ಹುಬ್ಬಳ್ಳಿ: ಬೆಂಗಳೂರು ಮುಂಬೈ ಕೈಗಾರಿಕಾ ಕಾರಿಡಾರ್ (ಬಿಎಂಐಸಿ) ಅಡಿಯಲ್ಲಿ ಧಾರವಾಡ ಕೈಗಾರಿಕಾ ಪ್ರದೇಶಗಳ ಸೇರ್ಪಡೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಇದರಿಂದ ಈ ಭಾಗದ ಕೈಗಾರಿಕೆಗಳ ಅಭಿವೃದ್ಧಿ ಹಾಗೂ ಬಂಡವಾಳ ಹೂಡಿಕೆಗೆ ಮತ್ತಷ್ಟು ಸಹಕಾರಿಯಾಗಲಿದೆ. ಹೀಗಾಗಿ ಈ ಭಾಗದಲ್ಲಿ ಹೂಡಿಕೆ ಮಾಡಲು ಉದ್ಯಮಿಗಳನ್ನು ಕೂಡಾ ಇದು ಆಕರ್ಷಿಸಲಿದೆ.
ಮಹಾರಾಷ್ಟ್ರದ ಸತಾರಾ ನಗರ ಹಾಗೂ ಧಾರವಾಡವನ್ನು ಈ ಯೋಜನೆಗೆ ಸೇರಿಸಲು ಎರಡು ದಿನಗಳ ಹಿಂದೆಯಷ್ಟೇ ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು. ಹೀಗಾಗಿ ನಾಲ್ಕು ಹಂತಗಳಲ್ಲಿ ಈ ಪ್ರದೇಶಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ.
6 ಸಾವಿರ ಎಕರೆ ವಿಸ್ತೀರ್ಣವುಳ್ಳ ಧಾರವಾಡ ಕೈಗಾರಿಕಾ ಪ್ರದೇಶವು ರಾಷ್ಟ್ರೀಯ ಹೆದ್ದಾರಿ 48 ಮತ್ತು 67ರ ಜೊತೆ ಉತ್ತಮ ಸಂಪರ್ಕ ಹೊಂದಿದೆ. ಧಾರವಾಡ ರೈಲು ನಿಲ್ದಾಣ ಈ ಪ್ರದೇಶದಿಂದ 25 ಕಿ.ಮೀ. ಅಂತರದಲ್ಲಿದೆ. ಉದ್ದೇಶಿತ ಬೆಳಗಾವಿ- ಧಾರವಾಡ ರೈಲು ಮಾರ್ಗಕ್ಕೂ ಈ ಪ್ರದೇಶ ಹತ್ತಿರದಲ್ಲಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣ 30 ಕಿಮೀ ಅಂತರದಲ್ಲಿದ್ದು, ಕಾರವಾರ ಬಂದರು 170 ಹಾಗೂ ಗೋವಾ ಬಂದರು- 180 ಕಿ.ಮೀ. ಅಂತರದಲ್ಲಿವೆ. ಇದರಿಂದ ಬಂಡವಾಳ ಹೂಡಿಕೆಗೆ ಇದು ಅತ್ಯಂತ ಪ್ರಶಸ್ತ ಸ್ಥಳ ಎನಿಸಿದೆ. ಇದನ್ನೂ ಓದಿ: ಹುಬ್ಬಳ್ಳಿ ಸಾರಿಗೆಯ ಶೇ.50 ಮಂದಿ ಪಡೆಯಬೇಕಿದೆ 2ನೇ ಡೋಸ್
ಈ ಎಲ್ಲ ಸಂಪರ್ಕ ವ್ಯವಸ್ಥೆ, ಮೂಲ ಸೌಲಭ್ಯ ಹೊಂದಿರುವ ಹಿನ್ನೆಲೆಯಲ್ಲಿ ಧಾರವಾಡ ಕೈಗಾರಿಕಾ ಪ್ರದೇಶವನ್ನು ಇದರಡಿಯಲ್ಲಿ ಸೇರ್ಪಡೆ ಮಾಡಲು ಅನುಮೋದನೆ ನೀಡಲಾಗಿದೆ. ಇದರಿಂದ ಈ ಕೈಗಾರಿಕಾ ಪ್ರದೇಶ ಇನ್ನಷ್ಟು ಅಭಿವೃದ್ಧಿಯಾಗಲಿದ್ದು, ಇಲ್ಲಿರುವ ಕೈಗಾರಿಕಾ ಘಟಕಗಳಿಗೂ ಅನುಕೂಲವಾಗಲಿದೆ. ಬಂಡವಾಳ ಹೂಡಿಕೆ ಹೆಚ್ಚಲಿದೆ ಎಂದು ಅಂದಾಜಿಸಲಾಗಿದೆ. ಈ ಪ್ರದೇಶದಲ್ಲಿ ಉದ್ಯೋಗದ ಅವಕಾಶ ಹೆಚ್ಚಲಿದ್ದು, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಹರ್ಷ ವ್ಯಕ್ತಪಡಿಸಿದೆ.