ಧಾರವಾಡ: ಎರಡು ಬಸ್ ಮತ್ತು ಗೂಡ್ಸ್ ಆಟೋ ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ ಆಟೋ ಚಾಲಕ ವಾಹನದಲ್ಲೇ ಸಿಲುಕಿ ಗೋಳಾಡಿದ ಘಟನೆ ಧಾರವಾಡದಲ್ಲಿ ನಡೆದಿದೆ.
ನಗರದ ಪಾಲಿಕೆ ಕಚೇರಿ ಎದುರಿನ ರಸ್ತೆಯಲ್ಲಿ ಎರಡು ಬಸ್‍ಗಳ ಮಧ್ಯೆಯಿಂದ ಹೋಗಲು ಹೋಗಿ ಗೂಡ್ಸ್ ಆಟೋ ಮಧ್ಯದಲ್ಲಿ ಸಿಲುಕಿ ಅಪಚ್ಚಿಯಾಗಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಗೂಡ್ಸ್ ಚಾಲಕ ಲೋಹಿತ ಲಕ್ಕುಂಡಿಮಠ (26) ಕುಳಿತಲ್ಲೇ ಸಿಲುಕಿಕೊಂಡು ಹೊರಬರಲಾಗದೆ ಗೋಳಾಡಿದ್ದಾನೆ.
ಆಟೋ ಒಳಗೆ ಸಿಲುಕಿ ಹೊರಬರಲಾರದೇ ನೋವಿನಿಂದ ಗೋಳಾಡ್ತಾ ಇದ್ದಾಗ ಸ್ಥಳೀಯರೆಲ್ಲ ಸೇರಿ ಆತನನ್ನು ಹೊರತೆಗೆಯಲು ಹರಸಾಹಸ ಪಟ್ಟಿದ್ದಾರೆ. ಆದರೆ ಕೊನೆಗೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಚಾಲಕ ಲೋಹಿತನನ್ನು ಸುರಕ್ಷಿತವಾಗಿ ಹೊರತೆಗೆದು ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ರಸ್ತೆಯಲ್ಲೇ ಘಟನೆ ನಡೆದಿದ್ದರಿಂದ ಹಾಗೂ ಇದನ್ನು ನೋಡಲು ಸಾಕಷ್ಟು ಜನ ಸೇರಿದ್ದರಿಂದ ಸುಮಾರು ಒಂದೂವರೆ ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.