ಕೊನೆಯಲ್ಲಿ ಕ್ರೀಸ್‌ ಬಿಟ್ಟುಕೊಡದ ಮಹಿ – ಡೇರಿಲ್‌ ಮಿಚೆಲ್‌ಗೆ ದೊಡ್ಡ ಅವಮಾನ ಎಂದು ಫ್ಯಾನ್ಸ್‌ ಗರಂ!

Public TV
3 Min Read
MS Dhoni

– ಅಂದು‌ ಮಹಿ ಯಡವಟ್ಟಿನಿಂದಲೇ ಇಂಗ್ಲೆಂಡ್‌ ವಿರುದ್ಧ ಸೋತಿದ್ದ ಭಾರತ

ಚೆನ್ನೈ: ತವರಿನಲ್ಲಿ ಪಂಜಾಬ್‌ ಕಿಂಗ್ಸ್ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್ ನಡುವಣ ಪಂದ್ಯದಲ್ಲಿ ಮಾಜಿ ನಾಯಕ ಮಹಿ (MS Dhoni) ನಡೆದುಕೊಂಡ ರೀತಿ ಅಭಿಮಾನಿಗಳಿಂದ ಭಾರೀ ಟೀಕೆಗೆ ಕಾರಣವಾಗಿದೆ.

ಚೆನ್ನೈ ಸೂಪರ್‌ಕಿಂಗ್ಸ್‌ ತಂಡದ ನಾಡಿ, ಕ್ರಿಕೆಟ್‌ ಅಭಿಮಾನಿಗಳ ಆರಾಧ್ಯ ದೈವ ಎನಿಸಿಕೊಂಡಿರುವ ಲೆಜೆಂಡ್‌ ಎಂ.ಎಸ್‌ ಧೋನಿ ಬ್ಯಾಟಿಂಗ್‌ ಸರದಿಯ ಕೊನೇ ಓವರ್‌ನಲ್ಲಿ ತೋರಿದ ವರ್ತನೆ ಅಭಿಮಾನಿಗಳ ಅಸಮಾಧಾನ ಸ್ಫೋಟಕ್ಕೆ ಕಾರಣವಾಗಿದೆ.

ಹೌದು. ಚೆನ್ನೈನ ಎಂ.ಎ ಚಿದಂಬರಂ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಚೆನ್ನೈ ಸೂಪರ್‌ ಕಿಂಗ್ಸ್ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 162 ರನ್‌ಗಳನ್ನು ಕಲೆ ಹಾಕಿ ಪಂಜಾಬ್‌ ಕಿಂಗ್ಸ್‌ಗೆ 163 ರನ್‌ಗಳ ಗುರಿ ನೀಡಿತ್ತು.

ಮಿಚೆಲ್‌ಗೆ ಅವಮಾನ ಮಾಡಿದ್ರಾ ಮಹಿ?
ಚೆನ್ನೈ ಸೂಪರ್‌ ಕಿಂಗ್ಸ್ ಇನಿಂಗ್ಸ್‌ನ ಕೊನೇ ಓವರ್‌ನ ಮೊದಲ ಎಸೆತದಲ್ಲಿ ಎಂ.ಎಸ್‌ ಧೋನಿ, ಅರ್ಷದೀಪ್‌ ಸಿಂಗ್‌ಗೆ ಬೌಂಡರಿ ಬಾರಿಸಿದ್ದರು. ನಂತರ ಮುಂದಿನ 2 ಎಸೆತಗಳನ್ನು ಡಾಟ್‌ ಮಾಡಿದ್ದರು. 3ನೇ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿದ್ದ ಧೋನಿ, ಬೌಂಡರಿ ಅಥವಾ ಸಿಕ್ಸರ್‌ ಬಾರಿಸುವಲ್ಲಿ ವಿಫಲವಾಗಿದ್ದರು. ಆದ್ರೆ ಈ ವೇಳೆ ಸುಲಭವಾಗಿ ಒಂದು ರನ್‌ ಕದಿಯಬಹುದಿತ್ತು. ಆದರೆ, ಧೋನಿ ನಿರಾಕರಿಸಿದರು.

Chennai super kings csk 2024 team

ನಾನ್‌ಸ್ಟ್ರೈಕ್‌ ತುದಿಯಲ್ಲಿದ್ದ ಡೇರಿಲ್‌ ಮಿಚೆಲ್‌ (Daryl Mitchell) ರನ್‌ ಪಡೆಯಲು ಸ್ಟ್ರೈಕರ್‌ ತುದಿಗೆ ಓಡಿ ಬಂದರು. ಆದರೆ, ಧೋನಿ ನಿಂತಲ್ಲಿಯೇ ಡೇರಿಲ್‌ ಮಿಚೆಲ್‌ಗೆ ವಾಪಸ್‌ ಹೋಗುವಂತೆ ಹೇಳಿದರು. ಪುನಃ ಮಿಚೆಲ್‌ ನಾನ್‌ಸ್ಟ್ರೈಕ್‌ ತುದಿಗೆ ಓಡಿಬಂದರು ಈ ವೇಳೆ ಕೂದಲೆಳೆ ಅಂತರದಲ್ಲಿ ರನ್‌ಔಟ್‌ ಆಗುವುದನ್ನು ತಪ್ಪಿಸಿಕೊಂಡಿದ್ದರು. ನಂತರ 4ನೇ ಎಸತವನ್ನೂ ಡಾಟ್‌ ಮಾಡಿಕೊಂಡ ಧೋನಿ, 5ನೇ ಎಸೆತದಲ್ಲಿ ಸಿಕ್ಸರ್‌ ಬಾರಿಸಿದರು. ಕೊನೆಯ ಎಸೆತದಲ್ಲಿ 2ನೇ ರನ್‌ ಓಡುವ ವೇಳೆ ಧೋನಿ ತಾನೇ ರನ್‌ಔಟ್‌ ಆದರು.

