ಧಾರವಾಡ: ಜಿಲ್ಲೆಯ ಕಾಂಗ್ರೆಸ್ ಮುಖಂಡರ ಪುತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಚರಂತಿಮಠ ಗಾರ್ಡನ್ ಬಡಾವಣೆಯಲ್ಲಿ ನಡೆದಿದೆ.
ಪೂರ್ಣಿಮಾ (23) ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ. ಪೂರ್ಣಿಮಾ ಧಾರವಾಡದ ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಶಿವಶಂಕರಪ್ಪ ಹಂಪಣ್ಣ ಎಂಬವರ ಪುತ್ರಿಯಾಗಿದ್ದಾರೆ.
ಉದ್ಯಮಿಯೂ ಆಗಿರುವ ಶಿವಶಂಕರ ಹಂಪಣ್ಣ ಅವರು ಮಗಳಾದ ಪೂರ್ಣಿಮಾ ಉನ್ನತ ಶಿಕ್ಷಣ ಪಡೆಯಲು ಬೆಂಗಳೂರಿಗೆ ಹೋಗಲು ಇಚ್ಚಿಸಿದ್ದರು. ಮನೆಯಲ್ಲಿ ಕುಟುಂಬಸ್ಥರ ಪ್ರೀತಿಗೆ ಪಾತ್ರಳಾಗಿದ್ದ ಪೂರ್ಣಿಮಾರನ್ನು ಬೆಂಗಳೂರಿಗೆ ಕಳುಹಿಸಲು ತಂದೆ ಹಿಂದೇಟು ಹಾಕಿದಾಗ ಮನನೊಂದು ಪೂರ್ಣಿಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಧಾರವಾಡ ಖಾಸಗಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಪೂರ್ಣಿಮಾ ಪದವಿ ಬಳಿಕ ಬೆಂಗಳೂರಿಗೆ ಹೋಗುವ ಇಚ್ಛೆ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ಶನಿವಾರ ರಾತ್ರಿ ಮನೆಯಲ್ಲಿ ಚರ್ಚೆ ಕೂಡಾ ನಡೆದಿತ್ತು ಎಂದು ತಿಳಿದು ಬಂದಿದೆ.
ಸದ್ಯ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿರುವ ಜಿಲ್ಲೆಯ ಶಹರ ಪೊಲೀಸ್ ಠಾಣೆ ಪೊಲೀಸರು, ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ದಾಖಲಿಸಿ ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.