– ಧಾರವಾಡದ ಘಟನೆ ನನ್ನ ಕಣ್ಣು ತೆರೆಸಿದೆ
– ತಡವಾಗಿ ಬಂದಿದ್ದಕ್ಕೆ ನನ್ನಿಂದ ಅಪಚಾರವಾಗಿದೆ ಏನೋ ಅನಿಸುತ್ತಿದೆ
ಧಾರವಾಡ: ನಗರದ ಕುಮಾರೇಶ್ವರ ಬಡಾವಣೆಯಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ 12 ಮೃತ ದೇಹಗಳನ್ನು ಹೊರತೆಗೆದಿದ್ದು, 58 ಜನರನ್ನು ರಕ್ಷಿಸಲಾಗಿದೆ. ಗುರುವಾರ ಘಟನಾ ಸ್ಥಳಕ್ಕೆ ಸಿಎಂ ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿಎಂ, ಘಟನೆ ನಡೆದ ಮೊದಲ ದಿನವೇ ಯಾಕೆ ಬರಲಿಲ್ಲ ಅಂತ ನನಗೆ ಈಗ ನೋವಾಗುತ್ತಿದೆ. ಈ ಅವಘಡದಲ್ಲಿ ಮೃತಪಟ್ಟವರು ಯಾರೂ ಶ್ರೀಮಂತರಲ್ಲ. ಎಲ್ಲರೂ ಬಡವರೇ. ರಕ್ಷಣಾ ಕಾರ್ಯ, ಚಿಕಿತ್ಸೆ ಸೇರಿದಂತೆ ಎಲ್ಲಾ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಮೃತರ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡುವ ಕುರಿತು ಜಿಲ್ಲಾಧಿಕಾರಿಗಳೇ ನಿರ್ಧಾರ ತೆಗೆದುಕೊಳ್ಳಲಿ. ಈಗಾಗಲೇ ಮೃತರ ಕುಟುಂಬಕ್ಕೆ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 1 ಲಕ್ಷ ರೂ. ಪರಿಹಾರ ನೀಡಲಾಗಿದೆ. ನೀತಿ ಸಂಹಿತೆಗೆ ಧಕ್ಕೆ ಬರದಂತೆ ಮುಖ್ಯ ಕಾರ್ಯದರ್ಶಿ ಮೂಲಕ ಪರಿಹಾರ ಕೊಡಿಸಲಾಗುವುದು ಎಂದು ತಿಳಿಸಿದರು. ಇದನ್ನು ಓದಿ: ಧಾರವಾಡ ದುರಂತ – ಮಾಜಿ ಸಚಿವ ವಿನಯ್ ಕುಲಕರ್ಣಿ ಮಾವ ಅರೆಸ್ಟ್
Advertisement
Advertisement
ಘಟನಾ ಸ್ಥಳಕ್ಕೆ ತಡವಾಗಿ ಬಂದಿದ್ದಕ್ಕೆ ನನ್ನಿಂದ ಅಪಚಾರವಾಗಿದೆ ಏನೋ ಅನಿಸುತ್ತಿದೆ. ಕಳಪೆ ಕಟ್ಟಡದ ಕಾಮಗಾರಿಯಿಂದ ಬಡವರು ಜೀವ ಕಳೆದುಕೊಂಡಿದ್ದಾರೆ. ಈ ದುರ್ಘಟನೆ ನನ್ನ ಕಣ್ಣು ತೆರೆಸಿದೆ. ಈ ರೀತಿಯ ಘಟನೆ ಮರುಕಳಿಸದಂತೆ ಕ್ರಮಕೈಗೊಳ್ಳಲಾಗುತ್ತದೆ. ಮಹಾನಗರ ಪಾಲಿಕೆಯ ಬೇಜವಾಬ್ದಾರಿ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ. ಕಟ್ಟಡ ನಿರ್ಮಾಣದ ಅಕ್ರಮ ಇಪ್ಪತ್ತು ವರ್ಷದಿಂದ ನಡೆದು ಬಂದಿದೆ. ಆದರೆ ನಾನು ಅಧಿಕಾರಕ್ಕೆ ಬಂದಿರುವುದೇ ಈಗ. ಹೀಗಾಗಿ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಲೋಕಸಭಾ ಚುನಾವಣೆ ಮುಗಿದ ತಕ್ಷಣವೇ ಸಭೆ ಕರೆದು ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು.
Advertisement
Advertisement
ಕಟ್ಟಡ ನಿರ್ಮಾಣಕ್ಕೂ ಮುನ್ನ ಎಷ್ಟು ಮಹಡಿಗೆ ಅನುಮತಿಗೆ ಅರ್ಜಿ ಹಾಕಿದ್ದರು? ನಿರ್ಮಾಣ ಕಾರ್ಯವು ಕಾನೂನು ಬಾಹಿರ ಆಗಿದೇಯೇ? ಕಟ್ಟಡ ಉಪಯೋಗಕ್ಕೆ ಮುಂಚೆ ಎನ್‍ಒಸಿ ನೀಡಿದಾಗ ಏನಾಗಿತ್ತು? ಇಲಾಖೆಯ ಅಧಿಕಾರಿಗಳು ಜಾಗ ಪರಿಶೀಲನೆ ಮಾಡಿದ್ದಾರೋ? ಇಲ್ಲವೋ? ಎನ್ನುವ ಕುರಿತು ತನಿಖೆಗೆ ಜಿಲ್ಲಾಧಿಕಾರಿಗಳು ಸೂಚನೆ ಕೊಟ್ಟಿದ್ದಾರೆ. ಕಟ್ಟಡ ನಿರ್ಮಾಣದಲ್ಲಿ ಅಕ್ರಮ ನಡೆದಿದ್ದರೆ ಅಧಿಕಾರಿಗಳನ್ನು ಒಳಗೊಂಡಂತೆ ಮಾಲೀಕರನ್ನು ಸಹ ಹೊಣೆ ಮಾಡುವುದು ನಮ್ಮ ಕರ್ತವ್ಯ. ನಿಷ್ಪಕ್ಷಪಾತ ತನಿಖೆಗೆ ಮುಖ್ಯ ಕಾರ್ಯದರ್ಶಿಗೆ ಸೂಚನೆ ಕೊಟ್ಟಿದ್ದೇನೆ ಎಂದರು.
