Connect with us

Dharwad

ಧಾರವಾಡದಲ್ಲಿ ಎಸ್‍ಪಿಗಳ ಮಧ್ಯೆ ಅಧಿಕಾರಕ್ಕಾಗಿ ಕಚ್ಚಾಟ

Published

on

ಧಾರವಾಡ: ಅಧಿಕಾರ, ಕುರ್ಚಿಗಾಗಿ ರಾಜಕಾರಣಿಗಳ ಮಧ್ಯೆ ಕಚ್ಚಾಟ ನಡೆಯುವುದು ಸಾಮಾನ್ಯ. ಆದರೆ ಪೊಲೀಸ್ ಇಲಾಖೆಯಂತಹ ಶಿಸ್ತು ಬದ್ಧ ಅಧಿಕಾರಿಗಳು ಸಹ ಸ್ಥಾನಮಾನದ ಕುರಿತು ಗಲಾಟೆ ಮಾಡಿಕೊಳ್ಳುವ ಮೂಲಕ ಮುಜುಗರಕ್ಕೀಡಾಗಿದ್ದಾರೆ.

ಧಾರವಾಡ ಹೊರವಲಯದ ಕಲಘಟಗಿ ರಸ್ತೆಯಲ್ಲಿರುವ ಪೊಲೀಸ್ ತರಬೇತಿ ಶಾಲೆ ವಿವಾದದ ಕೇಂದ್ರವಾಗಿದ್ದು, ಹೊಸದಾಗಿ ವರ್ಗವಾಗಿ ಬಂದಿರುವ ಅಧೀಕ್ಷಕರು ಅಧಿಕಾರ ಪಡೆಯಲು ಎರಡು ದಿನದಿಂದ ಹಠ ಹಿಡಿದು ಕುಳಿತಿದ್ದಾರೆ. ಇನ್ನೊಂದೆಡೆ ಪ್ರಸ್ತುತ ಎಸ್‍ಪಿ ಮಾತ್ರ ಕುರ್ಚಿ ಬಿಟ್ಟು ಏಳುತ್ತಿಲ್ಲ. ಸದಾ ಒಂದಿಲ್ಲೊಂದು ವಿವಾದಕ್ಕೆ ಕಾರಣವಾಗಿರುವ ಈ ಶಾಲೆಯ ಹಾಲಿ ಅಧೀಕ್ಷಕ ಆರ್.ಎ. ಪಾರಶೆಟ್ಟಿಯೇ ಈಗ ಮತ್ತೊಂದು ಹೊಸ ವಿವಾದಕ್ಕೆ ಕಾರಣವಾಗಿದ್ದಾರೆ.

ಇವರ ಜಾಗಕ್ಕೆ ವಿಜಯಪುರದಿಂದ ಎನ್.ಬಿ.ಜಾಧವ್ ಎಂಬವರನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಅದರನ್ವಯ ಅವರು ಆದೇಶ ಪ್ರತಿ ಹಿಡಿದು ಬಂದಿದ್ದಾರೆ. ಆದರೆ ಪಾರಶೆಟ್ಟಿಯವರು ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಹೀಗಾಗಿ ಜಾಧವ್ ಅವರು ನನಗೆ ನ್ಯಾಯ ದೊರಕಿಸಿಕೊಡಿ ಎಂದು ಗೋಳಿಡುತ್ತಿದ್ದಾರೆ.

ಒಂದೆಡೆ ಪಾರಶೆಟ್ಟಿ ತಮ್ಮ ಚೇಂಬರ್ ಬೀಗ ಹಾಕಿಕೊಂಡು ಹೋಗಿದ್ದರು. ಈ ಸಂದರ್ಭದಲ್ಲಿ ಅಲ್ಲೇ ಕಾಯುತ್ತ ನಿಂತಿದ್ದ ಜಾಧವ್ ಅವರು, ಪಾರಶೆಟ್ಟಿ ಬಂದು ಚೇಂಬರ್ ಬಾಗಿಲು ತೆರೆಯುತ್ತಿದ್ದಂತೆ ತಾವೂ ಒಳ ಪ್ರವೇಶಿಸಿ, ಅಧಿಕಾರ ಬಿಟ್ಟು ಕೊಡಿ ಎಂದಿದ್ದಾರೆ. ಆಗ ಪಾರಶೆಟ್ಟಿಯವರು ನಾನು ಗೃಹ ಸಚಿವರನ್ನು ಭೇಟಿಯಾಗಿ ಬಂದಿರುವೆ. ನೀವು ಬರುವ ಮುಂಚೆಯೇ ನಾನು ನಿವೃತ್ತಿಯಂಚಿನಲ್ಲಿರುವ ಕಾರಣ ವರ್ಗಾವಣೆ ಮಾಡಬೇಡಿ ಎಂದು ಇಲಾಖೆಗೆ ಮನವಿ ಮಾಡಿಕೊಂಡಿದ್ದೇನೆ. ಈಗ ವರ್ಗಾವಣೆ ಆದೇಶಕ್ಕೆ ಕೆಎಟಿಯಿಂದ ತಡೆ ಕೂಡ ತರುತ್ತೇನೆ. ಹೀಗಾಗಿ ಈಗ ಅಧಿಕಾರ ಬಿಟ್ಟುಕೊಡುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ಇಬ್ಬರ ಮಧ್ಯೆ ಕೆಲಹೊತ್ತು ಮಾತಿನ ಚಕಮಕಿಯೂ ನಡೆದಿದೆ. ಎಸ್ಪಿ ದರ್ಜೆಯ ಅಧಿಕಾರಿಗಳ ಮಧ್ಯೆ ನಡೆದಿರುವ ಕುರ್ಚಿ ಸಮರ ತರಬೇತಿ ಶಾಲೆ ಆವರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

Click to comment

Leave a Reply

Your email address will not be published. Required fields are marked *