ಮಂಗಳೂರು: ಧರ್ಮಸ್ಥಳದ (Dharmasthala Case) ಗ್ರಾಮದಲ್ಲಿ ಶವ ಹೂತಿಟ್ಟ ಪ್ರಕರಣದ ತನಿಖೆ ಮುಂದುವರಿದೆ. ಪ್ರಕರಣದ ಸೂತ್ರಧಾರಿಗಳು ಎನ್ನಲಾದ ಹಲವರನ್ನ ಇಂದು ಮತ್ತೆ ವಿಚಾರಣೆಗೆ ಎಸ್ಐಟಿ (SIT) ಬೆಳ್ತಂಗಡಿ ಕಚೇರಿಗೆ ಕರೆಸಿಕೊಂಡಿದೆ. ಜಯಂತ್.ಟಿ. ಅವರ ಪತ್ನಿ ಮಕ್ಕಳು ಹಾಗೂ ಯೂಟ್ಯೂಬರ್‌ಗಳನ್ನ ಎಸ್ಐಟಿ ಮತ್ತೆ ವಿಚಾರಣೆ ನಡೆಸಿದೆ.
ಧರ್ಮಸ್ಥಳ ಬುರುಡೆ ಪ್ರಕರಣದ ತನಿಖೆ ಮುಂದುವರಿಸಿದ ಎಸ್ಐಟಿ ಇಂದು ಹಲವರನ್ನು ವಿಚಾರಣೆ ನಡೆಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ವ್ಯಕ್ತಿ ಎಂದು ಹೇಳಲಾಗುತ್ತಿರುವ ಜಯಂತ್ ಟಿ ಅವರ ಪತ್ನಿ, ಮಗ ಮತ್ತು ಮಗಳಿಗೆ ವಿಚಾರಣೆಗೆ ಹಾಜರಾಗುವಂತೆ SIT ಬುಲಾವ್ ನೀಡಿತ್ತು. ಹೀಗಾಗಿ, ಜಯಂತ್ ಟಿ ಪತ್ನಿ ಸೈಮಾ, ಮಗ ಜೀವನ್, ಮಗಳು ಜಿಷ್ಣಾ ಬೆಳ್ತಂಗಡಿ SIT ಕಚೇರಿಗೆ ಹಾಜರಾಗಿದ್ದಾರೆ. ವಿಚಾರಣೆಗೆ ಹಾಜರಾದ ಕುಟುಂಬದವರ ಜೊತೆ ಯೂಟ್ಯೂಬರ್ ಸಂಚಾರಿ ಸ್ಟುಡಿಯೋ ಸಂತೋಷ್ ಕೂಡ ಆಗಮಿಸಿದ್ದಾರೆ. ಜಯಂತ್ ಟಿ ಅವರ ಕುಟುಂಬ ಸದಸ್ಯರಿಂದ SIT ಅಧಿಕಾರಿಗಳು ಮಹತ್ವದ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದು, ಮೊಬೈಲ್ ಪರಿಶೀಲನೆ ನಡೆಸಿದ್ದಾರೆ. ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಬುರುಡೆ ಗ್ಯಾಂಗ್‌ನ ಅಸಲಿಯತ್ತು ಬಯಲು – ಚಿನ್ನಯ್ಯ ಕೋರ್ಟ್‌ಗೆ ತಂದಿದ್ದ ಬುರುಡೆ ಪುರುಷನದ್ದು!
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋಗಳನ್ನು ಮಾಡಿ ವೈರಲ್ ಮಾಡಿದ್ದ ಯೂಟ್ಯೂಬರ್‌ಗಳ ಸುತ್ತ SIT ತನಿಖೆಯ ಬಲೆ ಬಿಗಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಳು ಮಾಹಿತಿ ಮತ್ತು ಪ್ರಚೋದನಕಾರಿ ವೀಡಿಯೋಗಳನ್ನು ಪ್ರಸಾರ ಮಾಡಿದ ಆರೋಪದ ಮೇಲೆ ಐದಕ್ಕೂ ಹೆಚ್ಚು ಯೂಟ್ಯೂಬರ್‌ಗಳಿಗೆ SIT ನೋಟಿಸ್ ಜಾರಿ ಮಾಡಿದೆ. ವಿವಾದಾತ್ಮಕ ಯೂಟ್ಯೂಬರ್ ಸಮೀರ್ ಎಂ.ಡಿ. ಸೇರಿದಂತೆ ಹಲವು ಯೂಟ್ಯೂಬರ್‌ಗಳು SIT ಕಚೇರಿಗೆ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ. ಸದ್ಯ ಯೂಟ್ಯೂಬರ್ ಸಂಚಾರಿ ಸ್ಟುಡಿಯೋ ಸಂತೋಷ್ SIT ವಿಚಾರಣೆಗೆ ಹಾಜರಾಗಿದ್ದು, ಅವರ ಹೇಳಿಕೆಗಳನ್ನು ಅಧಿಕಾರಿಗಳು ಪಡೆದಿದ್ದಾರೆ. ಯೂಟ್ಯೂಬರ್‌ಗಳಿಗೆ ಅವರ ವಿಡಿಯೋಗಳ ಹಿಂದಿನ ಉದ್ದೇಶ, ಚಿನ್ನಯ್ಯನ ಸಂದರ್ಶನದ ಸತ್ಯಾಸತ್ಯತೆ. ಹಣಕಾಸಿನ ಮೂಲ ಮತ್ತು ಪ್ರಕರಣದ ಬಗ್ಗೆ ಮಾಹಿತಿ ನೀಡಿದವರಾರು ಎಂಬ ಕುರಿತು SIT ಅಧಿಕಾರಿಗಳು ಪ್ರಶ್ನೆಗಳನ್ನ ಕೇಳಿದ್ದಾರೆ.
ಬಂಧಿತ ಆರೋಪಿ ಚೆನ್ನಯ್ಯನ ಹೇಳಿಕೆ ಆಧಾರದ ಮೇಲೆಯೇ SIT ತನಿಖೆ ನಡೆಯುತ್ತಿದೆ. ಆತನ ಹೇಳಿಕೆಯನ್ನು ದೃಢಪಡಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಹಿಂದೆ ಶವ ಹೂಳುವ ವಿಚಾರದಲ್ಲಿ ಅಕ್ರಮ ನಡೆದಿದೆಯೇ ಎಂಬ ಅನುಮಾನದ ಹಿನ್ನೆಲೆಯಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯತ್‌ನ ಪಿಡಿಒ ಹಾಗೂ ಸಿಬ್ಬಂದಿ ಕೂಡ SIT ಕಚೇರಿಗೆ ಸಾಕಷ್ಟು ಬಾರಿ ವಿಚಾರಣೆಗೆ ಹಾಜರಾಗಿದ್ದಾರೆ. ಪಂಚಾಯತ್ ದಾಖಲೆಗಳ ಮೂಲಕ ಶವ ದಫನ ಪ್ರಕ್ರಿಯೆಯಲ್ಲಿ ಅಕ್ರಮವಾಗಿದೆಯೇ ಎಂದು SIT ತಂಡ ಕೂಲಂಕಷವಾಗಿ ಪರಿಶೀಲಿಸಲಿದೆ. ಇದನ್ನೂ ಓದಿ: ಧರ್ಮಸ್ಥಳ ಪ್ರಕರಣಗಳ ತನಿಖೆ ಆದಷ್ಟು ಬೇಗ ಮುಕ್ತಾಯ: ಪರಮೇಶ್ವರ್