ಬೆಂಗಳೂರು: ಬುರುಡೆ ಗ್ಯಾಂಗ್ ಸದಸ್ಯರ ವಿರುದ್ಧ ಚಿನ್ನಯ್ಯ (Chinnayya) ದೂರು ನೀಡಿದ ಬೆನ್ನಲ್ಲೇ ಜಯಂತ್ ಟಿ (Jayanth T) ಚಿನ್ನಯ್ಯನಿಗೆ ಗನ್‌ಮ್ಯಾನ್ (Gunman) ನೀಡುವಂತೆ ಸಿಎಂ ಸಿದ್ದರಾಮಯ್ಯನವರಲ್ಲಿ (CM Siddaramaiah) ಮಾನವಿ ಮಾಡಿದ್ದಾರೆ.
ವಿಶೇಷ ತನಿಖಾ ತಂಡ (SIT) ಸಲ್ಲಿಸಿದ್ದ ಪ್ರಾಥಮಿಕ ತನಿಖಾ ವರದಿಯಲ್ಲಿ ಆರನೇ ಆರೋಪಿಯಾಗಿರುವ ಜಯಂತ್‌ಗೆ ಚಿನ್ನಯ್ಯನನ್ನು ಬಳಸಿಕೊಂಡು ದೊಡ್ಡ ಪಿತೂರಿ ನಡೆಯತ್ತಿದೆ. ಹೀಗಾಗಿ ಚಿನ್ನಯ್ಯನಿಗೆ ಕೂಡಲೇ ಗನ್ ಮ್ಯಾನ್ ಒದಗಿಸಬೇಕು ಮತ್ತು ಆತನ ಕುಟುಂಬಕ್ಕೂ ಸೂಕ್ತ ಬಂದೋಬಸ್ತ್ ಕಲ್ಪಿಸಬೇಕೆಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಸಮೀರ್, ತಿಮರೋಡಿ, ಮಟ್ಟಣ್ಣನವರ್ ವಿರುದ್ಧ ಚಿನ್ನಯ್ಯ ದೂರು
ಮನವಿಯಲ್ಲಿ ಏನಿದೆ?
ಚಿನ್ನಯ್ಯ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯದಿಂದ ಜಾಮೀನು ಪಡೆದು ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾಗಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಆಗಮಿಸಿ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟನವರ್, ಜಯಂತ್ ಟಿ, ವಿಠಲ್ ಗೌಡ ಹಾಗೂ ಸಮೀರ್ ಎಂ ಡಿ ಇವರಿಂದ ಜೀವ ಬೆದರಿಕೆಯಿದೆ. ಅದುದರಿಂದ ನನಗೆ ಸೂಕ್ತ ರಕ್ಷಣೆ ನೀಡಬೇಕೆಂದು ದೂರಿನ ಮುಖಾಂತರ ಮನವಿ ಮಾಡಿಕೊಂಡಿರುವ ವಿಚಾರ ಮಾಧ್ಯಮದ ಮೂಲಕ ಗೊತ್ತಾಯಿತು. ಇದನ್ನೂ ಓದಿ: ಧರ್ಮಸ್ಥಳ ಕೇಸ್- ತಿಮರೋಡಿ, ಮಟ್ಟಣ್ಣನವರ್, ಜಯಂತ್, ವಿಠಲ ಗೌಡ, ಜಯಂತ್ ಪಾತ್ರ ಏನು?
ಚಿನ್ನಯ್ಯನಿಗೆ ಯಾರಿಂದಲಾದರೂ ಅಪಾಯ ಉಂಟು ಮಾಡಿ, ಅದನ್ನು ಹೋರಾಟಗಾರರಾದ ನಮ್ಮ ಮೇಲೆ ಹಾಕಿ, ಆ ಮೂಲಕ ಅನ್ಯಾಯವಾಗಿ ನಮ್ಮನ್ನು ಜೈಲಲ್ಲಿ ಇರಿಸಿ ಸಾಕ್ಷಿ ನಾಶ ಮಾಡಲು ಹಾಗೂ ಪ್ರಕರಣದ ತನಿಖೆಯನ್ನು ಬೇರೆ ದಿಕ್ಕಿಗೆ ತಿರುಗಿಸಲು, ದೊಡ್ಡ ಮಟ್ಟದಲ್ಲಿ ಪಿತೂರಿ ನಡೆಯುತ್ತಿರುವುದರಿಂದ ದೂರುದಾರ ಚಿನ್ನಯ್ಯ ನೀಡಿರುವ ದೂರಿನ ಉದ್ದೇಶ ಹಾಗೂ ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು.ಹಾಗೆಯೇ ದೂರು ನೀಡಲು ಇವರಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಒತ್ತಡ ಹಾಕಿ ಅಪರಾಧಿಕ ಪಿತೂರಿ ನಡೆಸಿದವರ ಬಗ್ಗೆ ತನಿಖೆ ನಡೆಸಬೇಕೆಂದು ಈ ಮೂಲಕ ಮನವಿ ಮಾಡುತ್ತಿದ್ದೇನೆ.

