ಧಾರವಾಡ: 8ನೇ ತರಗತಿ ಓದುತ್ತಿರುವ ಬಾಲಕಿ ಶಾಲೆಯಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮದ ನಂತರ ತನ್ನ ತಾಯಿಗೆ ನ್ಯಾಯ ಕೊಡಿಸಿ ದಿಟ್ಟ ಬಾಲಕಿ ಎಂಬ ಪ್ರಶಂಸೆಗೆ ಕಾರಣವಾಗಿದ್ದಾಳೆ.
ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದ ನಿವಾಸಿಯಾಗಿರುವ ರೇಖಾ ಮೈಸೂರ ಎಂಬ ಬಾಲಕಿ ತನ್ನ ತಾಯಿಗೆ ನ್ಯಾಯ ಕೊಡಿಸಿದ್ದಾಳೆ. ಬಾಲಕಿ ರೇಖಾ ತಾಲೂಕಿನ ಪೆಸೆಂಟೆಷನ್ ಶಾಲೆಯ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಶಾಲೆಯಲ್ಲಿ ನಡೆಸುವ ಕಾನೂನು ಅರಿವು ಕಾರ್ಯಕ್ರಮದಲ್ಲಿ ತನ್ನ ತಾಯಿಗೆ ಆಗುತ್ತಿರುವ ಅನ್ಯಾಯದ ಕುರಿತು ನ್ಯಾಯಾಧೀಶರ ಗಮನ ಸೆಳೆದಿದ್ದಾಳೆ.
Advertisement
Advertisement
ಏನಿದು ಘಟನೆ? ಬಾಲಕಿ ರೇಖಾ ಅವರ ತಾಯಿ ಸಾವಕ್ಕ ತಮ್ಮ 1 ಎಕರೆ 10 ಗುಂಟೆ ಜಮೀನನ್ನ ಅದೇ ಗ್ರಾಮದ ಅಜೀಜ್ ಎಂಬುವರಿಗೆ ಅಡವಿಟ್ಟು 3 ಲಕ್ಷ 20 ಸಾವಿರ ರೂ. ಹಣವನ್ನ ಪಡೆದಿದ್ದರು. ಆದರೆ ಇದನ್ನೇ ಅವಕಾಶವಾಗಿ ಬಳಿಸಿಕೊಂಡ ಆತ ಇಡೀ ಜಮೀನನ್ನು ಕಬಳಿಸಲು ಮುಂದಾಗಿದ್ದಾನು. ಇದರಿಂದ ಸಾವಕ್ಕ ಸಾಕಷ್ಟು ಮಾನಸಿಕವಾಗಿ ಕುಗ್ಗಿದ್ದರು. ಈ ಬಗ್ಗೆ ಧಾರವಾಡ ಗ್ರಾಮೀಣ ಪೊಲೀಸರಿಗೆ ದೂರನ್ನು ನೀಡಿದ್ದರು. ಆದರೆ ಯಾವುದೇ ರೀತಿಯ ನ್ಯಾಯ ಸಿಕ್ಕಿರಲಿಲ್ಲ.
Advertisement
ತಾಯಿಯ ಸಂಕಟವನ್ನು ನೋಡಿದ ಬಾಲಕಿ ರೇಖಾ, ಕಳೆದ 15 ದಿನಗಳ ಹಿಂದೆ ಧಾರವಾಡ ನಗರದಲ್ಲಿ ನಡೆದ ಮಾನವ ಹಕ್ಕುಗಳ ದಿನಾಚರಣೆ ದಿನದಂದು ಜಿಲ್ಲಾ ನ್ಯಾಯಾಧೀಶರ ಗಮನ ಸೆಳೆದಿದ್ದಳು. ನ್ಯಾಯಾಧೀಶರು ಬಾಲಕಿಯ ಸಮಸ್ಯೆಯನ್ನ ಅರಿತು ನ್ಯಾಯಾಲಯಕ್ಕೆ ಬಂದು ಭೇಟಿ ಮಾಡಲು ಹೇಳಿದ್ದರು. ಅದರಂತೆ ಈ ಬಾಲಕಿ ನ್ಯಾಯಾಧೀಶ ರಾಮಚಂದ್ರ ಹುದ್ದಾರ ಅವರನ್ನ ಭೇಟಿ ಮಾಡಿದಾಗ ನ್ಯಾಯಾಧೀಶರು ಪೊಲೀಸರಿಗೆ ಪತ್ರ ಬರೆದು ಸಮಸ್ಯೆ ಇತ್ಯರ್ಥಕ್ಕೆ ಸೂಚಿಸಿದ್ದರು.
Advertisement
ನ್ಯಾಯಾಧೀಶರ ಸೂಚನೆಯಂತೆ ಪೊಲೀಸರು ಕಾರ್ಯ ಪ್ರವೃತ್ತರಾಗಿ ಅಜೀಜ್‍ಸಾಬ್ ಗೆ ಸಾವಕ್ಕ ಅವರು ನೀಡಬೇಕಿದ್ದ ಹಣವನ್ನು ಹಿಂದಿರುಗಿಸಿ ಅವರ ಜಮೀನನ್ನು ಮತ್ತೆ ವಾಪಸ್ ಕೊಡಿಸಿದ್ದಾರೆ. ಈ ಎಲ್ಲ ಸಮಸ್ಯೆ ಸುಖಾಂತ್ಯ ಕಾಣಲು ಬಾಲಕಿ ರೇಖಾ ಮೈಸೂರ ಮಾಡಿದ ದಿಟ್ಟ ಕಾರ್ಯ ಪ್ರಮುಖ ಕಾರಣವಾಗಿದ್ದು, ತನ್ನ ತಾಯಿಗೆ ನ್ಯಾಯ ಸಿಗುವಂತೆ ಮಾಡಿದ್ದಾಳೆ.
ಪ್ರಸ್ತುತ ಬಾಲಕಿ ರೇಖಾ ಮೈಸೂರ ಹೋರಾಟ ಮುಂದುವರೆದಿದೆ. 6 ವರ್ಷಗಳ ಹಿಂದೆ ಬಾಲಕಿಯ ತಂದೆ ಮಲ್ಲಿಕಾರ್ಜುನ ಕುಟುಂಬವನ್ನು ಬಿಟ್ಟು ಹೋಗಿದ್ದು, ಮತ್ತೆ ತಂದೆಯನ್ನ ಮನೆಗೆ ಕರೆ ತಂದು, ತಾಯಿಗೆ ಆದ ಅನ್ಯಾಯವನ್ನು ಸರಿಪಡಿಸುವವರೆಗೆ ಹೋರಾಟ ಮಾಡುತ್ತೇನೆ ಎಂದು ತಿಳಿಸಿದ್ದಾಳೆ.