– ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿದ್ರೂ ಕ್ಯಾರೇ ಎನ್ನಲಿಲ್ಲ ಕ್ರೂರಿಗಳು
ಧಾರವಾಡ: ದೇವಸ್ಥಾನದ ವಿಚಾರವಾಗಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಗೂ ಆತನ ಮಗನನ್ನು ಬರ್ಬರವಾಗಿ ಕೊಲೆಗೈದ ಅಮಾನವೀಯ ಘಟನೆ ಕಲಘಟಗಿ ತಾಲೂಕಿನ ಜಮ್ಮಿಹಾಳ ಗ್ರಾಮದಲ್ಲಿ ನಡೆದಿದೆ.
ಜಮ್ಮಿಹಾಳ ಗ್ರಾಮದ ವೀರಭದ್ರಪ್ಪ ಸತ್ತೂರು (55) ಹಾಗೂ ರವಿಕುಮಾರ್ ಸತ್ತೂರು (29) ಕೊಲೆಯಾದ ತಂದೆ-ಮಗ. ಅದೇ ಗ್ರಾಮದ ಅಕ್ಕಿ ಕುಟುಂಬದ ಕೆಲವರು ಕೃತ್ಯ ಎಸಗಿದ ಆರೋಪಿಗಳು. ಗ್ರಾಮದ ಹೊರ ವಲಯದಲ್ಲಿ ಸೋಮವಾರ ರಾತ್ರಿ ಘಟನೆ ನಡೆದಿದೆ.
ಜಮೀನು ಹಾಗೂ ಬೂದನಗುಡ್ಡದ ಬಸವೇಶ್ವರ ದೇವಸ್ಥಾನ ವಿಚಾರವಾಗಿ ಈ ಹಿಂದೆ ಸುತ್ತೂರು ಹಾಗೂ ಅಕ್ಕಿ ಕುಟುಂಬಗಳ ನಡುವೆ ಜಗಳವಾಗಿತ್ತು. ಸೋಮವಾರ ರಾತ್ರಿ 11 ಗಂಟೆ ಸುಮಾರು ಎರಡೂ ಕುಟುಂಬಗಳ ಸದಸ್ಯರ ಮಧ್ಯೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ್ದಾರೆ. ವೀರಭದ್ರಪ್ಪ ಅವರ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಅಷ್ಟೇ ಅಲ್ಲ ಕೆಲವರ ಮೇಲೆ ಹಲ್ಲೆ ಮಾಡಲಾಗಿದ್ದು, ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದವರ ಬಗ್ಗೆ ಆರೋಪಿಗಳು ಕಿಂಚಿತ್ತು ಕರುಣೆ ತೋರಲಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಧಾರವಾಡ ಎಸ್‍ಪಿ ವರ್ತಿಕಾ ಕಟಿಯಾರ್, ವೀರಭದ್ರಪ್ಪ ಸ್ಥಳದಲ್ಲೇ ಸಾವನ್ನಪಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರವಿಕುಮಾರ್ ನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ 7 ಗಂಟೆ ಸುಮಾರು ಮೃತಪಟ್ಟಿದ್ದಾನೆ. ಉಳಿದಂತೆ 5 ಜನ ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಕಲ್ಲಪ್ಪ ಸತ್ತೂರು ಅವರು ಕಲಘಟಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ನಮ್ಮ ಸಿಬ್ಬಂದಿ 17 ಜನ ಆರೋಪಿಗಳ ಪೈಕಿ 13 ಮಂದಿಯನ್ನು ಬಂಧಿಸಿದ್ದಾರೆ. ಈಗಾಗಲೇ ವಿಚಾರಣೆ ಕೂಡ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೆ ಜಮ್ಮಿಹಾಳ ಗ್ರಾಮದಲ್ಲಿ ಸದ್ಯ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ ಎಂದು ತಿಳಿಸಿದರು.