ಧಾರವಾಡ: ಉತ್ತರ ಕರ್ನಾಟಕ ಪ್ರವಾಹದಿಂದ ತತ್ತರಿಸಿ ಹೋಗಿದೆ. ಈ ಪ್ರವಾಹದಲ್ಲಿ ಸಿಲುಕಿರುವ 70 ಅಂಧ ವಿದ್ಯಾರ್ಥಿಗಳಿಗೆ ರಾಕಿಂಗ್ ಸ್ಟಾರ್ ಯಶ್ ಅವರ ಯಶೋಮಾರ್ಗ ನೆರವಿಗೆ ಬಂದಿದೆ.
ಗದಗ ಜಿಲ್ಲೆ ಹೊಲೆಆಲೂರನ ಜ್ಞಾನಸಿಂಧು ಅಂಧ ಮಕ್ಕಳ ವಸತಿ ಶಾಲೆ ಪ್ರವಾಹದಿಂದ ಜಲಾವೃತವಾಗಿದ್ದು, ಅಲ್ಲಿನ ಅಂಧ ವಿದ್ಯಾರ್ಥಿಗಳಿಗೆ ಧಾರವಾಡದ ಚೈತನ್ಯ ಕಲಾ ಮಂಟಪದಲ್ಲಿ ಆಶ್ರಯ ನೀಡಲಾಗಿದೆ. ಈಗ ಈ ಮಕ್ಕಳಿಗೆ ಯಶೋಮಾರ್ಗದ ಸದಸ್ಯರು 70 ಜಾಕೆಟ್ ನೀಡಿದ್ದಾರೆ.
ಭೀಕರ ಪ್ರವಾಹದಿಂದ ತತ್ತರಿಸಿರುವ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಗೆ ಯಶೋಮಾರ್ಗದ ವತಿಯಿಂದ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ನೀಡಲಾಗುತ್ತಿದೆ. ಲಾರಿಯಲ್ಲಿ ಆಹಾರ ಹಾಗೂ ಇತರೆ ಅಗತ್ಯ ವಸ್ತುಗಳನ್ನು ಬ್ಯಾಕ್ಸ್‍ಗಳಲ್ಲಿ ಪ್ಯಾಕ್ ಮಾಡಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಯಶೋಮಾರ್ಗದ ಸದಸ್ಯರು ಹಂಚುತ್ತಿದ್ದಾರೆ. ಈ ಮೂಲಕ ನಟ ಯಶ್ ಪ್ರವಾಹ ಪೀಡಿತ ಜನರಿಗೆ ಸಹಾಯ ಹಸ್ತ ಚಾಚಿದ್ದಾರೆ.