ಬೆಂಗಳೂರು: ಕನ್ನಡದಲ್ಲಿ ಎರಡನೇ ಡಬ್ಬಿಂಗ್ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಇದು ತಮಿಳಿನ `ಆರಂಭಂ’ ಸಿನಿಮಾವನ್ನು ಕನ್ನಡದಲ್ಲಿ `ಧೀರ’ ಎಂದು ಹೆಸರಿಟ್ಟು ಡಬ್ ಮಾಡಿ ಬಿಡುಗಡೆಯಾಗಲು ಚಿತ್ರತಂಡ ಸಿದ್ಧವಾಗಿದೆ.
ಈ ಹಿಂದೆ ತಮಿಳು ನಟ ಅಜಿತ್ ಕುಮಾರ್ ಅಭಿನಯಿಸಿದ ಸಿನಿಮಾ ಕನ್ನಡದಲ್ಲಿ ಡಬ್ ಆಗಿ `ಸತ್ಯದೇವ್ ಐಪಿಎಸ್’ ಎಂಬ ಹೆಸರಿನಲ್ಲಿ ಬಿಡುಗಡೆಯಾಗಿತ್ತು. ಈಗ ಅವರು ಅಭಿನಯಿಸಿರುವ ಮತ್ತೊಂದು ತಮಿಳು ಸಿನಿಮಾ ಕನ್ನಡದಲ್ಲಿ ಡಬ್ ಆಗಿ ಬಿಡುಗಡೆ ಆಗುತ್ತಿದೆ.
ನಟ ಅಜಿತ್ ಅಭಿನಯದ `ಆರಂಭಂ’ ಚಿತ್ರವನ್ನು ಕನ್ನಡದಲ್ಲಿ `ಧೀರ’ ಎಂಬ ಹೆಸರಿನಲ್ಲಿ ಡಬ್ ಮಾಡಿ ತೆರೆಗೆ ತರಲು ನಿರ್ಮಾಪಕರು ಸಿದ್ಧವಾಗಿದ್ದಾರೆ. ಈಗಾಗಲೇ ಕನ್ನಡದಲ್ಲಿ ಈ ಸಿನಿಮಾದ ಚಿತ್ರೀಕರಣ ಮುಗಿದು ಸೆನ್ಸಾರ್ ಅನ್ನು ಮುಗಿಸಿ ಚಿತ್ರಮಂದಿರಕ್ಕೆ ಕಾಲಿಡಲು ಸಜ್ಜಾಗಿದೆ.
ಚಿತ್ರದ ಟೀಸರ್ ಅನ್ನು ಚಿತ್ರತಂಡ ಪ್ರಾಯೋಗಿಕವಾಗಿ ಬಿಡುಗಡೆ ಮಾಡಿದ್ದು, ದರ್ಶನ್ ಎಂಟರ್ ಪ್ರೈಸಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕ ಬಿ. ಕೃಷ್ಣಮೂರ್ತಿ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ನಟ ಆರ್ಯ, ನಟಿ ನಯನತಾರ, ತಾಪ್ಸಿ ಪನ್ನು ಅಭಿನಯಿಸಿದ್ದಾರೆ. ಇದೊಂದು ಲವ್ ಅಂಡ್ ಸಸ್ಪೆನ್ಸ್ ಸಿನಿಮಾವಾಗಿದೆ.
ಈ ಹಿಂದೆ ಸತ್ಯದೇವ್ ಐಪಿಎಸ್ ಬಿಡುಗಡೆ ಸಂದರ್ಭದಲ್ಲಿ ಜಗ್ಗೇಶ್, ವಾಟಾಳ್ ನಾಗರಾಜ್ ಸೇರಿದಂತೆ ಕನ್ನಡಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿತ್ತು. ಈ ವಿಚಾರದ ಬಗ್ಗೆ ನಿರ್ಮಾಪಕ ಕೃಷ್ಣಮೂರ್ತಿ ಅವರು ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ)ಗೆ ದೂರು ನೀಡಿದ್ದರು. ಈ ಸಂಬಂಧ ಅಡ್ಡಿಪಡಿಸಿದ್ದಕ್ಕೆ ಸಿಸಿಐ ಸಾರಾ ಗೋವಿಂದ್, ವಾಟಾಳ್ ನಾಗರಾಜ್, ಜಗ್ಗೇಶ್ ಅವರಿಗೆ ನೋಟಿಸ್ ಜಾರಿ ಮಾಡಿತ್ತು.
ಕೃಷ್ಣಮೂರ್ತಿಯವರು ಕನ್ನಡದಕ್ಕೆ ಡಬ್ ಮಾಡಿರುವ ಮುಂದಿನ ಚಿತ್ರ ಧೀರ ಬಿಡುಗಡೆಗೆ ಯಾರೂ ಯಾವುದೇ ರೀತಿ ಅಡೆ ತಡೆಗಳನ್ನ ಮಾಡಬಾರದೆಂದು ಸಿಸಿಐ ಆದೇಶ ಹೊರಡಿಸಿದೆ. ಹಾಗೆಯೇ ಸತ್ಯದೇವ್ ಐಪಿಎಸ್ ಚಿತ್ರ ಬಿಡುಗಡೆಗೆ ಆದ ತೊಡಕುಗಳ ಬಗ್ಗೆ ತನಿಖೆ ನಡೆಸುವಂತೆ ಡಿಜಿ (ಇನ್ವೆಸ್ಟಿಗೇಷನ್) ಅವರಿಗೆ ಸಿಸಿಐ ಆದೇಶ ಹೊರಡಿಸಿತ್ತು.