ಮಂಗಳೂರು: ಧರ್ಮಸ್ಥಳ ಶವ ಹೂತಿಟ್ಟ (Dharmasthala Mass Burial) ಆರೋಪ ಪ್ರಕರಣಕ್ಕೆ ಸಂಬಂಧಿಸಿ ದೂರುದಾರ ಹೇಳಿದಂತೆ ಉತ್ಖನನದಲ್ಲಿ ಯಾವುದೇ ಕುರುಹು ಸಿಕ್ಕಿಲ್ಲ. ಹೀಗಾಗಿ, ದೂರುದಾರನನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ಎಸ್‌ಐಟಿ (SIT) ಚಿಂತನೆ ನಡೆಸಿದೆ.
16 ಪಾಯಿಂಟ್‌ಗಳಲ್ಲಿ ಉತ್ಖನನ ವೈಫಲ್ಯದ ಬೆನ್ನಲ್ಲೇ ಮಂಪರು ಪರೀಕ್ಷೆಗೆ ಎಸ್‌ಐಟಿ ಮುಂದಾಗಿದೆ. ಮಂಪರು ಪರೀಕ್ಷೆಗೆ ಕೋರ್ಟ್‌ಗೆ ಅರ್ಜಿ ಸಲ್ಲಿಸಲು ಎಸ್‌ಐಟಿ ಚಿಂತನೆ ನಡೆಸಿದೆ. ತನಿಖೆಯ ಮುಂದುವರಿದ ಭಾಗವಾಗಿ ಈ ಕ್ರಮ ಅಗತ್ಯ ಎನ್ನಲಾಗಿದೆ. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ರಹಸ್ಯ – 13ನೇ ಸ್ಥಳದಲ್ಲಿ ಮೂಳೆ ಸಿಗದೇ ಇದ್ರೆ ತನಿಖೆ ಸ್ಥಗಿತ?
ಉತ್ಖನನ ವೈಫಲ್ಯದ ಜೊತೆ ಇತರೆ ತನಿಖೆಗಳ ಆಧಾರದಲ್ಲಿ ಅರ್ಜಿ ಸಲ್ಲಿಕೆಗೆ ಚಿಂತನೆ ನಡೆದಿದೆ. ದೂರುದಾರನ ಪ್ರಾರಂಭಿಕ ಹೇಳಿಕೆ ಹಾಗೂ ನಂತರ ನೀಡಿದ ಹೇಳಿಕೆಗಳಲ್ಲಿ ಗೊಂದಲವಿದೆಯಾ ಎಂದು ಪರಿಶೀಲನೆಗೆ ಮುಂದಾಗಿದೆ.
ಜಾಗಗಳ ಸ್ಥಳ ವಿವರಣೆಗಳಲ್ಲಿ ಸಮಯ, ದಿನಾಂಕ ಮತ್ತು ಭಾಗವಹಿಸಿದವರ ಹೆಸರುಗಳಲ್ಲಿ ಗೊಂದಲವಿದೆಯಾ ಎಂದು ಪರಿಶೀಲಿಸಲಿದೆ. ತನಿಖೆಯಲ್ಲಿ ದೊರೆತ ತಾಂತ್ರಿಕ ಮಾಹಿತಿ, ದಾಖಲೆಗಳು, ದೂರುದಾರ ನೀಡಿದ ಮೌಖಿಕ ಹೇಳಿಕೆಗಳ ನಡುವೆ ಹೊಂದಾಣಿಕೆ ಇಲ್ಲದಿದ್ದರೆ ಅರ್ಜಿ ಸಲ್ಲಿಸಲಿದೆ. ಗೊಂದಲವಿದ್ದರೆ ತನಿಖೆಗೆ ಅಗತ್ಯವಾದ ನಿಖರ ಮಾಹಿತಿಯನ್ನು ಪಡೆಯಲು ಮಂಪರು ಪರೀಕ್ಷೆಗೆ ಅರ್ಜಿ ಸಲ್ಲಿಕೆ ಸಾಧ್ಯತೆ ಇದೆ. ಇದನ್ನೂ ಓದಿ: 6 ಗಂಟೆ ಕಾರ್ಯಾಚರಣೆ – 22 ಅಡಿ ಉದ್ದ, 8 ಅಡಿ ಅಗಲ, 18 ಅಡಿ ಆಳದ ಗುಂಡಿ ತೋಡಿದರೂ ಸಿಗದ ಮೂಳೆ
ಪಾಯಿಂಟ್ ನಂಬರ್ 13ರಲ್ಲಿ ಇಂದೂ ಉತ್ಖನನ ನಡೆಯಲಿದೆ. ಜಿಪಿಅರ್ ಸ್ಕ್ಯಾನ್‌ನಲ್ಲಿ ಪತ್ತೆಯಾಗದೇ ಇದ್ದರೂ ಉತ್ಖನನಕ್ಕೆ ದೂರುದಾರ ಪಟ್ಟು ಹಿಡಿದಿದ್ದಾನೆ. ವಿಚಾರಣೆ ವೇಳೆ ಕೊಟ್ಟ ಹೇಳಿಕೆ ಆಧಾರದಲ್ಲೇ 30 ಜಾಗ ಅಗೆಯಿರಿ ಅಂತ ಒತ್ತಾಯಿಸಿದ್ದಾನೆ. ಈಗಾಗಲೇ ಅಧಿಕೃತ 16 ಪಾಯಿಂಟ್ ಜೊತೆಗೆ ಅಕ್ಕಪಕ್ಕದ ಜಾಗ ಸೇರಿ 20ಕ್ಕೂ ಹೆಚ್ಚು ಕಡೆ ಅಗೆತ ಆಗಿದೆ. ಹೀಗಾಗಿ, 30 ಸ್ಪಾಟ್ ಉತ್ಖನನ ಆಗಲೇಬೇಕು ಅಂತ ಅನಾಮಿಕ ಪಟ್ಟು ಹಿಡಿದಿದ್ದಾನೆ.
