ಧಾರವಾಡ: ನಗರದ ಕೆಎಂಎಫ್ ಅಧಿಕಾರಿಯೊಬ್ಬರು ಕೊರೊನಾ ಸಂಕಷ್ಟದಲ್ಲೂ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರ ಕೆಲಸವನ್ನು ಮೆಚ್ಚಿ, ಅವರ ಪಾದ ಪೂಜೆಯನ್ನ ಮಾಡಿ ಗೌರವ ಸಲ್ಲಿಸಿದ್ದಾರೆ.
ಧಾರವಾಡ ನಗರದ ಟೋಲ್‍ನಾಕಾದಲ್ಲಿ ಪ್ರತಿ ದಿನ 30ಕ್ಕೂ ಹೆಚ್ಚು ಪೌರಕಾರ್ಮಿಕರು ಈ ಕೊರೊನಾ ಸಮಯದಲ್ಲಿ ಕೂಡಾ ಬೆಳಗಿನ ಜಾವವೇ ಬಂದು ಕಸ ತೆಗೆದುಕೊಂಡು ಹೋಗುವುದು, ರಸ್ತೆ ಸ್ವಚ್ಛ ಮಾಡುವ ಕೆಲಸದಲ್ಲಿ ತೊಡಗಿರುತ್ತಾರೆ. ಇದನ್ನ ಧಾರವಾಡ ಕೆಎಂಎಫ್‍ನ ಟೆಕ್ನಿಕಲ್ ಆಫಿಸರ್ ನಾಗಪ್ಪ ಅರಳೋದ ಅವರು ಕಳೆದ ಒಂದು ತಿಂಗಳಿಂದ ಗಮನಿಸುತ್ತಾ ಬಂದಿದ್ದರು. ಹೀಗಾಗಿ ಇಂದು ಈ ಪೌರ ಕಾರ್ಮಿಕರ ನಿಸ್ವಾರ್ಥ ಸೇವೆಗೆ ನಾಗಪ್ಪ ಅವರು ಪೌರಕಾರ್ಮಿಕರ ಪಾದ ಪೂಜೆಯನ್ನ ಮಾಡಿ ಗೌರವ ಸಲ್ಲಿಸಿದ್ದಾರೆ.
Advertisement
Advertisement
ವಿಜಯಪೂರದ ಇಂಚಗೇರಿ ಮಠದ ಭಕ್ತರು ಆಗಿರುವ ನಾಗಪ್ಪ, ಪ್ರತಿ ದಿನ ಮೂರು ಹೊತ್ತು ಧ್ಯಾನ ಮಾಡುತ್ತಿದ್ದಾರೆ. ಇಂಚಗೇರಿ ಮಠದ ಶ್ರೀಗಳು ಹೇಳಿದಂತೆ ಇಂದು ನಾಗಪ್ಪ ಅವರು ಈ ಪೌರಕಾರ್ಮಿಕರಿಗೆ ಪಾದ ಪೂಜೆ ಮಾಡಿದ್ದಷ್ಟೇ ಅಲ್ಲದೇ ಅವರಿಗೆ ತುಪ್ಪ ಹಾಗೂ ಪೇಡಾ ನೀಡಿ, ಜೊತೆಗೆ ದಿನಸಿ ಕಿಟ್ ಕೂಡಾ ಕೊಟ್ಟು ಗೌರವಿಸಿದ್ದಾರೆ. ಇದು ನಿಜವಾದ ಸನ್ಮಾನ ಎಂದು ಈ ಸಮಯದಲ್ಲಿ ಹೇಳಬಹುದು. ಯಾಕಂದರೆ ಜಗತ್ತೇ ಕೊರೊನಾದಿಂದ ಸಮಸ್ಯೆ ಎದುರಿಸುತ್ತಿರುವ ದಿನಗಳಲ್ಲಿ ಪೌರಕಾರ್ಮಿಕರು ಸಾರ್ವಜನಿಕರಿಗಾಗಿ ದುಡಿಯುತ್ತಿದ್ದಾರೆ. ಈ ರೀತಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಮಂದಿಗೆ ನಾಗಪ್ಪ ಅವರು ಪಾದಪೂಜೆ ಮಾಡಿ ಗೌರವಿಸಿದ್ದು ವಿಶೇಷ ಎಂದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.