ಧಾರವಾಡ: ಗ್ರಾಮದ ಸವರ್ಣಿಯರ ದೌರ್ಜನ್ಯಕ್ಕೆ ಬೇಸತ್ತು ಕುಟುಂಬವೊಂದು ನ್ಯಾಯಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಂಗಲಾಚಿದ ಘಟನೆ ಧಾರವಾಡದಲ್ಲಿ ನಡೆದಿದೆ.
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ವಿಠಲಾಪೂರ ಗ್ರಾಮದ ಲಕ್ಷ್ಮವ್ವ ಹರಿಜನ ಎಂಬವರ ಮೇಲೆ ದೌರ್ಜನ್ಯ ನಡೆದಿದೆ. ಊರಿನ ಕೆಲವು ಸವರ್ಣಿಯರ ಗುಂಪು ಬಹಿಷ್ಕಾರ ಹಾಕಿ ದೌರ್ಜನ್ಯ ಎಸಗಿದೆ ಎಂದು ಲಕ್ಷ್ಮವ್ವ ಆರೋಪಿಸಿದ್ದಾರೆ.
ಗ್ರಾಮದಲ್ಲಿ ಕಟ್ಟಿಕೊಂಡಿದ್ದ ಸಣ್ಣ ಜೋಪಡಿಯೊಂದನ್ನು ಸಹ ನಾಶ ಮಾಡಿದ್ದಾರೆ ಹಾಗೂ ಮನೆ ಕೂಡಾ ಕಟ್ಟದಂತೆ ದಬ್ಬಾಳಿಕೆ ಮಾಡಿದ್ದಾರೆ ಎಂದು ಆರೋಪಿಸಿರುವ ಈ ಮಹಿಳೆ, ನನ್ನ ಮಕ್ಕಳನ್ನು ಸಹ ಊರಲ್ಲಿ ಯಾರು ಮಾತನಾಡಿಸುವಂತಿಲ್ಲ, ಯಾವುದೆ ಅಂಗಡಿಗಳಲ್ಲಿ ವ್ಯವಹರಿಸದಂತೆ ನಿರ್ಬಂಧ ಹೇರಿದ್ದಾರೆ ಎಂದು ದೂರಿದ್ದಾರೆ.
ಕೆಲ ದಿನಗಳ ಹಿಂದೆ ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಕೂಡಾ ಭೇಟಿ ನೀಡಿ ಸ್ಥಳಿಯರಿಂದ ಆದ ಅನ್ಯಾಯಕ್ಕೆ ನ್ಯಾಯ ಕೊಡಿಸುವದಾಗಿ ಭರವಸೆ ಸಹ ಜಿಲ್ಲಾಧಿಕಾರಿ ನೀಡಿದ್ದರು. ಆದರೆ ಇದುವರೆಗೆ ಸಹ ಈ ಮಹಿಳೆ ಲಕ್ಷ್ಮವ್ವಳಿಗೆ ಯಾವುದೆ ನ್ಯಾಯ ಸಿಕ್ಕಿಲ್ಲ ಮತ್ತು ಊರಿನಿಂದ ಹಾಕಿದ ಬಹಿಷ್ಕಾರ ಕೂಡ ಬದಲಾಗಿಲ್ಲ.
ಮಕ್ಕಳನ್ನು ಯಾರಾದರೂ ಮಾತನಾಡಿಸಿದ್ರೆ ಅವರನ್ನು ಹೆದರಿಸುತ್ತಿದ್ದಾರೆ. ಹೀಗಾಗಿ ದಯಮಾಡಿ ನನಗೆ ನ್ಯಾಯ ನೀಡಿ ಎಂದು ಲಕ್ಷ್ಮವ್ವ ಕೇಳಿಕೊಂಡಿದ್ದಾರೆ.