ಎನ್‌ಡಿಆರ್‌ಎಫ್, ಎಸ್‍ಡಿಆರ್‌ಎಫ್ ಹಾಗೂ ಅಗ್ನಿಶಾಮಕ ದಳದವರು ಜೀವದ ಹಂಗು ತೊರೆದು ಕಾರ್ಯಾಚರಣೆ ಮಾಡಿದ್ದಾರೆ. ನವಲಗುಂದದ ಸಿದ್ದಪ್ಪ ಎಂಬ ಅಗ್ನಿಶಾಮಕ ಸಿಬ್ಬಂದಿ 8 ಜನರನ್ನು ರಕ್ಷಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಪ್ರಾಮಾಣಿಕವಾಗಿ ಕಾರ್ಯ ಮಾಡಿದವರ ಮಾಹಿತಿ ಪಡೆಯಲಾಗುವುದು. ಈ ಮೂಲಕ ಅವರಿಗೆ ಸರ್ಕಾರದ ವತಿಯಿಂದ ಒಂದು ಇನ್ಸೆಂಟಿವ್ ಕೊಡಲಿದ್ದೇವೆ. ಈ ಸಂಬಂಧ ಡಿಜಿಪಿ ಎಂ.ಎನ್ ರೆಡ್ಡಿ ಅವರಿಗೆ ಸೂಚನೆ ಕೊಟ್ಟಿದ್ದೇನೆ ಎಂದರು.
ರಾಜ್ಯದಲ್ಲಿ ವಿಪತ್ತು ನಿರ್ವಹಣೆಗೆ ನುರಿತ ಪಡೆ ಸ್ಥಾಪಿಸಲಿದ್ದೇವೆ. ರಾಜ್ಯದ ಒಂದೊಂದು ವಿಭಾಗಕ್ಕೆ ನೂರು ಪರಿಣಿತರನ್ನು ನೇಮಕ ಮಾಡಲಾಗುವುದು. ಅದಕ್ಕಾಗಿ ವಿಶೇಷ ತರಬೇತಿ ಕೊಡಿಸಲಿದ್ದೇವೆ ಎಂದು ಮಾಹಿತಿ ನೀಡಿದರು.
ಕಟ್ಟಡ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಾಂಗ ತನಿಖೆಗೆ ಆದೇಶ ಮಾಡಲಾಗಿದೆ. ನ್ಯಾಯಾಧೀಶರ ಮೂಲಕ ತನಿಖೆ ಮಾಡಿಸುವಂತೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಒತ್ತಾಯಿಸಿದ್ದಾರೆ. ಆದರೆ ಸಿಟ್ಟಿಂಗ್ ಜಡ್ಜ್ ಗಳಿಂದ ತನಿಖೆಗೆ ಭಾರೀ ವೆಚ್ಚವಾಗುತ್ತದೆ. ಅವರಿಗಾಗಿ ಕಚೇರಿ ತೆಗೆಯಬೇಕು ಅಧಿಕಾರಿಗಳನ್ನು ನೇಮಕ ಮಾಡಬೇಕು. ಅಷ್ಟೇ ಅಲ್ಲದೆ ತನಿಖೆ ವಿಳಂಬವಾಗುತ್ತದೆ. ಹೀಗಾಗಿ ಯಾವ ತನಿಖೆ ಅಗತ್ಯವೋ ಅದನ್ನು ಮಾಡುತ್ತೇವೆ ಎಂದು ತಿಳಿಸಿದರು.
ಸುಳ್ವಾಡಿ ದೇವಸ್ಥಾನದ ವಿಷ ಪ್ರಸಾದ, ಮಂಡ್ಯ ಬಸ್ ದುರಂತ ಸಂದರ್ಭದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ 5 ಲಕ್ಷ ರೂ. ನೀಡಿದ್ದೇವೆ. ಈ ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಅಷ್ಟು ಕೊಡಬಹುದೇ ಎಂದು ಮುಖ್ಯ ಕಾರ್ಯದರ್ಶಿಗಳು ವಿಚಾರ ಮಾಡಲಿದ್ದಾರೆ. ಈ ದುರ್ಘಟನೆಯಲ್ಲಿ ಇಲ್ಲಿಯವರೆಗೆ 12 ಜನ ಮೃತಪಟ್ಟಿದ್ದಾರೆ. 58 ಜನರನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದೆ ಎಂದರು.
ಧಾರವಾಡ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಸಿಎಂ ಕುಮಾರಸ್ವಾಮಿ ಅವರು ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಈ ವೇಳೆ ಸಿಎಂ ಕುಮಾರಸ್ವಾಮಿ ಅವರಿಗೆ ಶಾಸಕ ಪ್ರಸಾದ ಅಬ್ಬಯ್ಯ, ಮಾಜಿ ಸಚಿವ ವಿನಯ್ ಕುಲಕರ್ಣಿ, ಸಚಿವ ಸಿ.ಎಸ್.ಶಿವಳ್ಳಿ, ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಸಾಥ್ ನೀಡಿದರು.