಲ ಭಾಗದಲ್ಲೂ ನಾನೇ ಸಾಹಿತ್ಯ ಬರೆದಿದ್ದೆ. ನಾಯಿ ಇಟ್ಟುಕೊಂಡು ಸಿನಿಮಾ ಮಾಡೋದು ದೊಡ್ಡ ಚಾಲೆಂಜ್, ಅಂತಾದ್ರಲ್ಲಿ ರಘು ಎರಡನೇ ಭಾಗವನ್ನೂ ಮಾಡ್ತಿದ್ದಾರೆ ಎಂದರು. ಹಿನ್ನೆಲೆ ಸಂಗೀತ ನೀಡಿದ ರುತ್ವಿಕ್ ಮುರಳೀಧರ್ ಮಾತನಾಡಿ ಟೀಸರ್ ಎಲ್ಲರಿಗೂ ಇಷ್ಟವಾಗುತ್ತೆ ಎಂದರು. ಛಾಯಾಗ್ರಹಣ ನಿರ್ವಹಿಸಿದ ತನ್ವಿಕ್ ಮಾತನಾಡಿ ಹಿಂದೆ ದಿಲ್ ಮಾರ್ ಚಿತ್ರಕ್ಕೆ ಕ್ಯಾಮೆರಾ ಮಾಡಿದ್ದೆ. ತಕ್ಷಣ ಒಪ್ಪಿಕೊಂಡು ಮಾಡಿದ ಚಿತ್ರವಿದು ಎಂದರು. ಈ ಚಿತ್ರದಲ್ಲಿ ಸಿಂಬು ಜೊತೆ ಬಂಟಿ ಎಂಬ ನಾಯಿಯೂ ಅಭಿನಯಿಸಿದೆ. ಸಿಂಬು ಈಗಾಗಲೇ ಅವನು ಮತ್ತು ಶ್ರಾವಣಿ ಎಂಬ ಧಾರಾವಾಹಿಯಲ್ಲೂ ನಟಿಸುತ್ತಿದೆ.
ಪೊಯೆಮ್ ಪಿಕ್ಚರ್ಸ್ ಲಾಂಛನದಲ್ಲಿ ತಯಾರಾಗುತ್ತಿರುವ ನಾನು ಮತ್ತು ಗುಂಡ-೨ ಚಿತ್ರಕ್ಕೆ ಆರ್.ಪಿ.ಪಟ್ನಾಯಕ್ ಅವರ ಸಂಗೀತ ಸಂಯೋಜನೆ, ಕೆ.ಎಂ. ಪ್ರಕಾಶ್ ಅವರ ಸಂಕಲನ, ವಿ.ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ, ರಾಘು ಅವರ ನೃತ್ಯನಿರ್ದೇಶನ, ನವೀನ್ ಅವರ ಸೌಂಡ್ ಡಿಸೈನ್ ಇದೆ