-ಅಷ್ಟಭುಜ ದೇವಿ ಶಕ್ತಿಯ ಸ್ವರೂಪದಲ್ಲಿ ರ‍್ಯಾಂಪ್ ವಾಕ್
ಧಾರವಾಡ: ಮಯನ್ಮಾರ್ ನಲ್ಲಿ ಕ್ಲಾಸಿಕ್ ಮಿಸೆಸ್ ಏಷ್ಯಾ ಇಂಟರ್ನ್ಯಾಷನಲ್ ಸ್ಪರ್ಧೆ ನಡೆದಿದೆ. ಈ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಧಾರವಾಡದ ವೈದ್ಯಕೀಯ ಕಾಲೇಜಿನ ಸಹ ಪ್ರಾಧ್ಯಾಪಕಿ ಆಗಿರುವ ವೈದ್ಯೆಯೊಬ್ಬರು ಗೆಲುವು ಸಾಧಿಸಿದ್ದಾರೆ.
ಧಾರವಾಡದ ಎಸ್‍ಡಿಎಂ ಮೆಡಿಕಲ್ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕಿ ಹಾಗೂ ವೈದ್ಯೆಯೂ ಆಗಿರುವ ಡಾ.ಶಿಲ್ಪಾ ಹಕ್ಕಿ ಈ ಸಾಧನೆ ಮಾಡಿದವರು. ಮಯನ್ಮಾರನಲ್ಲಿ ನಡೆದ ಕ್ಲಾಸಿಕ್ ಮಿಸೆಸ್ ಏಷಿಯಾ ಇಂಟರ್ನ್ಯಾಷನಲ್ 2019 ಸೌಂದರ್ಯ ಸ್ಪರ್ಧೆಯ ಫೈನಲ್‍ನಲ್ಲಿ ಜಪಾನ್ ಮತ್ತು ಥೈಲಾಂಡ್ ದೇಶದ ಸ್ಪರ್ಧಿಗಳಿಗೆ ಪೈಪೋಟಿ ನೀಡಿ ಇವರು ಗೆಲುವು ಸಾಧಿಸಿ ಟ್ಯಾಲೆಂಟ್ ಕ್ವೀನ್ ಎಂಬ ಕಿರೀಟ ಧರಿಸಿದ್ದಾರೆ.
ಈ ಸ್ಪರ್ಧೆಯಲ್ಲಿ ಶಿಲ್ಪಾ ಅವರು, ನಮ್ಮ ದೇಶದ ಸಾಂಸ್ಕೃತಿಕತೆ ಕಲೆಯನ್ನೇ ಪ್ರದರ್ಶಿಸುವ ಮೂಲಕ ಏಷ್ಯಾ ಖಂಡ ಮಟ್ಟದ ಸ್ಪರ್ಧೆಯಲ್ಲಿ ಸಾಧನೆ ಮಾಡಿದ್ದಾರೆ. ಪ್ರಮುಖವಾಗಿ ಅಷ್ಟಭುಜ ದೇವಿ ಶಕ್ತಿಯ ಸ್ವರೂಪದಲ್ಲಿ ರ‍್ಯಾಂಪ್ ವಾಕ್ ಮಾಡಿ ವಿಶೇಷ ಗಮನ ಸೆಳೆದಿದ್ದಾರೆ. ಜೊತೆಗೆ ಯಕ್ಷಗಾನದ ಪೋಷಾಕಿನಲ್ಲಿ ಭರತನಾಟ್ಯವನ್ನು ಪಾಶ್ಚಿಮಾತ್ಯ ಸಂಗೀತದಲ್ಲಿ ಪ್ರಸ್ತುತ ಪಡಿಸಿ, ವಿಭಿನ್ನವಾದ ಸಂಯೋಜನೆಯ ಮೂಲಕ ನಿರ್ಣಾಯಕರ ಮನಸೆಳೆದು, ಈ ಸಾಧನೆ ಮಾಡಿದ್ದಾರೆ.
ಡಾ.ಶಿಲ್ಪಾ ಹಕ್ಕಿ ಮೊದಲು ಮಿಸೆಸ್ ಇಂಡಿಯಾ ಕರ್ನಾಟಕ ವಿಭಾಗದಲ್ಲಿ ವಿಜೇತರಾಗಿದ್ದರು. ನಂತರ ರಾಷ್ಟ್ರೀಯ ವಿಭಾಗದಲ್ಲಿ ಡ್ಯಾನ್ಸಿಂಗ್ ಕ್ವೀನ್ ಎಂಬ ಕಿರೀಟ ಧರಿಸುವ ಮೂಲಕ ಏಷ್ಯಾ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಅರ್ಹತೆ ಪಡೆದುಕೊಂಡಿದ್ದರು. ಏಷ್ಯಾ ಮಟ್ಟದಲ್ಲಿ ಭಾರತಕ್ಕೆ ಮಾತ್ರವಲ್ಲ ಧಾರವಾಡಕ್ಕೂ ಕೀರ್ತಿ ಬರುವಂತಹ ಕಾರ್ಯ ಮಾಡಿದ್ದು, ಇದು ನಮಗೆ ಹೆಮ್ಮೆಯ ವಿಷಯ ಎನ್ನುತ್ತಿದ್ದಾರೆ ಇವರ ಹಿತೈಷಿಗಳು.