ಧಾರವಾಡ: ಬೆಂಗಳೂರಿನ ಪಾದರಾಯನಪುರದಲ್ಲಿ ಗಲಾಟೆ ಮಾಡಿದವರಿಗೆ ಎಲ್ಲಾದ್ರು ಒಂದು ಕಡೆ ಇಡಲೇಬೇಕಲ್ಲಾ. ಇಡೀ ರಾಜ್ಯದಲ್ಲಿ ರಾಮನಗರ ಒಂದೇ ಇದೆ ಎಂದು ಸೀಮಿತವಾಗಬೇಡಿ ಎಂದು ಸಚಿವ ಜಗದೀಶ್ ಶೆಟ್ಟರ್ ಮಾಜಿ ಸಿಎಂ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.
ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಬಳಿ ಕೋವಿಡ್-19 ಪರೀಕ್ಷೆಯ ಗಂಟಲು ದ್ರವ ಮಾದರಿ ಸಂಚಾರ ವಾಹನ ಉದ್ಘಾಟನೆ ಮಾಡಿ ಮಾತನಾಡಿದ ಅವರು, ರಾಮನಗರ ಜೈಲು ಬಿಟ್ಟು ಬೇರೆ ಕಡೆ ಪಾದರಾಯನಪುರ ಆರೋಪಿಗಳನ್ನು ಇಟ್ಟರೆ, ಅಲ್ಲಿ ಕೂಡಾ ಜನ, ಊರು ಹಾಗೂ ಅಧಿಕಾರಿಗಳು ಇದ್ದೇ ಇರುತ್ತಾರೆ. ಇಡೀ ರಾಜ್ಯದಲ್ಲಿ ರಾಮನಗರ ಒಂದೇ ಇದೆ ಎಂದು ಸೀಮಿತವಾಗಿ ನೋಡಬೇಡಿ. ನೀವು ರಾಜ್ಯ ನಾಯಕರು ಹಾಗೂ ಮಾಜಿ ಸಿಎಂ ಆಗಿದ್ದವರು. ಇಡೀ ರಾಜ್ಯದಲ್ಲಿ ಎಲ್ಲಿಟ್ಟರೆ ಏನಾಗುತ್ತೆ ಅನ್ನೊದನ್ನ ವಿಚಾರ ಮಾಡಬೇಕು ಎಂದು ಹೆಚ್‍ಡಿಕೆಗೆ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದರು.
Advertisement
Advertisement
ಇದೇ ವೇಳೆ ಪ್ರತಿ ಜಿಲ್ಲೆಯಲ್ಲಿ ಕೊರೊನಾ ವೈರಸ್ ಟೆಸ್ಟಿಂಗ್ ಲ್ಯಾಬ್‍ಗಳಿಗೆ ಚಾಲನೆ ನೀಡಲಾಗುತ್ತಿದೆ. ಮೊದಲು ಶಿವಮೊಗ್ಗ, ಬೆಂಗಳೂರು ಹಾಗೂ ಪುಣೆ ಲ್ಯಾಬ್‍ಗಳಿಗೆ ಸ್ಯಾಂಪಲ್‍ಗಳನ್ನು ಪರೀಕ್ಷೆಗಾಗಿ ಕಳಿಸುವ ಕೆಲಸ ನಡೆಯುತಿತ್ತು. ಆದರೆ ಈಗ ನಮ್ಮಲ್ಲೇ ಪರೀಕ್ಷೆ ಮಾಡಲಾಗುತ್ತಿದೆ, ಹೀಗಾಗಿ ಪರೀಕ್ಷೆ ವರದಿ ಬೇಗ ಸಿಗುತ್ತಿವೆ ಎಂದು ಸಚಿವರು ತಿಳಿಸಿದರು.