MS Dhoni 3

ಅಂದು ಇದೇ ತಪ್ಪಿನಿಂದ ಭಾರತಕ್ಕೆ ಸೋಲಾಗಿತ್ತು:
2014ರ ಸೆಪ್ಟಂಬರ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆದ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಮಹಿ ಇದೇ ತಪ್ಪು ಮಾಡಿದ್ದರು. ಅಂದು 181ರನ್‌ಗಳ ಗುರಿ ಬೆನ್ನತ್ತಿದ್ದ ಭಾರತ 177 ರನ್‌ಗಳಿಸಿ, ಕೇವಲ 3 ರನ್‌ಗಳ ಅಂತರದಲ್ಲಿ ಸೋಲು ಕಂಡಿತ್ತು. ಕೊನೇ ಓವರ್‌ನಲ್ಲಿ ಭಾರತದ ಗೆಲುವಿಗೆ 16 ರನ್‌ ಬೇಕಿತ್ತು. ಮೊದಲ 2 ಎಸೆತಗಳಲ್ಲೇ 8 ರನ್‌ ಬಾರಿಸಿದ ಮಹಿ, 3ನೇ ಎಸೆತವನ್ನು ಡಾಟ್‌ ಮಾಡಿಕೊಂಡಿದ್ದರು. 4ನೇ ಎಸೆತದಲ್ಲಿ ಬೌಂಡರಿ ಸಿಡಿಸಿದ್ದರು. ಇನ್ನೆರಡು ಎಸೆತಗಳಲ್ಲಿ 5 ರನ್‌ ಬೇಕಿತ್ತು. 4ನೇ ಎಸೆತದಲ್ಲಿ ಮಹಿ ಹೊಡೆದರು, ಆದ್ರೆ ಸಿಂಗಲ್‌ ತೆಗೆದುಕೊಳ್ಳಲು ನಿರಾಕರಿಸಿದ್ದರು. ಅಲ್ಲದೇ ಇದು ನಾನ್‌ಸ್ಟ್ರೈಕ್‌ನಲ್ಲಿದ್ದ ಅಂಬಟಿ ರಾಯುಡು ಅವರನ್ನೂ ಟೀಕೆಗೆ ಗುರಿಯಾಗುವಂತೆ ಮಾಡಿತ್ತು. ಆದ್ರೆ ಕೊನೆ ಎಸೆತದಲ್ಲಿ ಬೌಂಡರಿ ಸಿಡಿಸುವಲ್ಲಿ ವಿಫಲರಾದ ಮಹಿ ಒಂದು ರನ್‌ ಮಾತ್ರವೇ ಗಳಿಸಿದ್ದರು. ಇದರಿಂದ ಭಾರತ ತಂಡ ವಿರೋಚಿತ ಸೋಲಿಗೆ ತುತ್ತಾಗಿತ್ತು. ಇದೀಗ ಧೋನಿ ಮತ್ತೆ ಅಂತಹದ್ದೇ ತಪ್ಪು ಮಾಡಿದ್ದಾರೆ.

MS Dhoni 2

ಧೋನಿ ವಿರುದ್ಧ ಫ್ಯಾನ್ಸ್ ಗರಂ:
ಡ್ಯಾರಿಲ್ ಮಿಚೆಲ್‌ ಬಗ್ಗೆ ನನಗೆ ನೋವಾಗಿದೆ, ಅವರು ಬ್ಯಾಟಿಂಗ್‌ ಗೊತ್ತಿಲ್ಲದ ಆಟಗಾರನೇನು ಅಲ್ಲ. ಅವರಿಗೆ ಸಿಂಗಲ್‌ ರನ್‌ ನಿರಾಕರಿಸಿರುವುದನ್ನು ಸ್ವೀಕರಿಸಲು ಸಾಧ್ಯವಿಲ್ಲ. ಮಿಚೆಲ್‌ ಅವರೇ 2 ರನ್‌ ಓಡಿದ್ದಾರೆ. ಧೋನಿ ಜಾಗದಲ್ಲಿ ಬೇರೆ ಯಾವುದೇ ಆಟಗಾರನಿದ್ದಿದ್ದರೇ ಅವರ ಜನ್ಮವನ್ನು ಜಾಲಾಡಲಾಗುತ್ತಿತ್ತು ಎಂದು ಅಭಿಮಾನಿಯೊಬ್ಬರು ಟ್ವೀಟ್‌ ಮಾಡಿ ಎಂಎಸ್‌ ಧೋನಿ ವಿರುದ್ಧ ಕಿಡಿಕಾರಿದ್ದಾರೆ. ಇನ್ನೂ ಕೆಲವರು ಧೋನಿ ಅಂತಹ ಆಟಗಾರರಿಂದ ಇಂತಹ ವರ್ತನೆಯನ್ನು ನಿರೀಕ್ಷೆ ಮಾಡಿರಲಿಲ್ಲ. ಇದು ಆಟಗಾರನೊಬ್ಬನಿಗೆ ಮಾಡಿದ ಅವಮಾನ ಎಂದು ಕಿಡಿ ಕಾರಿದ್ದಾರೆ.

Share This Article