ಧಾರವಾಡ: ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ವೇಷದಲ್ಲಿ ಬಂದು ಹಾಡಹಗಲೇ ಬಾಳೆ ತೋಟವನ್ನು ಗಿಡಗಳ ಸಮೇತ ಲೂಟಿ ಮಾಡಿಕೊಂಡು ಹೋಗಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ಧಾರವಾಡ ತಾಲೂಕಿನ ಸೋಮಾಪುರ ಗ್ರಾಮದ ರಾಯಪ್ಪ ಸುಳ್ಳದ ಎಂಬವರ ತೋಟದಲ್ಲಿ ಈ ಕಳ್ಳತನ ನಡೆದಿದೆ. ಸುಮಾರು 1 ಲಕ್ಷ ಮೌಲ್ಯದಷ್ಟು 200 ಬಾಳೆಗೊಣೆ ಹಾಗೂ ಅಷ್ಟೇ ಬಾಳೆ ಗಿಡಗಳನ್ನು ಸಹ ಕಡಿದುಕೊಂಡು ಹೋಗಿದ್ದಾರೆ.
ತೋಟದ ಮಾಲೀಕ ರಾಯಪ್ಪ ಇಲ್ಲದ ಸಂದರ್ಭದಲ್ಲಿ ಕಳ್ಳರು ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಂತೆ ಬಂದಿದ್ದರು. ಆದರೆ ಅಕ್ಕಪಕ್ಕದ ಜಮೀನನಲ್ಲಿ ಇದ್ದವರು ರಾಯಪ್ಪ ಅವರೇ ಬಾಳೆ ತೆಗೆದುಕೊಳ್ಳಲು ಹೇಳಿರಬಹುದು ಎಂದು ತಿಳಿದುಕೊಂಡು ಸುಮ್ಮನಾಗಿದ್ದಾರೆ.
ಈ ಕಳ್ಳತನ ನಡೆದಿದ್ದರೂ ಸುಮಾರು ಒಂದೂವರೆ ಗಂಟೆಗಳ ಕಾಲ ಯಾರಿಗೂ ಸಂಶಯ ಬಂದಿಲ್ಲ. ಆದ್ರೆ ಇಂದು ಬೆಳಗ್ಗೆ ಮಾಲೀಕ ರಾಯಪ್ಪ ತೋಟಕ್ಕೆ ಬಂದು ನೋಡಿದಾಗಲೇ ಹಾಡಹಗಲೇ ತಮ್ಮ ತೋಟವನ್ನು ದೋಚಿದ್ದು ತಿಳಿದು ಒಂದು ಕ್ಷಣ ದಂಗಾದ್ರು.
ಅಯ್ಯಪ್ಪ ಸ್ವಾಮಿ ಪೂಜೆ ಎಲ್ಲೆ ನಡೆದರೂ ರಾಯಪ್ಪ ಅವರು ದೇಣಿಗೆ ರೂಪದಲ್ಲಿ ಬಾಳೆ ಹಣ್ಣು ಕೊಡುತ್ತಾ ಬಂದಿದ್ದಾರೆ. ಆದರೆ ಇಂದು ತನ್ನ ತೋಟವನ್ನು ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ವೇಷದಲ್ಲೇ ಬಂದು ಲೂಟಿ ಮಾಡಿದ್ದರಿಂದ ಅವರಿಗೆ ಸಾಕಷ್ಟು ನೋವುಂಟಾಗಿದೆ.
ಈ ಘಟನೆ ಧಾರವಾಡ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.