ಪಾಯಿಂಟ್ ನಂಬರ್ 13ರಲ್ಲಿ ಉಳಿದ 200 ಮೀ. ಜಾಗದಲ್ಲೂ ಉತ್ಖನನಕ್ಕೆ ಆಗ್ರಹ ಕೇಳಿಬಂದಿದೆ. ಜಿಪಿಆರ್‌ನಲ್ಲಿ ಅವಶೇಷ ಪತ್ತೆಯಾಗದೇ ಇದ್ದರೂ ಉತ್ಖನನಕ್ಕೆ ಪಟ್ಟು ಹಿಡಿದಿದ್ದಾನೆ. ಹೀಗಾಗಿ ಇಂದು ಕೂಡ ಉತ್ಖನನ ನಡೆಯಲಿದೆ. ಈಗ ಅಗೆದಿರುವ ಪ್ರದೇಶಕ್ಕೆ ತಾಗಿಕೊಂಡೇ ಇರುವ ಮತ್ತಷ್ಟು ಜಾಗದಲ್ಲಿ ಉತ್ಖನನ ನಡೆಯಲಿದೆ.
ಇತ್ತ ಪಾಯಿಂಟ್ ನಂಬರ್ 6ರಲ್ಲಿ ಸಿಕ್ಕ ಮೂಳೆಗಳಿಂದ ಎಸ್‌ಐಟಿ ಟೀಂಗೆ ಮತ್ತಷ್ಟು ಸವಾಲಾಗಿದೆ. ಮೂಳೆ ತುಂಡುಗಳ ಆಧಾರವಾಗಿ ಇಡೀ ಕೇಸ್‌ನ್ನು ಮುಂದುವರಿಸಿ ತನಿಖೆ ನಡೆಸುವುದೇ ಕಷ್ಟ. ಫಾರೆನ್ಸಿಕ್ ಹಾಗೂ ಕಾನೂನು ದೃಷ್ಟಿಯಿಂದ ಎಸ್‌ಐಟಿಗೆ ತುಂಬಾ ಸವಾಲಾಗಿದೆ. ಸಂಪೂರ್ಣ ಅಸ್ಥಿಪಂಜರ ಸಿಗದೇ ಸಾವಿನ ಕಾರಣ ಪತ್ತೆ ಹಚ್ಚುವುದು ಬಹಳ ಕಷ್ಟ. ನೇರ ಸಾಕ್ಷ್ಯ ಇಲ್ಲದ ಕಾರಣ ಕೋರ್ಟ್ನಲ್ಲಿ ಪ್ರಕರಣ ನಿಲ್ಲಲು ಹಲವು ಸಾಕ್ಷ್ಯಗಳ ಕೊರತೆ ಇದೆ. ಫಾರೆನ್ಸಿಕ್ ಟೀಂಗೂ ಪಾಯಿಂಟ್ ನಂಬರ್ 6ರ ಮೂಳೆ ರಹಸ್ಯ ಪತ್ತೆ ಕಾರ್ಯ ಸವಾಲಾಗಿ ಪರಿಣಮಿಸಿದೆ. ಇದನ್ನೂ ಓದಿ: ಆ.17ಕ್ಕೆ ಬಿಜೆಪಿಯಿಂದ ಧರ್ಮಸ್ಥಳ ಚಲೋ
ಪಾಯಿಂಟ್ ನಂಬರ್ 13ರ ಮತ್ತೊಂದು ಭಾಗದಲ್ಲಿ ಇಂದು ಉತ್ಖನನ ನಡೆಯಲಿದೆ. ಅದಕ್ಕಾಗಿ ಎಲ್ಲ ತಯಾರಿ ನಡೆದಿದೆ. ಎಸ್‌ಐಟಿ ಹಾಗೂ ಉತ್ಖನನ ತಂಡಕ್ಕೆ ಕುಳಿತುಕೊಳ್ಳಲು ಚೇರು, ಶಾಮಿಯಾನ ಹಾಕಲಾಗಿದೆ. ಗ್ರಾಮ ಪಂಚಾಯಿತಿಯು ಸ್ಥಳದಲ್ಲಿ ದೊಡ್ಡ ಹಿಟಾಚಿ ತಂದು ಇರಿಸಿದೆ.