ಧಾರವಾಡ: ದೇಶದೊಳಗಿನ ಭಯೋತ್ಪಾದನೆಯನ್ನು ಮೋದಿ ನಿಲ್ಲಿಸಿದ್ದಾರೆ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಯೋತ್ಪಾದನೆ ಅನ್ನೋದು ಈಗ ಜಮ್ಮ-ಕಾಶ್ಮೀರಕ್ಕೆ ಮಾತ್ರ ಸಿಮೀತವಾಗಿದೆ. ಅದನ್ನು ಈ ಐದು ವರ್ಷದ ಅವಧಿಯಲ್ಲಿ ಮೋದಿ ನಿಶ್ಚಿತವಾಗಿ ಅಲ್ಲಿಯೂ ನಿಲ್ಲಿಸುತ್ತಾರೆ ಎಂದು ಹೇಳಿದರು.
ಪಾಕ್ ಪ್ರಧಾನಿ ಇಮ್ರಾನ್ ಖಾನ್ 40 ಸಾವಿರ ಭಯೋತ್ಪಾದಕರು ಪಾಕಿಸ್ತಾನದಲ್ಲಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ಅವರನ್ನು ಪಾಕಿಸ್ತಾನ ನಾಶ ಮಾಡಬೇಕು. ಪಾಕ್ ಭಯೋತ್ಪಾದಕ ರಾಷ್ಟ್ರ ಎಂದು ಘೋಷಣೆ ಮಾಡಲು ಇಮ್ರಾನ್ ಖಾನ್ ಹೇಳಿಕೆಯೇ ಸಾಕು. 40 ಸಾವಿರ ಭಯೋತ್ಪಾದಕರು ಅಂದರೆ ಇಡೀ ಜಗತ್ತು ನಡಗುವಂತಹ ವಿಷಯ ಇದು. ಭಯೋತ್ಪಾದಕರನ್ನು ನಾಶ ಮಾಡಲು ಭಾರತದ ಸಹಾಯವನ್ನು ಪಾಕ್ ಪಡೆದುಕೊಳ್ಳಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಕರ್ನಾಟಕ ರಾಜಕಾರಣ ವಿಚಾರವಾಗಿ ಮಾತನಾಡಿದ ಮುತಾಲಿಕ್, ರಾಜ್ಯದಲ್ಲಿ ರಾಜಕೀಯ ಅಸಭ್ಯ, ಅಶ್ಲೀಲ ಮತ್ತು ಅಸಹ್ಯವಾಗಿ ನಡೆಯುತ್ತಿದೆ. ಅದು ಯಾವುದೇ ಪಕ್ಷ ಇರಬಹುದು ಜನ ಛಿ ಥೂ ಅಂತಾ ಇದ್ದಾರೆ. ಈಗ ನಡೆಯುತ್ತಿರುವ ಬೆಳವಣಿಗೆ ಸರಿಯಲ್ಲ. ಇಂತಹ ಸಂದರ್ಭದಲ್ಲಿ ಸಿಎಂ ಆಗುತ್ತಿರುವ ಯಡಿಯೂರಪ್ಪನವರಿಗೆ ಅಭಿನಂದನೆ ಹೇಳುತ್ತೇನೆ ಎಂದು ಹೇಳಿದರು.