ಧಾರವಾಡ: ಎರಡು ಕಾರುಗಳ ಮಧ್ಯೆ ಭೀಕರ ಅಪಘಾತ ಸಂಭವಿಸಿ ಸ್ವಾಮೀಜಿಯೊಬ್ಬರು ಸೇರಿ ನಾಲ್ವರು ಸಾವನ್ನಪ್ಪಿದ ಘಟನೆ ಧಾರವಾಡ ಹೊರವಲಯದ ಯರಿಕೊಪ್ಪ ಮನಸೂರ ಗ್ರಾಮ ಬೈಪಾಸ್ ಬಳಿ ಸಂಭವಿಸಿದೆ.
ಧಾರವಾಡ ಜಿಲ್ಲೆ ಕುಂದಗೋಳ ಪಟ್ಟಣದ ಶಿವಾನಂದ ಮಠದ ಬಸವೇಶ್ವರ ಸ್ವಾಮೀಜಿ, ಕಾರು ಚಾಲಕ ಶಂಕರಗೌಡ ಪಾಟೀಲ ಹಾಗೂ ಎದುರಿನ ಕಾರಿನಲ್ಲಿದ್ದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಬ್ಬೂರ ಗ್ರಾಮದ ಮಹಾದೇವ ಕಾಡೇಶಗೋಳ ಮತ್ತು ಮಾರುತಿ ಕುಕನೂರ ಇಬ್ಬರು ಮೃತಪಟ್ಟಿದ್ದಾರೆ. ಈ ಅಪಘಾತದಲ್ಲಿ ಸ್ವಾಮೀಜಿ ಕಾರಿನಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗೆ ಎಸ್‍ಡಿಎಂ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
Advertisement
Advertisement
ಸ್ವಾಮೀಜಿ ಕಾರಿನಲ್ಲಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿ ಸಂಬಂಧಿ ಸೋಮರಾವ್ ದೇಸಾಯಿ ಹಾಗೂ ಸಿದ್ದಪ್ಪ ಇಂಗಳಹಳ್ಳಿ ಮತ್ತು ಬಸಪ್ಪ ಪೂಜಾರ ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಳಗ್ಗೆಯಷ್ಟೇ ಮಠದ ಶಾಲೆಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸ್ವಾಮೀಜಿ ಧಾರವಾಡದ ಭಕ್ತರೊಬ್ಬರ ಕುಟುಂಬದ ಮದುವೆ ಸಮಾರಂಭಕ್ಕೆ ಆಗಮಿಸುತ್ತಿದ್ದಾಗ ಜವರಾಯ ತನ್ನ ಅಟ್ಟಹಾಸ ಮೆರೆದಿದ್ದಾನೆ. ಸ್ವಾಮೀಜಿ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಅಪಾರ ಪ್ರಮಾಣದ ಭಕ್ತರು ಘಟನಾ ಸ್ಥಳಕ್ಕೆ ದೌಡಾಯಿಸಿ ಬಂದು ಕಣ್ಣೀರು ಹಾಕಿದರು.
Advertisement
Advertisement
ಇದೇ ವೇಳೆ ಮಾಜಿ ಸಚಿವ ಎಂ.ಎಸ್. ಅಕ್ಕಿ, ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಕಂಬನಿ ಮಿಡಿದರು. ಸ್ವಾಮೀಜಿ ಕಳೆದುಕೊಂಡಿದ್ದು ತುಂಬಾ ದುಃಖವಾಗಿದ್ದು, ಈ ರಸ್ತೆಯಲ್ಲಿ ಹಲವು ಘಟನೆ ನಡೆದರೂ ರಸ್ತೆ ಅಗಲಿಕರಣ ನಡೆದಿಲ್ಲವೆಂದು ಬಸವರಾಜ್ ಹೊರಟ್ಟಿ ಆಕ್ರೋಶ ವ್ಯಕ್ತ ಪಡಿಸಿದರು. ಈ ಬೈಪಾಸ್ ನಂದಿ ಹೈವೆಯವರಾದ ಅಶೋಕ್ ಖೇಣಿಗೆ ಸಂಬಂಧಿಸಿದ್ದು, ಈ ಸಂಬಂಧ ಬರುವ ಅಧಿವೇಶನದಲ್ಲಿ ಧ್ವನಿ ಎತ್ತುತ್ತೇನೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಗಾಯಗೊಂಡವರನ್ನು ನೋಡಲು ಮಾಜಿ ಸಚಿವ ವಿನಯ ಕುಲಕರ್ಣಿ ಕೂಡ ಆಸ್ಪತ್ರೆಗೆ ಭೇಟಿ ನೀಡಿದರು. ಸದ್ಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.