ಚಿಕ್ಕಮಗಳೂರು: ಮಹಾಶಿವರಾತ್ರಿ (Shivaratri) ಹಬ್ಬಕ್ಕೆ ಒಂದೇ ದಿನ ಉಳಿದಿದ್ದು, ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರ ಮಾರ್ಗವಾಗಿ ಕಳೆದ ಎರಡ್ಮೂರು ದಿನಗಳಿಂದ ನಿತ್ಯ ಸಾವಿರಾರು ಭಕ್ತರು ಪಾದಯಾತ್ರೆ ಮೂಲಕ ಧರ್ಮಸ್ಥಳಕ್ಕೆ (Dharmasthala) ಹೋಗುತ್ತಿದ್ದಾರೆ.
ಬಿಸಿಲಿನಲ್ಲಿ ನಡೆದು-ನಡೆದು ದಣಿದ ಭಕ್ತರಿಗೆ ರಸ್ತೆ ಮಧ್ಯೆ ಮುಸ್ಲಿಂ ಬಾಂಧವರು ಜ್ಯೂಸ್ ಹಾಗೂ ಕಲ್ಲಂಗಡಿ ಹಣ್ಣು ನೀಡಿ ಸೌಹಾರ್ದತೆ ಮೆರೆದಿದ್ದಾರೆ. ಈ ಬಾರಿ ಫೆಬ್ರವರಿ ತಿಂಗಳಲ್ಲೇ ಬಿಸಿಲಿನ ತಾಪ ಹೆಚ್ಚಿರುವುದರಿಂದ ಪಾದಯಾತ್ರಿಗಳು ಅಲ್ಲಲ್ಲಿ ಕೂತು ದಣಿವಾರಿಸಿಕೊಂಡು ಯಾತ್ರೆ ಮುಂದುವರಿಸುತ್ತಿದ್ದಾರೆ.
ರಾಜ್ಯದ ವಿವಿಧ ಭಾಗಗಳಿಂದ ಸುಡು ಬಿಸಿಲನ್ನೂ ಲೆಕ್ಕಿಸದೆ ಬರಿಗಾಲಿನಲ್ಲಿ ತೆರುಳುತ್ತಿರುವ ಪಾದಯಾತ್ರಿಗಳ ನೆರವಿಗೆ ಮುಸ್ಲಿಂ ಬಾಂಧವರು ನಿಂತಿದ್ದಾರೆ. ಮೂಡಿಗೆರೆ ತಾಲೂಕಿನ ಬಿಳುಗುಳ ಸಮೀಪದ ನೂರುಲ್ ಹುದಾ ಜುಮ್ಮ ಮಸೀದಿಯ ಮುಸ್ಲಿಂ ಬಾಂಧವರು ದೂರದೂರುಗಳಿಂದ ಧರ್ಮಸ್ಥಳಕ್ಕೆ ತೆರಳುತ್ತಿರುವ ಮಂಜುನಾಥ ಸ್ವಾಮಿಯ ಭಕ್ತರಿಗೆ ಕಲ್ಲಂಗಡಿ ಹಣ್ಣು, ಪಾನೀಯ, ಮಜ್ಜಿಗೆಗಳನ್ನು ನೀಡಿ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಮೂಡಿಸಿದ್ದಾರೆ.
ಇವರ ಕಾರ್ಯಕ್ಕೆ ಪಾದಯಾತ್ರೆ ತೆರಳುತ್ತಿರುವ ಭಕ್ತರು ಹಾಗೂ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ. ಧರ್ಮಸ್ಥಳಕ್ಕೆ ತೆರಳುತ್ತಿರುವ ಪಾದಯಾತ್ರಿಕರು ಧರ್ಮಸ್ಥಳದಲ್ಲಿ ಶಿವರಾತ್ರಿಯಂದು ಅಹೋರಾತ್ರಿ ಶಿವಪಂಚಾಕ್ಷರಿ ಪಠಣ, ಭಜನೆ, ಪ್ರಾರ್ಥನೆ, ಧ್ಯಾನದೊಂದಿಗೆ ಉಪವಾಸ ಹಾಗೂ ಜಾಗರಣೆ ಮಾಡಿ ಶಿವರಾತ್ರಿಯನ್ನು ಆಚರಿಸಲಿದ್ದಾರೆ.