– ಬೆಂಗಳೂರಲ್ಲಿ ವಿಶೇಷ ಪೂಜೆ
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ನೀರಿನ ಅಭಾವ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ನೀರಿನ ವ್ಯವಸ್ಥೆ ಮಾಡಿಕೊಟ್ಟಿದ್ದಕ್ಕೆ ಬಿಬಿಎಂಪಿಗೆ ಧರ್ಮಾದಿಕಾರಿ ವೀರೇಂದ್ರ ಹೆಗ್ಗಡೆ ಧನ್ಯವಾದ ತಿಳಿಸಿದ್ದಾರೆ.
ಈ ಬಗ್ಗೆ ಬಿಬಿಎಂಪಿ ಮೇಯರ್ ಗಂಗಾಂಬಿಕೆ ಹಾಗೂ ಆಯುಕ್ತ ಮಂಜುನಾಥ್ ಪ್ರಸಾದ್ ಗೆ ಪತ್ರ ಬರೆದಿರುವ ಹೆಗ್ಗಡೆ, ಕುಡಿಯುವ ನೀರನ್ನು ಪೂರೈಸಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಮಂಗಳವಾರ 75 ಸಾವಿರ ಲೀಟರ್ ನೀರು ಬಿಬಿಎಂಪಿ ನೌಕರರ ಸಂಘ ಧರ್ಮಸ್ಥಳಕ್ಕೆ ಕಳುಹಿಸಿತ್ತು. ಹೀಗಾಗಿ ನೀರಿನ ಸಮಸ್ಯೆಗೆ ಸ್ಪಂದಿಸಿದಕ್ಕೆ ಧರ್ಮಾಧಿಕಾರಿ ಧನ್ಯವಾದ ತಿಳಿಸಿದ್ದಾರೆ. ನೀರಿನ ಸಮಸ್ಯೆಗೆ ತಕ್ಷಣ ಸ್ಪಂದಿಸಿದ್ದೀರಿ. ಇದಕ್ಕೆ ನಾನು ಆಭಾರಿಯಾಗಿದ್ದೇನೆ ಎಂದಿದ್ದಾರೆ. ಅಲ್ಲದೆ ಸಮಾಜ ಸೇವೆ ಮಾಡಿದ ನಿಮಗೆ ಮಂಜುನಾಥ ಸ್ವಾಮಿ ಒಳ್ಳೆಯದನ್ನ ಮಾಡಲಿ ಎಂದು ಹರಸಿದ್ದಾರೆ.
Advertisement
Advertisement
ಪತ್ರದಲ್ಲೇನಿದೆ?
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನೀರಿನ ಅಭಾವವಿದೆ ಎಂದು ತಿಳಿದ ತಕ್ಷಣ ಸ್ಪಂದಿಸಿ ತಮ್ಮ ಕೈಲಾದಷ್ಟು ನೀರನ್ನು ಸಂಗ್ರಹಿಸಿ ದೂರದ ಊರುಗಳಿಂದ ವಾಹನ ಮುಖಾಂತರ ತಂದು ಭಗವಾನ್ ಶ್ರೀ ಮುಂಜುನಾಥ ಸ್ವಾಮಿಯ ಸನ್ನಿಧಿಗೆ ತಲುಪಿಸಿ ಇಲ್ಲಿ ಬರುವ ಭಕ್ತರಿಗೆ ನೀರಿನ ಕೊರತೆ ಆಗಬಾರದೆಂಬ ಉದ್ದೇಶ ಇಟ್ಟುಕೊಂಡು ಸೇವೆ ಮಾಡಿರುವ ನಿಮಗೆಲ್ಲರಿಗೂ ಶ್ರೀ ಮಂಜುನಾಥ ಸ್ವಾಮಿಯು ಹರಸಲೆಂದು ಪ್ರಾರ್ಥಿಸುವುದಾಗಿ ಬರೆದು ಬಿಬಿಎಂಪಿಗೆ ಕಳುಹಿಸಿದ್ದಾರೆ.
Advertisement
ವಿಶೇಷ ಪೂಜೆ:
ಧರ್ಮಸ್ಥಳದಲ್ಲಿ ನೀರಿನ ಅಭಾವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ವಿಶೇಷ ಪೂಜೆ ನಡೆಸಲಾಗುತ್ತಿದೆ. ಬಸವನಗುಡಿ ದೊಡ್ಡ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಕೈಗೊಂಡಿದ್ದು, ಗಣಪತಿಗೆ ಕ್ಷೀರ ಅಭಿಷೇಕ ಹಾಗೂ ವಿಷ್ಣು ಸಹಸ್ರನಾಮ ಪಠಣೆ ಮಾಡಲಾಗುತ್ತಿದೆ. ವರುಣನ ಕೃಪೆ ಸಿಗಲಿ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಹಾಗೂ ಅಖಿಲ ಕರ್ನಾಟಕ ಮದ್ವ ಮಹಾಸಭಾ ವತಿಯಿಂದ ಈ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ.
Advertisement
ಮಂಜುನಾಥನ ದರ್ಶನ ಮುಂದೂಡಿ:
4 ದಿನಗಳ ಹಿಂದೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದ ಹೆಗ್ಗಡೆಯವರು, ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕೂಡ ನೀರಿನ ಅಭಾವ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನೇತ್ರಾವತಿ ನದಿಯಲ್ಲಿ ನೀರಿನ ಹರಿವು ತೀವ್ರ ರೀತಿಯಲ್ಲಿ ಕಡಿಮೆಯಾಗುತ್ತಿದೆ. ಧರ್ಮಸ್ಥಳಕ್ಕೆ ಬರುವ ಯಾತ್ರಾರ್ಥಿಗಳ ಉಪಯೋಗಕ್ಕೆ ಅಧಿಕ ಪ್ರಮಾಣದ ನೀರು ಬೇಕಾಗುತ್ತದೆ. ಆದ್ದರಿಂದ ಭಕ್ತಾದಿಗಳು ಹಾಗೂ ಪ್ರವಾಸಿಗರು ತಮ್ಮ ಪ್ರವಾಸವನ್ನು ಕೆಲವು ದಿನಗಳ ಕಾಲ ಮುಂದೂಡಿ ಸಹಕರಿಸುವಂತೆ ಪ್ರಕಟಣೆಯಲ್ಲಿ ಮನವಿ ಮಾಡಿದ್ದರು.
ಈ ವಿಚಾರ ಸುದ್ದಿಯಾದ ಬೆನ್ನಲ್ಲೇ ಮತ್ತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 15 ದಿನ ಮಳೆ ಬರದಿದ್ದರೆ ಮಂಜುನಾಥನ ಅಭಿಷೇಕಕ್ಕೂ ನೀರಿಲ್ಲ. ಈಗ ಅಭಿಷೇಕಕ್ಕೆ ನೇತ್ರಾವತಿಯಲ್ಲಿ ತಾತ್ಕಲಿಕವಾಗಿ ನೀರಿದೆ ತಮ್ಮ ಕಳವಳವನ್ನು ಹೊರಹಾಕಿದ್ದರು.