ಧಾರವಾಡ: ಜಿಲ್ಲೆಯ ಹೊಸಯಲ್ಲಾಪುರ ಪ್ರದೇಶ ಅದೇನು ಪಾಪಾ ಮಾಡಿದೇಯೋ ಗೊತ್ತಿಲ್ಲ. ಧಾರವಾಡ ಜಿಲ್ಲೆಯ ಮೊದಲ ಪಾಸಿಟಿವ್ ಪ್ರಕರಣ ಇದೇ ಏರಿಯಾದಲ್ಲಿ ಪತ್ತೆಯಾಗಿತ್ತು. ಈ ಕಾರಣಕ್ಕೆ ಒಂದು ತಿಂಗಳ ಕಾಲ ಸಂಪೂರ್ಣ ಬಂದ್ ಆಗಿ ಹೋಗಿದ್ದ ಈ ಪ್ರದೇಶವನ್ನು ವಾರದ ಹಿಂದಷ್ಟೇ ಕಂಟೋನ್ಮೆಂಟ್ ಝೋನಿನಿಂದ ಮುಕ್ತಗೊಳಿಸಿ, ಸಾಮಾನ್ಯ ವಲಯವನ್ನಾಗಿ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಆದರೆ ಗುರುವಾರ ಇದೇ ಏರಿಯಾದ ಕೋಳಿಕೆರೆಯ 35 ವರ್ಷದ ಮೆಣಸಿನಕಾಯಿ ವ್ಯಾಪಾರಿಯಲ್ಲಿ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮತ್ತೆ ಈ ಭಾಗದಲ್ಲಿ ಆತಂಕ ಸೃಷ್ಟಿಯಾಗಿದೆ.
Advertisement
ಮೊನ್ನೆಯಷ್ಟೇ ಮುಂಬೈಗೆ ಮಾವಿನಕಾಯಿ ಇಳಿಸಿ ಬರಲು ಹೋದ ನವಲೂರಿನ ಲಾರಿ ಚಾಲಕನಿಗೆ ಸೋಂಕು ತಗುಲಿತ್ತು. ಈಗ ನವಲೂರು ಅಗಸಿಗೆ ಹೊಂದಿಕೊಂಡಿರುವ ಕೋಳಿಕೆರೆಯ ವ್ಯಕ್ತಿಯಲ್ಲಿ ಇಂದು ಕೊರೊನಾ ಸೋಂಕು ದೃಢಪಟ್ಟಿದೆ. ಇವರು ಮೂಲತಃ ಮೆಣಸಿನಕಾಯಿ ವ್ಯಾಪಾರಿಯಷ್ಟೇ ಅಲ್ಲದೇ ಆಟೋ ಕೂಡ ಓಡಿಸುತ್ತಿದ್ದರು. ಮೂಲಗಳ ಪ್ರಕಾರ ಕಳೆದ 20 ದಿನ ಆಸ್ಪತ್ರಯಲ್ಲೇ ಇವರು ಇದ್ದರು ಎಂದು ಹೇಳಲಾಗಿದ್ದು, ಲಾಕ್‍ಡೌನ್ ಆದಾಗಿನಿಂದಲೂ ಇವರಿಗೆ ಆರೋಗ್ಯ ಸರಿ ಇರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
Advertisement
Advertisement
ಹೀಗಾಗಿ ಕೊರೊನಾ ಸಂದರ್ಭದಲ್ಲಿ ಇವರು ವ್ಯಾಪಾರ ಮಾಡಿಲ್ಲ ಎನ್ನಲಾಗಿದೆ. ಸದ್ಯ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸೋಂಕಿತ ಚಿಕಿತ್ಸೆ ಪಡೆಯುತ್ತಿದ್ದು, ಇದಕ್ಕೂ ಮೊದಲು ಧಾರವಾಡದ ಒಂದು ಖಾಸಗಿ ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಗೂ ಭೇಟಿ ನೀಡಿದ್ದರು ಎನ್ನಲಾಗಿದೆ. ತೀವ್ರ ಜ್ವರ, ನೆಗಡಿ, ಕೆಮ್ಮು ಕಾಣಿಸಿಕೊಂಡ ಹಿನ್ನೆಲೆ ಕಿಮ್ಸಗೆ ದಾಖಲಿಸಿ ಕೋವಿಡ್-19 ಟೆಸ್ಟ್ ಮಾಡಿಸಿದಾಗ ಸೋಂಕು ತಗುಲಿರುವುದು ದೃಢಪಟ್ಟಿದೆ.