ಧಾರವಾಡ: ಕಂದಾಯ ಇಲಾಖೆ ಅಧಿಕಾರಿಗಳು ಮಾಡಿರುವ ಎಡವಟ್ಟಿನಿಂದ ಧಾರವಾಡದಲ್ಲಿ ರೈತರೊಬ್ಬರ ಮೇಲೆ ಬ್ಯಾಂಕ್‍ನಲ್ಲಿ ಸಾಲ ಪಡೆಯದಿದ್ದರೂ ಪಹಣಿ ಪತ್ರದಲ್ಲಿ 24 ಲಕ್ಷ ರೂಪಾಯಿ ಸಾಲದ ಭೋಜಾ ಏರಿಸಲಾಗಿತ್ತು. ಪಬ್ಲಿಕ್ ಟಿವಿ ವರದಿ ಬೆನ್ನಲ್ಲೇ ಈ ಎಡವಟ್ಟನ್ನು ತಹಶೀಲ್ದಾರ್ ಅವರು ಸರಿಪಡಿಸಿ ರೈತರಿಗೆ ಸಹಾಯ ಮಾಡಿದ್ದಾರೆ.

ಪಡೆಯದ ಸಾಲದಿಂದ ಕಂಗಲಾಗಿದ್ದ ರೈತ ಈ ಬಗ್ಗೆ ತಹಶೀಲ್ದಾರ್ ಅವರ ಗಮನಕ್ಕೆ ತಂದಾಗ ಹೇಗೆ ಈ ಎಡವಟ್ಟು ನಡೆಯಿತು ಎಂಬುದು ಬೆಳಕಿಗೆ ಬಂದಿದೆ. ಸದ್ಯ ಧಾರವಾಡ ತಹಶೀಲ್ದಾರ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿ, ನಾಗಪ್ಪ ಅವರ ಪಹಣಿ ಪತ್ರದಲ್ಲಿದ್ದ ಲೋಪ ದೋಷವನ್ನು ಸರಿಪಡಿಸಿದ್ದಾರೆ.
ನಾಗಪ್ಪ ಅವರು 2013ರಲ್ಲಿ ತಮ್ಮ 7 ಏಕ್ರೆ ಜಮೀನಿನಲ್ಲಿ 5 ಗುಂಟೆ ಜಾಗವನ್ನು ಮಂಜುಳಾ ಎಂಬವರಿಗೆ ಮಾರಾಟ ಮಾಡಿದ್ದರು. ಮಂಜುಳಾ ಆ ಜಾಗದ ಮೇಲೆ ಸಾಲ ಪಡೆದಿದ್ದರಿಂದ ನಾಗಪ್ಪ ಅವರಿಗೆ ತೊಂದರೆಯಾಗಿತ್ತು. ಇದರಿಂದ ನಾಗಪ್ಪ ಅವರಿಗೆ ಎಲ್ಲೂ ಸಾಲ ಸಿಗುತ್ತಿರಲಿಲ್ಲ. ಹೀಗಾಗಿ ಸಾಲಕ್ಕಾಗಿ ನಾಗಪ್ಪ ಅವರು ತುಂಬಾ ಕಡೆ ಓಡಾಡಿ ಬೇಸತ್ತು ಹೋಗಿದ್ದರು.
ಅಲ್ಲದೆ ಮಂಜುಳಾ ಅವರಿಗೆ ನಾಗಪ್ಪ ಅವರು ಮಾರಾಟ ಮಾಡಿದ್ದ ಜಾಗದ ಪಹಣಿ ಪತ್ರವನ್ನು ಕಂದಾಯ ಇಲಾಖೆಯವರು ಸರಿಯಾಗಿ ಪರಿಶೀಲಿಸದಿದ್ದಕ್ಕೆ ಈ ಎಡವಟ್ಟಾಗಿದೆ. ಸದ್ಯ ಅಧಿಕಾರಿಗಳು ಪಹಣಿ ಪತ್ರದಲ್ಲಿದ್ದ ತಪ್ಪನ್ನು ಸರಿಪಡಿಸಿ, ನಾಗಪ್ಪ ಅವರಿಗೆ ದಾಖಲೆಗಳನ್ನ ನೀಡಿದ್ದಾರೆ. ಇದರಿಂದ ಪಡೆಯದ ಸಾಲದಿಂದ ಕಂಗಾಲಾಗಿದ್ದ ರೈತ ನಿಟ್ಟುಸಿರು ಬಿಟ್ಟಿದ್ದಾರೆ.



