ಧಾರವಾಡ: ಮಹಾರಾಷ್ಟ್ರದ ಕೊಲ್ಹಾಪುರದಿಂದ ಬೆಂಗಳೂರಿಗೆ ಬರುತ್ತಿದ್ದ ರಾಣಿ ಚನ್ನಮ್ಮ ಎಕ್ಸ್ ಪ್ರೆಸ್ ರೈಲು ಮಾರ್ಗ ಮಧ್ಯದಲ್ಲೇ ಸುಮಾರು 7 ಗಂಟೆಗಳ ಕಾಲ ನಿಂತ ಹಿನ್ನೆಲೆಯಲ್ಲಿ ಬೆಂಗಳೂರು ತೆರಳಬೇಕಿದ್ದ ಪರೀಕ್ಷಾರ್ಥಿಗಳು ಪರದಾಡಿದಾಡಿದ್ದಾರೆ.
ಮುಖ್ಯವಾಗಿ ಬೆಳಗಾವಿ ಹಾಗೂ ಧಾರವಾಡ ಭಾಗದಿಂದ ಬೆಂಗಳೂರಿಗೆ ಡಿ.ಆರ್ ಪರೀಕ್ಷೆ ಬರೆಯಲು ಇದೇ ಟ್ರೈನ್ ನಲ್ಲಿ ಬರ್ತಾ ಇದ್ದ ಸಾವಿರಾರೂ ಅಭ್ಯರ್ಥಿಗಳು ಸಮಯಕ್ಕೆ ಸರಿಯಾಗಿ ಬೆಂಗಳೂರು ತಲುಪಲಾಗದೇ ಪರೀಕ್ಷೆಯಿಂದ ವಂಚಿತರಾಗುವಂತಾಗಿದೆ. ಶನಿವಾರ ಮಧ್ಯಾಹ್ನ ಕೊಲ್ಹಾಪುರ ಬಿಟ್ಟ ಈ ಟ್ರೈನ್ ಇಂದು ಬೆಳಗ್ಗೆ 6.45ಕ್ಕೆ ಬೆಂಗಳೂರು ತಲುಪಬೇಕಿತ್ತು. ಆದ್ರೆ 7 ಗಂಟೆಗಳ ಕಾಲ ತಡವಾದ ಹಿನ್ನೆಲೆಯಲ್ಲಿ ಈ ಟ್ರೈನ್‍ಗಾಗಿ ಎಲ್ಲ ನಿಲ್ದಾಣಗಳಲ್ಲಿ ಕಾಯುತ್ತ ನಿಂತ ಪ್ರಯಾಣಿಕರು ರೋಸಿಹೋಗಿದ್ದಾರೆ.
Advertisement
Advertisement
ಕೊಲ್ಹಾಪುರದಿಂದ ಹೊರಟ ಈ ಟ್ರೈನ್ ಬೆಳಗಾವಿ ದಾಟಿದ ಬಳಿಕ ಧಾರವಾಡಕ್ಕೂ ಮುಂಚೆ ಬರುವ ಕಂಬಾರಗಣವಿ ನಿಲ್ದಾಣದಲ್ಲಿ ನಿಂತು ಬಿಟ್ಟಿತ್ತು. ಸುಮಾರು 9 ಗಂಟೆ ಹೊತ್ತಿಗೆ ಟ್ರೈನ್‍ನ ಎಲ್ಲ ಬೋಗಿಗಳನ್ನು ಕಂಬಾರಗಣವಿ ನಿಲ್ದಾಣದಲ್ಲಿ ಬಿಟ್ಟು ಇಂಜಿನ್ ಮಾತ್ರ ತೆಗೆದುಕೊಂಡು ಹೋಗಿ ಬಿಡಲಾಗಿದೆ. ಮುಂದಿನ ಮಾರ್ಗದಲ್ಲಿ ಗೂಡ್ಸ್ ಟ್ರೈನ್ ವೊಂದರ ಇಂಜಿನ್ ಕೆಟ್ಟ ಹಿನ್ನೆಲೆಯಲ್ಲಿ ಅದನ್ನು ಮಾರ್ಗದಿಂದ ತೆರವುಗೊಳಿಸಲು ರಾಣಿ ಚನ್ನಮ್ಮ ಎಕ್ಸ್ ಪ್ರೆಸ್ ನ ಇಂಜಿನ್ ಬಳಸಿದ್ರು. ಆದರೆ ಈ ಇಂಜಿನ್ ಗೂಡ್ಸ್ ರೈಲನ್ನು ಧಾರವಾಡಕ್ಕೆ ತಲುಪಿಸಿ ಮರಳಿ ಬೋಗಿಗೆ ಬಂದು ಸೇರಿದ್ದು, ನಸುಕಿನ ಜಾವ 2 ಗಂಟೆಗೆ. ಅಲ್ಲಿಯವರೆಗೂ ಯಾವುದೇ ಸರಿಯಾದ ವ್ಯವಸ್ಥೆಯೂ ಇಲ್ಲದ ಕಂಬಾರಗಣವಿಯ ಪುಟ್ಟ ನಿಲ್ದಾಣದಲ್ಲಿಯೇ ಪ್ರಯಾಣಿಕರು ಪರದಾಡಬೇಕಾಯಿತು.
Advertisement
Advertisement
ಧಾರವಾಡ ನಿಲ್ದಾಣದಲ್ಲಿಯೂ 200ಕ್ಕೂ ಹೆಚ್ಚು ಪ್ರಯಾಣಿಕರು ಹಾಗೂ ಪರೀಕ್ಷಾರ್ಥಿಗಳು ಟ್ರೈನ್‍ಗಾಗಿ ಕಾಯುತ್ತಾ, ರೈಲ್ವೆ ಸಿಬ್ಬಂದಿ ಜೊತೆಗೆ ವಾಗ್ವಾದಕ್ಕಿಳಿದಿದ್ರು. ಕೊನೆಗೂ ನಸುಕಿನ ಜಾವ 5:30ಕ್ಕೆ ಟ್ರೈನ್ ಹೊರಟಿತಾದ್ರೂ, ಬೆಳಗ್ಗೆ 7 ಗಂಟೆಗೆ ಬೆಂಗಳೂರು ತಲುಪಬೇಕಾಗಿದ್ದ ರೈಲು ಮಧ್ಯಾಹ್ನ 1 ಗಂಟೆಗೆ ತಲುಪಲಿದೆ. ಈ ಹಿನ್ನೆಲೆಯಲ್ಲಿ ಈಗ ಉತ್ತರ ಕರ್ನಾಟಕ ಭಾಗದ ಸಾವಿರಾರೂ ಅಭ್ಯರ್ಥಿಗಳು ತಮ್ಮ ತಪ್ಪು ಇಲ್ಲದೆ ಡಿ.ಆರ್ ಪರೀಕ್ಷೆಯಿಂದ ವಂಚಿತರಾಗುವಂತಾಗಿದ್ದು. ಈ ಕೂಡಲೇ ಪರೀಕ್ಷೆ ಮುಂದೂಡಬೇಕು. ಇಲ್ಲವೇ ರಾಣಿ ಚನ್ನಮ್ಮ ಟ್ರೈನ್‍ಗೆ ಟಿಕೆಟ್ ತೆಗೆಸಿದ್ದ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಮರು ಅವಕಾಶ ಕಲ್ಪಿಸಿಕೊಡಬೇಕು ಅನ್ನೋ ಆಗ್ರಹಗಳು ಕೇಳಿ ಬರುತ್ತಿವೆ.