ಧಾರವಾಡ: ರೈಲು ಹಳಿಯ ಮೇಲೆ ವ್ಯಕ್ತಿಯ ಶವವೊಂದು ಪತ್ತೆಯಾಗಿರುವ ಘಟನೆ ಧಾರವಾಡದ ನವಲೂರು ಗ್ರಾಮದ ಹತ್ತಿರ ಸೋಮವಾರ ಪತ್ತೆಯಾಗಿದೆ.
ಮಹ್ಮದ್ ರಸೂಲ್ (28) ಮೃತ ವ್ಯಕ್ತಿ. ಮಹ್ಮದ್ ರಸೂಲ್ ಧಾರವಾಡ ನಗರದ ಅಗಸಿ ಬಡಾವಣೆಯ ನಿವಾಸಿ ಎಂದು ತಿಳಿದು ಬಂದಿದೆ. ರವಿವಾರ ಮನೆಯಿಂದ ಹೊರ ಹೋಗಿದ್ದ ರಸೂಲ್ ಸೋಮವಾರ ರೈಲು ಹಳಿಯ ಮೇಲೆ ಶವವಾಗಿ ಪತ್ತಯಾಗಿದ್ದಾನೆ. ರಸೂಲ್ ಪಾಲಕರು ನಮ್ಮ ಮಗನನ್ನು ಕೊಲೆ ಮಾಡಲಾಗಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ರಸೂಲ್ ಮೇಲೆ ರೈಲುಗಳು ಹರಿದ ಪರಿಣಾಮ ದೇಹ ತುಂಡು ತುಂಡಾಗಿ ಬಿದ್ದಿದೆ. ರುಂಡ ಹಾಗೂ ಎರಡು ಕೈಗಳು ಕತ್ತರಿಸಿ ಹೋಗಿದ್ದು ಅವುಗಳು ಇನ್ನೊಂದು ಭಾಗದಲ್ಲಿ ಬಿದ್ದಿದ್ದವು. ಸಾವನ್ನಪ್ಪಿದ ರಸೂಲ್ ಧಾರವಾಡ ನಗರದಲ್ಲಿ ಪಾನ್ ಶಾಪ್ ನಡೆಸುತ್ತಿದ್ದು, ಕುಡಿತದ ದಾಸನಾಗಿದ್ದ ಎಂದು ತಿಳಿದು ಬಂದಿದೆ. ಹುಬ್ಬಳ್ಳಿ ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.