ಹಾಸನ: ಹಣ ಪಡೆದು ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಿದ್ದಾನೆ ಎಂಬ ಯೂಟ್ಯೂಬರ್ ಸುಮಂತ್ ವಿರುದ್ಧ ಮತ್ತೋರ್ವ ಯೂಟ್ಯೂಬರ್ ಅಭಿಷೇಕ್ (Youtuber Abhishek) ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮಾನನಷ್ಟ ಮೊಕದ್ದಮೆ ಹೂಡುವುದಾಗಿ ತಿಳಿಸಿದ್ದಾರೆ.
ಸುಮಂತ್ ನನ್ನ ವಿರುದ್ಧ ಮಾಡಿರುವ ಆರೋಪಗಳೆಲ್ಲಾ ಸುಳ್ಳು. ನಾನು ಹಣ ಪಡೆದಿರುವುದನ್ನು ಸುಮಂತ್ ಸಾಬೀತುಪಡಿಸುವಂತೆ ಅಭಿಷೇಕ್ ಸವಾಲು ಹಾಕಿದ್ದಾರೆ. ಇದನ್ನೂ ಓದಿ: ನನ್ನ ಮಗ ದೋಷಮುಕ್ತನಾಗಿ ಬರುತ್ತಾನೆಂಬ ನಂಬಿಕೆ ಇದೆ: ಯೂಟ್ಯೂಬರ್ ಅಭಿಷೇಕ್ ತಾಯಿ ಮಾತು
ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣ ಹಾಗೂ ಅಪಪ್ರಚಾರದ ವಿಚಾರದಲ್ಲಿ ಹಾಸನ ಜಿಲ್ಲೆ, ಚನ್ನರಾಯಪಟ್ಟಣದ ಅಂಬೇಡ್ಕರ್ ನಗರದ ನಿವಾಸಿ ಅಭಿಷೇಕ್ ಈಗಾಗಲೇ ಎಸ್‌ಐಟಿ ತನಿಖೆಗೆ ಒಳಪಟ್ಟಿದ್ದಾರೆ. ಇದೇ ವೇಳೆ ಯೂಟ್ಯೂಬರ್ ಸುಮಂತ್, ಕೆಲವರಿಂದ ಹಣ ಪಡೆದು ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಿದ್ದಾನೆ ಎಂದು ಅಭಿಷೇಕ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಎಸ್‌ಐಟಿ ತನಿಖೆ ಎದುರಿಸಿ ಬಂದಿರುವ ಅಭಿಷೇಕ್ ನಾಲ್ಕು ಆರೋಪಗಳನ್ನು ಪಟ್ಟಿ ಮಾಡಿ ತನ್ನ ತಂದೆ ಜೊತೆ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ. ಆದರೆ, ಇದು ಮಾನನಷ್ಟ ಮೊಕದ್ದಮೆ ಆಗಿರುವುದರಿಂದ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡುವಂತೆ ಪೊಲೀಸರು ವಾಪಸ್ ಕಳುಹಿಸಿದ್ದಾರೆ. ಇದೇ ವೇಳೆ ಅಭಿಷೇಕ್ ಮಾಧ್ಯಮಗಳಿಗೆ ಹೇಳಿಕೆ ನೀಡುವಾಗ ಸ್ಥಳದಲ್ಲಿದ್ದ ಕೆಲವರು, ಇವನು ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಿದ್ದಾನೆ. ಇಂತಹವನ ಹಿಂದೆ ನಿಲ್ಲಬೇಡಿ. ಅವನಿಗೆ ಬೆಂಬಲ ಕೊಟ್ಟಂತೆ ಆಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತನ್ನ ವಿರುದ್ಧ ಸುಮಂತ್ ಸುಳ್ಳು ಆರೋಪ ಮಾಡಿದ್ದು, ನನ್ನ ಗೌರವಕ್ಕೆ ಧಕ್ಕೆ ಆಗಿದೆ. ನಾನು ಯಾರಿಂದಲೂ ಹಣ ಪಡೆದಿಲ್ಲ. ನಾನು ಹಣ ಪಡೆದಿದ್ದರೆ ನನ್ನ ಮೇಲೆ ದೂರು ದಾಖಲಿಸಿಕೊಂಡು ತನಿಖೆ ನಡೆಸಲಿ. ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಘಟನೆಗಳ ಬಗ್ಗೆ ವಿಡಿಯೋ ಮಾಡಲು ಹೋಗಿದ್ದೆ ಹೊರತು ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಲು ಹೋಗಿರಲಿಲ್ಲ. ಕಳೆದ ಮಾರ್ಚ್ ತಿಂಗಳಿನಿಂದಲೇ ಧರ್ಮಸ್ಥಳದಲ್ಲಿ ಶವಗಳನ್ನು ಹೂತಿದ್ದಾರೆ ಎಂಬ ಬಗ್ಗೆ ವಿಡಿಯೋ ಮಾಡಿ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದೆ. ನನಗೆ ಯಾರು ಕ್ಯಾಮೆರಾ ಕೊಡಿಸಿಲ್ಲ. ಧರ್ಮಸ್ಥಳಕ್ಕೆ ಹೋದಾಗ ಮಹೇಶ್ ತಿಮರೋಡಿ ಪರಿಚಯ ಆಯ್ತು. ಉಳಿದುಕೊಳ್ಳಲು ವ್ಯವಸ್ಥೆ ಮಾಡಿ ಎಂದು ಕೇಳಿದ್ದಕ್ಕೆ ಅವರ ಸಂಬಂಧಿಕರ ಮನೆಯಲ್ಲಿಯೇ ಉಳಿದುಕೊಳ್ಳಲು ಸಹಾಯ ಮಾಡಿದ್ದರು. ಎಸ್‌ಐಟಿ ತನಿಖೆ ಎದುರಿಸಿದ್ದೇನೆ. ವಿಡಿಯೋ ಮಾಡಿ ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಲು ಬಳಸಿದ್ದ ವಸ್ತುಗಳನ್ನು ಎಸ್‌ಐಟಿ ಅವರು ವಶಕ್ಕೆ ಪಡೆದಿದ್ದಾರೆ. ಧರ್ಮಸ್ಥಳದಲ್ಲಿ ಏನು ಸಿಕ್ಕೇ ಇಲ್ಲಾ ಅಂತಿದ್ದಾರೆ. ಎಸ್‌ಐಟಿ ತನಿಖೆಯಿಂದ ಸತ್ಯಾಂಶ ಬರುತ್ತೆ. ಎಸ್‌ಐಟಿ ಮತ್ತೆ ತನಿಖೆಗೆ ಕರೆದರೆ ಹೋಗುತ್ತೇನೆ ಎಂದು ತನ್ನ ವಿರುದ್ಧದ ಆರೋಪಕ್ಕೆ ಅಭಿಷೇಕ್ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ, ಯಾರೂ ಹಣದ ಆಮಿಷ ಒಡ್ಡಿಲ್ಲ: ಯೂಟ್ಯೂಬರ್ ಅಭಿಷೇಕ್ ತಂದೆ

