ಬೆಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ (Dharmasthala Mass Burial Case) ಸಂಬಂಧಿಸಿದಂತೆ ಅನಾಮಿಕನ (Mask Man) ಹಿಂದಿರುವ ವ್ಯಕ್ತಿಗಳಿಗೆ ವಿಶೇಷ ತನಿಖಾ ತಂಡ (SIT) ನೋಟಿಸ್ ನೀಡಲು ಸಿದ್ಧತೆ ನಡೆಸಿದೆ.
ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತಿಟ್ಟ ನಿಗೂಢ ಪ್ರಕರಣ ತನಿಖೆಗೆ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿ ತನಿಖೆ ನಡೆಸಿತ್ತು. 15 ದಿನಗಳ ಕಾಲ ಭಾರೀ ಮಳೆಯ ನಡುವೆಯೂ 17 ಪಾಯಿಂಟ್‌ಗಳಲ್ಲಿ ಉತ್ಖನನ ನಡೆಸಿದರೂ ಅನಾಮಿಕ ಮಾಸ್ಕ್ ಮ್ಯಾನ್ ಹೇಳಿದ್ದ ಪಾಯಿಂಟ್ 6 ಬಿಟ್ಟು ಬೇರೆ ಕಡೆ ಮೂಳೆಗಳು ಹೂತಿದ್ದ ಮೂಳೆಗಳು ಸಿಕ್ಕಿಲ್ಲ. ಇದನ್ನೂ ಓದಿ: ಬುರುಡೆ ಕೇಸ್ ಹಿಂದೆ ಕೈ ಸಂಸದ ಶಶಿಕಾಂತ್ ಸೆಂಥಿಲ್ ಇದ್ದಾರೆ: ಯಶ್‌ಪಾಲ್ ಸುವರ್ಣ
ಮೂಳೆಗಳು ಸಿಗದ ಕಾರಣ ಉತ್ಖನನ ಕಾರ್ಯವನ್ನು ತಾತ್ಕಾಲಿಕವಾಗಿ ಅಂತ್ಯಗೊಳಿಸಿದೆ. ಅನಾಮಿಕ ವ್ಯಕ್ತಿ ಇನ್ನೂ 13 ಪಾಯಿಂಟ್ ತೋರಿಸುತ್ತೇನೆ. ಅಲ್ಲೂ ಉತ್ಖನನ ಮಾಡಿ ಎಂದು ಒತ್ತಾಯಿಸಿದರೂ ಅಧಿಕಾರಿಗಳು ಆತನನ್ನೇ ಎಸ್‌ಐಟಿ ಕಚೇರಿಯಲ್ಲಿ ಕೂರಿಸಿ 4 ಗಂಟೆಗಳ ಕಾಲ ಗ್ರಿಲ್ ನಡೆಸಿದ್ದಾರೆ.
ಇಷ್ಟು ಬುರುಡೆ ಕಥೆ ಹೇಳಿರುವ ಅನಾಮಿಕನ ಬಾಯಿ ಬಿಡಿಸುವ ಪ್ರಯತ್ನ ನಡೆಸಿದ್ದಾರೆ. ಆತ ನೀಡಿರುವ ದೂರು ಸುಳ್ಳು ಅನ್ನೋ ನಿರ್ಧಾರಕ್ಕೆ ಬಂದ ಎಸ್‌ಐಟಿ ಅಧಿಕಾರಿಗಳು ಆತನನ್ನೇ ವಶಕ್ಕೆ ಪಡೆದು ವಿಚಾರಣೆ ನಡೆಸಲು ಪ್ಲಾನ್ ಮಾಡಿದ್ದಾರೆ. ಆತನ ಹಿಂದೆ ಯಾರೋ ಇದ್ದು ಇದನ್ನೆಲ್ಲ ಮಾಡಿಸಿದ್ದಾರೆ ಎಂಬ ಅನುಮಾನ ಬಂದಿದ್ದು ಹಲವು ವ್ಯಕ್ತಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಿದ್ದಾರೆ.
ಈ ನಡುವೆ ಅನಾಮಿಕ ವ್ಯಕ್ತಿ ಆರಂಭದಲ್ಲಿ ನ್ಯಾಯಾಲಯಕ್ಕೆ ಹಾಜರುಡಿಸಿದ ತಲೆ ಬುರುಡೆಯ ತನಿಖೆಯನ್ನೂ ಅಧಿಕಾರಿಗಳು ಮುಂದುವರಿಸಿದ್ದಾರೆ. ಈ ತಲೆ ಬುರುಡೆ ಪುರುಷನದ್ದು ಅನ್ನೋದು ತನಿಖೆ ವೇಳೆ ಬಹಿರಂಗಗೊಂಡಿದ್ದು ಈಗ ಆ ತಲೆ ಬುರುಡೆಯ ಮಹಜರು ನಡೆಸಲು ಎಸ್‌ಐಟಿ ತಯಾರಿ ನಡೆಸಿದೆ.