– ಗ್ರಾಮೀಣ ಅಭಿವೃದ್ಧಿಯಿಂದ ಮಹಿಳೆಯರಿಗೆ ಶಕ್ತಿ ನೀಡಬೇಕು: ಧರ್ಮಾಧಿಕಾರಿ ಆಶಯ
ಮಂಗಳೂರು: ನಮ್ಮ ಮೇಲೆ ಬಂದಿರುವ ಅಪವಾದಗಳು ಓಡಿ ಹೋಗುತ್ತವೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ ನಡೆಯುತ್ತಿರುವ ಜನ ಸೇನಾ ದೀಪಾರಾಧನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಮೇಲೆ ಬಂದಿರುವಂತಹ ಅಪವಾದಗಳು ಓಡಿ ಹೋಗುತ್ತವೆ. ಈ ದೀಪಾರಾಧನೆಯಿಂದ ಕ್ಷೇತ್ರದ ಅಪಾಯ ದೂರವಾಗುತ್ತದೆ. ನಾನು ಮಾತನಾಡಬಾರದು ಎಂದು ಕಾನೂನು ಇದೆ. ಹಾಗಾಗಿ, ನಾನು ಹೆಚ್ಚು ಮಾತನಾಡುವುದಿಲ್ಲ. ನಿಮ್ಮ ಭಕ್ತಿ ವಿಶೇಷವಾದದ್ದು. ಬಡತನ ಹೋಗಲಾಡಿಸಬೇಕೆಂಬುದು ನಮ್ಮ ಗುರಿ. ಗ್ರಾಮೀಣ ಅಭಿವೃದ್ಧಿಯಿಂದ ಮಹಿಳೆಯರಿಗೆ ಶಕ್ತಿ ನೀಡಬೇಕು. ಹಿಂದೂ ಧರ್ಮ ಸನಾತನ ಧರ್ಮ ಉಳಿಯಲಿ ಎಂದು ಆಶಯ ವ್ಯಕ್ತಪಡಿಸಿದರು.
ನೀವೆಲ್ಲ ಬಂದು ಆತ್ಮವಿಶ್ವಾಸ ಹೆಚ್ಚಿಸಿದ್ದೀರಿ. ಪವನ್ ಕಲ್ಯಾಣ್ ಬರುತ್ತಾರೆ ಎಂಬ ವಿಚಾರ ಸಂತೋಷವಾಗಿತ್ತು. ಅವರ ಬಳಿ ಮಾತನಾಡಬೇಕೆಂಬ ಆಸೆ ಇತ್ತು. 21 ಸೀಟುಗಳನ್ನು ಪ್ರಥಮ ಬಾರಿಗೆ ಗೆದ್ದಿದ್ದಾರೆ. ಅಪರೂಪದ ರಾಜಕೀಯ ಸಾಧನೆ ಮಾಡಿದ್ದಾರೆ. ಸಿನಿಮಾ ನಟರಾದರೂ ಕೂಡ ದೇಶದ ಬಗ್ಗೆ ಒಳ್ಳೆಯ ಚಿಂತನೆ ಬಂದಿದ್ದಾರೆ. ಸನಾತನ ಧರ್ಮ ರಕ್ಷಣೆಗೆ ದುಡಿಯುತ್ತಿದ್ದಾರೆ. ಅನೇಕ ವಿಷಯಗಳನ್ನು ತಿಳಿದುಕೊಂಡಿದ್ದಾರೆ. ಮೊದಲನೇ ಚುನಾವಣೆಯಲ್ಲಿ ಗೆದ್ದು ಉಪಮುಖ್ಯಮಂತ್ರಿಯಾಗಿದ್ದಾರೆ. ಅವರನ್ನ ನೋಡುವ ಆಸೆ ಸಹಜವಾಗಿ ಇತ್ತು. ಅವರು ಬರುವ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ. ಅವರ ಕ್ಷೇತ್ರಕ್ಕೆ ಬಂದು ಹೋಗಲಿ. ಧರ್ಮಸ್ಥಳಕ್ಕೆ ಬರ್ತೇನೆ ಅಂದಮೇಲೆ ಅವರು ಬರಲೇಬೇಕು. ಮಾತು ಬಿಡ ಮಂಜುನಾಥ ಎಂಬ ಮಾತಿದೆ. ಅವರು ಸಾಮಾನ್ಯ ಮನುಷ್ಯರಲ್ಲ ಕಾಲ ಪುರುಷ. ಆಂಧ್ರಪ್ರದೇಶದಲ್ಲಿ ಎನ್‌ಟಿಆರ್ ಕೂಡ ಪ್ರಸಿದ್ಧರಾಗಿದ್ದರು. ಅದೇ ರೀತಿ ಇವರು ಕೂಡ ಪ್ರಸಿದ್ಧರಾಗುತ್ತಾರೆ. ಅಂತಹ ಭಾಗ್ಯ ಪವನ್ ಕಲ್ಯಾಣ್ ಅವರಿಗೆ ದೊರಕಲಿ. ದೀಪ ಕತ್ತಲೆಯನ್ನು ಹೋಗಲಾಡಿಸುತ್ತದೆ. ಆಗ ಬೆಳಕು ತನ್ನಷ್ಟಕ್ಕೆ ಬರುತ್ತದೆ ಎಂದು ಹೇಳಿದರು.
ದೀಪಾರಾಧನೆಯಲ್ಲಿ ಧರ್ಮಾಧಿಕಾರಿ ವೀರೇಂದ್ರ ಅವರಿಗೆ ಹೇಮಾವತಿ ಹೆಗ್ಗಡೆ ಸಾಥ್ ನೀಡಿದರು. ಅಮೃತವರ್ಷಿಣಿ ಸಭಾಂಗಣದಲ್ಲಿ ನೂರಾರು ಅಭಿಮಾನಿಗಳು ಸೇರಿದ್ದರು. ಕರ್ನಾಟಕ ಹಾಗೂ ಆಂಧ್ರಪ್ರದೇಶದಿಂದ ಪವನ್ ಕಲ್ಯಾಣ್ ಅಭಿಮಾನಿಗಳು ಬಂದಿದ್ದರು. ಧರ್ಮಸ್ಥಳದೊಂದಿಗೆ ನಾವಿದ್ದೇವೆ ಎಂದು ಜನಸೇನಾ ಕಾರ್ಯಕರ್ತರು ಘೋಷಣೆ ಕೂಗಿದರು.