ಧಾರವಾಡ: ಕಳೆದ ಸೆಪ್ಟಂಬರ್ 25ರಂದು ನಡೆದಿದ್ದ ದಾಂಡೇಲಿ ವ್ಯಕ್ತಿಯ ಶೂಟೌಟ್ ಪ್ರಕರಣವನ್ನು ಬೇಧಿಸುವಲ್ಲಿ ಧಾರವಾಡ ಪೊಲೀಸರು ಯಶಸ್ವಿಯಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರಸಭೆ ಚುನಾವಣೆಯಲ್ಲಿ ಉಂಟಾಗಿದ್ದ ರಾಜಕೀಯ ವೈಷ್ಯಮ್ಯವೇ ಈ ಕೊಲೆಗೆ ಕಾರಣ ಎನ್ನುವುದು ಬಹಿರಂಗಗೊಂಡಿದೆ. ದಾಂಡೇಲಿಯ ಶ್ಯಾಮಸುಂದರ ದೆಹಲಿಗೆ ಹೊರಡಲು ಕಾರಿನಲ್ಲಿ ಬರುತ್ತಿದ್ದಾಗ, ಧಾರವಾಡ ಹೊರವಲಯದ ಹಳಿಯಾಳ ರಸ್ತೆಯಲ್ಲಿ ಕಾರು ಹಿಂಬಾಲಿಸಿಕೊಂಡು ಬಂದಿದ್ದ ಬೈಕ್ ಸವಾರರು, ಕಾರ್ ಅಡ್ಡಗಟ್ಟಿ ಗುಂಡಿಕ್ಕಿ ಪರಾರಿಯಾಗಿದ್ದರು.
ಘಟನೆ ನಡೆದ 72 ಗಂಟೆಗಳಲ್ಲಿಯೇ ಪ್ರಕರಣ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಒಟ್ಟು 70 ಜನರ 7 ತಂಡಗಳಲ್ಲಿ ತನಿಖೆ ಕೈಗೊಂಡಿದ್ದರು. ಕೊಲೆಗೆ ರಾಜಕೀಯ ವೈಷ್ಯಮ್ಯವೇ ಕಾರಣ ಎಂದು ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ ಮಾಹಿತಿ ನೀಡಿದ್ದಾರೆ. ದಾಂಡೇಲಿಯ ಸುಬ್ರಮಣ್ಯ ಸಮರು, ರಾಜೇಶ ರುದ್ರಪಾಟಿ, ಗೌರೀಶ ಸುಳ್ಳದ ಹಾಗೂ ಉಮೇಶ ಕೊಲೆ ಮಾಡಿರುವ ಆರೋಪಿಗಳು. ಇವರು ದಾಂಡೇಲಿಯವರೇ ಆಗಿದ್ದು, ಸುಬ್ರಮಣ್ಯನೇ ಶ್ಯಾಮಸುಂದರನ ಮೇಲೆ ಗುಂಡು ಹಾರಿಸಿದ್ದು ಎಂದು ಒಪ್ಪಿಕೊಂಡಿದ್ದಾನೆ.
ಈ ಕೊಲೆಗೆ ರಾಜೇಶ ರುದ್ರಪಾಟಿ ಸುಪಾರಿ ನೀಡಿದ್ದು, ಕಳೆದ ವರ್ಷ ನಡೆದಿದ್ದ ನಗರ ಸಭೆ ಚುನಾವಣೆಯಲ್ಲಿ ಶ್ಯಾಮಸುಂದರ ತನ್ನ ಅತ್ತಿಗೆಯನ್ನು ಚುನಾವಣೆಗೆ ನಿಲ್ಲಿಸಿ ರಾಜೇಶ ರುದ್ರಪಾಟಿಯನ್ನು ಎದುರು ಹಾಕಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ರಾಜೇಶ ಮೂವರು ಯುವಕರಿಗ ಕಂಟ್ರಿ ಪಿಸ್ತೂಲ್ ತಂದುಕೊಟ್ಟು, ಕೃತ್ಯಕ್ಕೆ ಪ್ಲ್ಯಾನ್ ರೂಪಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.