ಬೆಂಗಳೂರು: ಐಪಿಎಸ್ ಅಧಿಕಾರಿ ಪ್ರಣಬ್ ಮೊಹಂತಿ (Pranab Mohanty) ಕರ್ನಾಟಕದಲ್ಲಿ ಇದ್ದಾರೆ. ಅವರು ಕೇಂದ್ರಕ್ಕೆ ಹೋಗುವ ಮಾತು ಎಲ್ಲಿಂದ ಬಂತು ಎಂದು ಗೃಹ ಸಚಿವ ಪರಮೇಶ್ವರ್ (Parameshwar) ಪ್ರಶ್ನಿಸಿದ್ದಾರೆ.
ಧರ್ಮಸ್ಥಳ ತಲೆ ಬುರುಡೆ ರಹಸ್ಯ ಪ್ರಕರಣಕ್ಕೆ (Dharmasthala Mass Burial Case) ಸಂಬಂಧಿಸಿದಂತೆ ಸರ್ಕಾರ ರಚಿಸಿದ ವಿಶೇಷ ತನಿಖಾ ತಂಡದ (SIT) ಮುಖ್ಯಸ್ಥರಾಗಿರುವ ಪ್ರಣಬ್ ಮೊಂಹತಿ ಅವರು ಕೇಂದ್ರ ಸೇವೆಗೆ ಹೋಗುತ್ತಾರಾ ಎಂದು ಮಾಧ್ಯಮಗಳು ಇಂದು ವಿಧಾನಸೌಧದಲ್ಲಿ ಪರಮೇಶ್ವರ್ ಅವರನ್ನು ಪ್ರಶ್ನಿಸಿದವು. ಇದನ್ನೂ ಓದಿ: ಧರ್ಮಸ್ಥಳ ಕೇಸ್ – ಸುಳ್ಳು ಸುದ್ದಿ ಹರಡಿದವರ ವಿರುದ್ಧ ಕ್ರಮ: ಪರಮೇಶ್ವರ್ ಎಚ್ಚರಿಕೆ
ಈ ಪ್ರಶ್ನೆಗೆ, ಮಾಧ್ಯಮಗಳಿಂದ ಈ ಗೊಂದಲ ಸೃಷ್ಟಿಯಾಗಿದೆ. ಕೇಂದ್ರ ಸೇವೆಗೆ ಅರ್ಹತೆ ಪಡೆದ ಡಿಜಿಪಿಗಳ ಅಧಿಕಾರಿಗಳ ಪಟ್ಟಿಯಲ್ಲಿ ಪ್ರಣಬ್ ಮೊಹಂತಿ ಅರ್ಹತೆ ಪಡೆದಿರುವುದು ಕರ್ನಾಟಕಕ್ಕೆ (Karnataka) ಹೆಮ್ಮೆ. ಕೇಂದ್ರ ಸರ್ಕಾರ ಕೇಂದ್ರ ಸೇವೆಗೆ ಅರ್ಹತೆ ಪಡೆಯುವ ಐಪಿಎಸ್ ಅಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಹಿರಿತನ, ತನಿಖಾ ಸಾಮರ್ಥ್ಯ, ಅನುಭವಗಳನ್ನು ಪರಿಗಣಿಸಿ ಕೇಂದ್ರ ಸರ್ಕಾರ ಈ ಪಟ್ಟಿಗೆ ಇಡೀ ದೇಶದ ಐಪಿಎಸ್ ಅಧಿಕಾರಿಗಳ ಹೆಸರನ್ನು ಸೇರಿಸಿ ಬಿಡುಗಡೆ ಮಾಡುತ್ತದೆ ಎಂದರು.
ಈ ಪಟ್ಟಿಯಲ್ಲಿ ಬಂದಿದೆ ಎಂಬ ಕಾರಣಕ್ಕೆ ತಕ್ಷಣವೇ ಕೇಂದ್ರ ಸರ್ಕಾರ ಹುದ್ದೆ ನೀಡುವುದಿಲ್ಲ. ಕೇಂದ್ರ ಸರ್ಕಾರ ಪ್ರಣಬ್ ಮೊಹಂತಿ ಅವರನ್ನು ಕೇಂದ್ರ ಸೇವೆಗೆ ಕಳುಹಿಸಿಕೊಡಿ ಎಂದು ನಮಗೆ ಪತ್ರ ಬರೆಯಬೇಕು. ಅವರನ್ನು ಕಳುಹಿಸುವುದು ಬಿಡುವುದು ನಮ್ಮ ಆಯ್ಕೆ. ಪಟ್ಟಿಯಲ್ಲಿ ಹೆಸರು ಬಂದ ಮಾತ್ರಕ್ಕೆ ಕಳುಹಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಧರ್ಮಸ್ಥಳ ಕೇಸ್ | ಪಾಯಿಂಟ್ ನಂ.1ರಲ್ಲಿ ಸಿಕ್ಕ ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು; ವಾರಸುದಾರರು ಪತ್ತೆ
ಪ್ರಣಬ್ ಮೊಹಾಂತಿ ಅವರು ರಾಜ್ಯದ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾನಿರ್ದೇಶಕರಾಗಿದ್ದಾರೆ. ಫೇಕ್ ನ್ಯೂಸ್ ಮತ್ತು ಆನ್‌ಲೈನ್ ಬೆಟ್ಟಿಂಗ್‌ಗೆ ಸಂಬಂಧಿಸಿದಂತೆ ಕಾನೂನು ಮಾಡುವ ಸಂಬಂಧ ಇಂದು ಸಭೆ ನಡೆಯಲಿದೆ. ಈ ಸಭೆಯಲ್ಲಿ ಭಾಗಿಯಾಗಲು ಅವರು ವಿಧಾನಸೌಧಕ್ಕೆ ಬಂದಿದ್ದಾರೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ನೇಮಕಾತಿಗಳ ಸಂಪುಟ ಸಮಿತಿ ಸಭೆ ನಡೆಸಿ ವಿವಿಧ ರಾಜ್ಯಗಳಲ್ಲಿ ಕರ್ತವ್ಯದಲ್ಲಿರುವ ಐಪಿಎಸ್ ಅಧಿಕಾರಿಗಳನ್ನು ಕೇಂದ್ರ ಸೇವೆಯ ಅರ್ಹರ ಪಟ್ಟಿಗೆ ಆಯ್ಕೆ ಮಾಡಿತ್ತು. ಎನ್‌ಎಐ, ಸಿಬಿಐ ಸೇರಿ ಕೇಂದ್ರ ಸರ್ಕಾರದ ವಿವಿಧ ತನಿಖಾ ಸಂಸ್ಥೆಗಳ ಮಹಾನಿರ್ದೇಶಕ ಹುದ್ದೆಗೆ ಈ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಬಹುದಾಗಿದೆ. ನೇಮಕಾತಿಗಳ ಸಂಪುಟ ಸಮಿತಿ ಬಿಡುಗಡೆ ಮಾಡಿದ ಒಟ್ಟು 35 ಅಧಿಕಾರಿಗಳ ಪಟ್ಟಿಯಲ್ಲಿ ಕರ್ನಾಟಕದಿಂದ ಮೊಹಾಂತಿ ಮಾತ್ರ ಆಯ್ಕೆಯಾಗಿರುವುದು ವಿಶೇಷ.